2026ರ ಮಾರ್ಚ್ 3ರಂದು ಸಂಭವಿಸುವ ಚಂದ್ರ ಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಅದರ ಸೂತಕ ಅವಧಿಯು ಮಾನ್ಯವಾಗಿರುತ್ತದೆ. ಈ ಸೂತಕವು ಅಶುಭ ಅವಧಿಯಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಯಾವುದೇ ಶುಭ ಕೆಲಸಗಳನ್ನ ಮಾಡುವುದಿಲ್ಲ.
ಜ್ಯೋತಿಷ್ಯ ಶಾಸ್ತ್ರದ ಒಂಬತ್ತು ಗ್ರಹಗಳಲ್ಲಿ ಸೂರ್ಯನ ನಂತರ ಚಂದ್ರನು ಮುಖ್ಯವಾದ ಗ್ರಹವಾಗಿದೆ ಚಂದ್ರನಿಲ್ಲದೆ ಯಾವುದೇ ಲೆಕ್ಕಾಚಾರಗಳನ್ನು ಮಾಡಲು ಸಾಧ್ಯವಿಲ್ಲ. ಚಂದ್ರ, ಭೂಮಿಗೆ ಹತ್ತಿರವಾಗಿರುವುದರಿಂದ, ಅದು ನೇರವಾಗಿ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಚಂದ್ರನ ಮೇಲೆ ನಡೆಯುವ ಪ್ರತಿಯೊಂದು ಘಟನೆಯೂ ಭೂಮಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಗ್ರಹಣಗಳು ಸಹ ಪರಿಣಾಮ ಬೀರುತ್ತವೆ.
ಈ ವರ್ಷದ ಮೊದಲ ಪೂರ್ಣ ಚಂದ್ರ ಗ್ರಹಣ 2026, ಮಾರ್ಚ್ 3ರಂದು ಸಂಭವಿಸಲಿದೆ. ಇದು ಮಾರ್ಚ್ ತಿಂಗಳಲ್ಲಿ ಆಗಸದಲ್ಲಿ ನಡೆಯಲಿರುವ ಅಪರೂಪದ ವಿದ್ಯಾಮಾನ ಮತ್ತು ಖಗೋಳದ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಒಂದು ರಸದೌತಣದ ಕ್ಷಣ ಎಂದೇ ಹೇಳಬಹುದು. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಇದನ್ನೇ ಚಂದ್ರಗ್ರಹಣ ಎನ್ನುತ್ತಾರೆ. ಇದು ಒಂದು ಸಾಮಾನ್ಯ ಖಗೋಳ ವಿದ್ಯಮಾನವಾದರೂ, ಭಾರತದಲ್ಲಿ ಇದನ್ನು ಧರ್ಮ ಮತ್ತು ಜ್ಯೋತಿಷ್ಯದ ದೃಷ್ಟಿಯಿಂದ ನೋಡಲಾಗುತ್ತದೆ
ಮಾರ್ಚ್ 3ರ ಚಂದ್ರ ಗ್ರಹಣದ ಸೂತಕ ಅವಧಿ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಈ ಸಮಯದಲ್ಲಿ ಏನು ಮಾಡಬಾರದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಭಾರತದಲ್ಲಿ ಮಾ.3ರಂದು ಮಧ್ಯಾಹ್ನ 3:20ಕ್ಕೆ ಗ್ರಹಣ ಆರಂಭವಾಗಿ ಸಂಜೆ 6:47ಕ್ಕೆ ಮುಕ್ತಾಯವಾಗಲಿದ್ದು, ಒಟ್ಟು 25 ನಿಮಿಷಗಳ ಕಾಲ ಗ್ರಹಣ ಇರಲಿದೆ. ಈ ಗ್ರಹಣವು ಭಾರತದಲ್ಲಿ ಸೂತಕ ಕಾಲವನ್ನು ಸಹ ಹೊಂದಿರುತ್ತದೆ.
ಗ್ರಹಣ ಅಂದ್ರೆ ಸೂತಕ ಕಾಲ. ಹೀಗಾಗಿ ಶುಭಕಾರ್ಯ ನಿಷಿದ್ಧ. ಗ್ರಹಣದ ದಿನದಂದು ಮದುವೆ, ಗೃಹ ಪ್ರವೇಶ ಆಚರಿಸುವುದು, ಹೊಸ ಕಾರು ಖರೀದಿಸುವುದು ಅಥವಾ ಹೊಸ ವೃತ್ತಿಜೀವನವನ್ನು ಪ್ರಾರಂಭಿಸುವುದು ಒಳ್ಳೆಯದಲ್ಲ. ಗ್ರಹಣ ಸಮಯದಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಮಾಡಬಾರದು. ಗರ್ಭಿಣಿಯರು ಹೊರಗೆ ಓಡಾಡಬಾರದು.
ಗ್ರಹಣದ ಮುನ್ನ ಮತ್ತು ಗ್ರಹಣ ಮೋಕ್ಷ ಬಳಿಕ ಮನೆಯನ್ನು ಮತ್ತು ದೇವರ ಕೋಣೆಯನ್ನು ಗಂಗಾಜಲದಿಂದ ಶುದ್ಧೀಕರಿಸಬೇಕು ಚಂದ್ರ ಗ್ರಹಣದ ಸಮಯದಲ್ಲಿ ಧ್ಯಾನ, ಭಜನೆ ಮತ್ತು ಕೀರ್ತನೆಗಳನ್ನು ಮಾಡಬೇಕು. ಚಂದ್ರ ದೇವನಿಗೆ ಸಂಬಂಧಿಸಿದ ಮಂತ್ರಗಳನ್ನು, ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಚಂದ್ರಗ್ರಹಣದ ಮೊದಲು ಮತ್ತು ನಂತರ ಸ್ನಾನ ಮಾಡಬೇಕು. ಆಹಾರ ಹಾಗೂ ಪಾನೀಯಗಳ ಮೇಲೆ ದರ್ಬೆ ಅಥವಾ ತುಳಸಿಯನ್ನು ಹಾಕಿಟ್ಟರೇ ಉತ್ತಮ.
ಗ್ರಹಣದ ಆರಂಭಕ್ಕೆ ಸುಮಾರು 9 ಗಂಟೆಗಳ ಮುಂಚಿತವಾಗಿಯೇ ‘ಸೂತಕ ಅವಧಿ’ ಆರಂಭವಾಗುತ್ತದೆ. ಇದು ಸಂಯಮ ಮತ್ತು ಅಂತರಂಗದ ಶುದ್ಧಿಯ ಸಮಯ. ಈ ಅವಧಿಯಲ್ಲಿ ದೇವಾಲಯಗಳ ಬಾಗಿಲುಗಳು ಮುಚ್ಚಲ್ಪಡುತ್ತವೆ, ಮಂಗಳ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಧರ್ಮಸ್ಥಳ ಮಂಜುನಾಥ ದೇವಾಲಯ, ಕುಕ್ಕೆ ಸುಬ್ರಮಣ್ಯ ದೇವಾಲಯ, ತಿರುಪತಿ ಸೇರಿದಂತೆ ಪ್ರಮುಖ ದೇವಾಲಯಗಳು ಗ್ರಹಣ ಸಮಯದಲ್ಲಿ ಬಂದ್ ಆಗಲಿವೆ.
ವಿಶೇಷವಾಗಿ ಈ ಸಮಯದಲ್ಲಿ ‘ಪ್ರಯಾಣ’ ಮಾಡಬೇಕೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಶಾಸ್ತ್ರಗಳ ಪ್ರಕಾರ, ಗ್ರಹಣ ಕಾಲದಲ್ಲಿ ಕೈಗೊಳ್ಳುವ ಪ್ರಯಾಣವು ಅಡೆತಡೆಗಳಿಂದ ಕೂಡಿರಬಹುದು ಅಥವಾ ಮನಸ್ಸಿನಲ್ಲಿ ಅನಗತ್ಯ ಆತಂಕವನ್ನು ಉಂಟುಮಾಡಬಹುದು. ಪ್ರಯಾಣವನ್ನು ಕೂಡ ಒಂದು ಶುಭಾರಂಭವೆಂದು ಪರಿಗಣಿಸುವುದರಿಂದ, ಗ್ರಹಣದ ನಕಾರಾತ್ಮಕ ಕಂಪನಗಳಿರುವಾಗ ದೂರದ ಪ್ರಯಾಣ ಅಥವಾ ಪ್ರಮುಖ ವ್ಯವಹಾರದ ಪ್ರವಾಸಗಳನ್ನು ತಪ್ಪಿಸುವುದು ಶ್ರೇಯಸ್ಕರ.
ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳ ದೇವರ ದರ್ಶನ ಸಮಯವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಭಕ್ತರಿಗೆ ಅಗತ್ಯ ಸೂಚನೆಗಳನ್ನು ನೀಡಿದೆ. ಪ್ರಕಟಣೆಯ ಪ್ರಕಾರ, ಮಾರ್ಚ್ 3 ರಂದು ಮಧ್ಯಾಹ್ನ 1:30ರವರೆಗೆ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ.
ರಕ್ತ ಚಂದ್ರಗ್ರಹಣದ ಅವಧಿ ಮುಗಿದ ನಂತರ, ಅಂದರೆ ರಾತ್ರಿ 7:30ರಿಂದ ಪುನಃ ದೇವರ ದರ್ಶನವನ್ನು ಪ್ರಾರಂಭಿಸಲಾಗುವುದು. ಬಹುತೇಕ ದೇವಸ್ಥಾನಗಳಲ್ಲಿ ಗ್ರಹಣದ ಸಂದರ್ಭದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂಬ ನಿಯಮಕ್ಕೆ ಅನುಗುಣವಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿಯೂ ಭಕ್ತಾದಿಗಳ ಅನುಕೂಲ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.