ಮನುಷ್ಯನಾಗಿ ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಸಾಯಬೇಕು, ಆದರೆ ಕೆಲವರಿಗೆ ಸಾವು ಒಂದು ಭಯ ಹುಟ್ಟಿಸುವ ಪದವಾಗಿದೆ. ಈ ಸಾವಿನ ಭಯವನ್ನು ಹೋಗಲಾಡಿಸಲು ಅತ್ಯಂತ ಪ್ರಭಾವಿ ಮಂತ್ರವಿದ್ದು ಅದನ್ನು ಜಪಿಸಿದರೇ ದೀರ್ಘಾಯುಷ್ಯ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯಿದೆ. ಹಿಂದೂ ಧರ್ಮದಲ್ಲಿ ಪೂಜೆಗೆ ಕೊಡುವಷ್ಟೇ ಮಹತ್ವವನ್ನು ಮಂತ್ರಗಳಿಗೂ ನೀಡಲಾಗಿದೆ. ಪ್ರತಿಯೊಂದು ದೇವರಿಗೂ ಅವರದ್ದೇ ಆದ ಮಂತ್ರಗಳಿವೆ. ಆಯಾ ದೇವರಿಗೆ ಸಮರ್ಪಿತವಾದ ಮಂತ್ರವನ್ನು ಪಠಿಸುವುದರಿಂದ ನಾವು ಆ ದೇವರ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ಇಂತಹ ಮಂತ್ರಗಳಲ್ಲಿ ಶಿವನಿಗೆ ಸಮರ್ಪಿತವಾದ ಮಹಾಮೃತ್ಯುಂಜಯ ಮಂತ್ರವೂ ಒಂದಾಗಿದೆ
ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯು ಭಯದಿಂದ, ರೋಗದಿಂದ ಹಾಗೂ ಅಕಾಲಿಕ ಮರಣದ ಭಯದಿಂದ ಮುಕ್ತನಾಗುತ್ತಾನೆ ಎನ್ನಲಾಗುತ್ತದೆ. ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವ ಮೂಲಕ ವ್ಯಕ್ತಿಯು ತನ್ನ ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾನೆ ಎಂದು ನಂಬಲಾಗಿದೆ. ಈ ಮಂತ್ರದ ಇನ್ನೊಂದು ವಿಶೇಷತೆಯೇನೆಂದರೆ, ಇದನ್ನು ಮಹರ್ಷಿ ಮಾರ್ಕಂಡೇಯರು ರಚಿಸಿದ್ದಾರೆ. ಈ ಮಂತ್ರದ ವಿಶೇಷತೆಗಳ ಕುರಿತು ಮಾಹಿತಿ ಹೀಗಿದೆ..
'ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್
ಊರ್ವರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್'
ಮಹಾಮೃತ್ಯುಂಜಯ ಮಂತ್ರದ ಅರ್ಥ:
ನಾವು ಮೂರು ಕಣ್ಣುಗಳುಳ್ಳ ಶಿವನನ್ನು ಆರಾಧಿಸುತ್ತೇವೆ. ಭಗವಾನ್ ಶಂಕರನು ದಯಪಾಲಕ ಮತ್ತು ನಮ್ಮನ್ನು ಪೋಷಿಸುತ್ತಾನೆ. ಫಲವು ಸಿಪ್ಪೆಯೆನ್ನುವ ಬಂಧನದಿಂದ ಮುಕ್ತವಾದಂತೆ, ನಾವು ಸಹ ಮರಣ ಮತ್ತು ಅಶಾಶ್ವತತೆಯಿಂದ ಮುಕ್ತರಾಗೋಣ ಎಂಬುದಾಗಿದೆ.
ಶಾಸ್ತ್ರಗಳ ಪ್ರಕಾರ, ಒಂದಾನೊಂದು ಕಾಲದಲ್ಲಿ ಮೃಕಂಡ ಎಂಬ ಋಷಿ ಇದ್ದ. ಆ ಋಷಿಗೆ ಪುತ್ರ ಸಂತಾನ ಭಾಗ್ಯವಿರಲಿಲ್ಲ. ಅವನು ಶಿವನನ್ನು ಸಂತೋಷಪಡಿಸಿ, ಪುತ್ರ ಸಂತಾನವನ್ನು ಕರುಣಿಸುವಂತೆ ಬೇಡಿಕೊಂಡನು. ಆಗ ಶಿವನು, ನಿನಗೆ ಪುತ್ರ ಸಂತಾನವನ್ನು ಕರುಣಿಸುತ್ತೇನೆ. ಆದರೆ, ಆ ಮಗ ಅಲ್ಪಾಯುಷ್ಯನಾಗಿದ್ದು, ಕೇವಲ 16ವರ್ಷಗಳ ಕಾಲ ಮಾತ್ರ ಬದುಕುತ್ತಾನೆ ಎಂದು ವರವನ್ನು ನೀಡಿದನು. ಋಷಿ ಮಾರ್ಕಂಡೇಯನು ದೊಡ್ಡವನಾದಾಗ, ಒಂದು ದಿನ ಮಾರ್ಕಂಡೇಯನ ತಂದೆ ಅವನಿಗೆ ಮರಣದ ಸತ್ಯವನ್ನು ಹೇಳುತ್ತಾನೆ. ಇದಾದ ನಂತರ, ಬಾಲಕ ಮಾರ್ಕಂಡೇಯ ಕೂಡ ಶಿವನನ್ನು ಪೂಜಿಸಲು ಪ್ರಾರಂಭಿಸಿದನು. ಮಹಾಮೃತ್ಯುಂಜಯ ಮಂತ್ರವನ್ನು ರಚಿಸಿ ಅದನ್ನು ಪಠಿಸಲು ಪ್ರಾರಂಭಿಸಿದ್ದು ಬಾಲ ಮಾರ್ಕಂಡೇಯ. ಬಾಲ ಮಾರ್ಕಂಡೇಯನ ಮರಣದ ಸಮಯ ಬಂದಾಗ, ಅವನು ತನ್ನನ್ನು ಶಿವ ಪೂಜೆಯಲ್ಲಿ ತೊಡಗಿಸಿಕೊಂಡನು. ಯಮರಾಜನು ತನ್ನ ಪ್ರಾಣ ತೆಗೆಯಲು ಕುಣಿಕೆ ಬೀಸಿದ ತಕ್ಷಣ, ಅವನು ಶಿವಲಿಂಗವನ್ನು ಬಿಗಿಯಾಗಿ ತಬ್ಬಿಕೊಂಡನು. ಶಿವನ ಹೆಸರನ್ನು ಜೋರಾಗಿ ಕರೆಯಲು ಪ್ರಾರಂಭಿಸಿದನು. ಆ ಕ್ಷಣದಲ್ಲಿಯೇ ಶಿವನು ಅಲ್ಲಿ ಕಾಣಿಸಿಕೊಂಡು ಯಮರಾಜನನ್ನು ಅಲ್ಲಿಂದ ಹೊರಡುವಂತೆ ಹೇಳಿದನು. ಅವನು ಮಗು ಮಾರ್ಕಂಡೇಯನಿಗೆ ಅಮರತ್ವದ ವರವನ್ನೂ ನೀಡಿದನು. ಈ ರೀತಿಯಾಗಿ, ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವ ಮೂಲಕ, ಬಾಲ ಮಾರ್ಕಂಡೇಯನು ಅಮರನಾದನು ಎಂಬ ಪ್ರತೀತಿಯಿದೆ.
ಋಗ್ವೇದದಲ್ಲಿ ಉಲ್ಲೇಖಿಸಲಾದ ಈ ಮಂತ್ರವನ್ನು ಯಜುರ್ವೇದದಲ್ಲಿಯೂ ಪದೇ ಪದೇ ವೈಭವೀಕರಿಸಲಾಗಿದೆ. ಪ್ರಾಚೀನ ಕಾಲದಲ್ಲಿ ಬಹಳ ರಹಸ್ಯವಾಗಿಡಲಾಗಿದ್ದ ಈ ಮಂತ್ರವನ್ನು ಮಾರ್ಕಂಡೇಯ ಋಷಿ ಜಗತ್ತಿಗೆ ಪರಿಚಯಿಸಿದರು. ದಕ್ಷನ ಶಾಪದಿಂದ ದುರ್ಬಲಗೊಂಡ ಚಂದ್ರ ದೇವರನ್ನು ಸಾವಿನಿಂದ ರಕ್ಷಿಸಲು ಮಾರ್ಕಂಡೇಯನು ದಕ್ಷನ ಮಗಳಿಗೆ ಈ ಮಂತ್ರವನ್ನು ನೀಡಿದಾಗ ಮಂತ್ರದ ಖ್ಯಾತಿಯು ಪ್ರಪಂಚದಾದ್ಯಂತ ಹರಡಿತು.
ಪಾರ್ವತಿ ದೇವಿ ಚಿಕ್ಕವಳಿದ್ದಾಗ, ಮಾರ್ಕಂಡೇಯ ಋಷಿ ತನ್ನ ಬಾಲ್ಯದ ಅನುಭವಗಳನ್ನು ಹೇಳುತ್ತಾನೆ, ಅದನ್ನು ಕೇಳಿದ ಪಾರ್ವತಿ ದೇವಿಯು ಗುರುಗಳ ಸಲಹೆಯಿಲ್ಲದೆ ಈ ಮಂತ್ರವನ್ನು ಸ್ವತಃ ಪಠಿಸಿದಳು. ಆಗ ಮಾರ್ಕಂಡೇಯನಿಗೆ ಮೂಲ ಶಕ್ತಿಯಾದ ಪಾರ್ವತಿ ತನ್ನ ಹಿಂದಿನ ಜನ್ಮದಲ್ಲಿ ಸತಿಯಾಗಿ ಅವತರಿಸಿದ್ದಳು ಎಂದು ನೆನಪಾಗುತ್ತದೆ. ಹೀಗಾಗಿ, ದೇವರ ಆಶೀರ್ವಾದದಿಂದ, ರಹಸ್ಯವಾಗಿದ್ದ ಮಹಾ ಮೃತ್ಯುಂಜಯ ಮಂತ್ರವು ಎಲ್ಲಾ ಜನರಿಗೆ ಪರಿಚಯವಾಯಿತು.
ಮಹಾ ಮೃತ್ಯುಂಜಯ ಮಂತ್ರವನ್ನು ಭಕ್ತಿ ಮತ್ತು ಶುದ್ಧ ಹೃದಯದಿಂದ ಪಠಿಸುವುದು ಆತ್ಮವಿಶ್ವಾಸ ಮತ್ತು ಆತ್ಮಬಲ ಹೆಚ್ಚಿ ದೈವಿಕ ಅನುಭವವಾಗುತ್ತದೆ. ಸಾವನ್ನು ಸಹ ಜಯಿಸಬಲ್ಲ ಈ ಮಹಾ ಮಂತ್ರವು ಜೀವನಕ್ಕೆ ಹೊಸ ಭರವಸೆ ಮತ್ತು ದೈವಿಕ ರಕ್ಷಣೆಯನ್ನು ನೀಡುವ ವಿಶಿಷ್ಟವಾದ ಪೂಜಾ ವಿಧಾನವಾಗಿದೆ. ಶಿವನ ವಿಗ್ರಹ ಅಥವಾ ಶಿವನ ಫೋಟೋದ ಮುಂದೆ ಕುಳಿತು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕು.
ಶಿವಪುರಾಣದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಪ್ರತಿದಿನ ಸೂರ್ಯೋದಯಕ್ಕೆ ಮೊದಲು ಜಪಿಸಬೇಕೆಂದು ಬರೆಯಲಾಗಿದೆ. ಈ ಮಂತ್ರವನ್ನು ಜಪಿಸುವಾಗ ಕೈಯಲ್ಲಿ ರುದ್ರಾಕ್ಷಿ ಜಪಮಾಲೆಯನ್ನು ಹಿಡಿದು 108 ಬಾರಿ ಪಠಿಸುವುದರಿಂದ ಪ್ರಯೋಜನವನ್ನು ಪಡೆಯಬಹುದು. ಈ ಮಂತ್ರವು ನಮ್ಮ ಮನಸ್ಸಿನಿಂದ ನಕಾರಾತ್ಮಕತೆಯನ್ನು ಸಹ ತೆಗೆದುಹಾಕುತ್ತದೆ. ಈ ಮಂತ್ರದ ಪಠಣವು ವ್ಯಕ್ತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ. ನೀವೂ ಈ ಮಂತ್ರವನ್ನು ಒಮ್ಮೆ ಪಠಿಸಿ ನೋಡಿ. ಖಂಡಿತ ನಿಮಗೆ ಬದಲಾವಣೆಗಳು ತಿಳಿಯುತ್ತದೆ.
ಡಾ. ಪಿ.ಬಿ. ರಾಜೇಶ್, ಜ್ಯೋತಿಷಿ- ಸಂಖ್ಯಾಶಾಸ್ತ್ರಜ್ಞ