ವಾಹನ

ಡ್ರೈವ್ ಜಾಲಿ

ಇದು ಚಾಲಕರ ಸ್ವರ್ಗ!
ಗೇರ್ ಬದಲಿಸುವ ಜಂಜಾಟವಿಲ್ಲ. ಮಳೆ ಬಂದರೆ ವೈಪರ್ ಹಾಕಬೇಕಿಲ್ಲ. ಕತ್ತಲಾಯಿತು ಅಂತ ಹೆಡ್‌ಲೈಟ್ ಆನ್ ಮಾಡಬೇಕಿಲ್ಲ. ರಸ್ತೆ ಉತ್ತಮವಾಗಿದ್ದರೆ ಕ್ರೂಸ್ ಕಂಟ್ರೋಲ್ ಬಳಸಿದರೆ ಎಕ್ಸಿಲರೇಟರ್ ಕೂಡ ಕೊಡಬೇಕಿಲ್ಲ!

ಕೇವಲ ಸ್ಟೀರಿಂಗ್ ಸಂಭಾಳಿಸಿದರೆ ಸಾಕು. ಅಷ್ಟು ಸಲೀಸು ಬೆನ್ಝ್ ಎ180 ಕಾರಿನ ಪಯಣ. ಯಾವುದೇ ಅತ್ಯಾಧುನಿಕ ಸೌಲಭ್ಯ ಕೇಳಿ, ಅದು ಬೆನ್ಝ್ ಎ180ಯಲ್ಲಿದೆ. ಅತ್ಯಂತ ಆರಾಮದಾಯಕ ಪ್ರಯಾಣಕ್ಕೆಂದೇ ರೂಪುಗೊಳಿಸಲಾದ ಕಾರಿದು. ಈ ಕಾರನ್ನು ಚಲಾಯಿಸಿ ಪರೀಕ್ಷಿಸುವ ಅವಕಾಶ 'ಕನ್ನಡಪ್ರಭ'ಕ್ಕೆ ಲಭ್ಯವಾಗಿತ್ತು. 600 ಕಿ.ಮೀ. ಸುಮಾರು ಈ ಕಾರನ್ನು ಚಲಾಯಿಸಿದಾಗ ಕಂಡಿದ್ದನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಮಳೆ ಬಂದರೆ ವೈಪರ್ ತನ್ನಿಂದ ತಾನೇ ಆರಂಭವಾಗುತ್ತದೆ. ಮಳೆ ಜೋರಾದರೆ ವೈಪರ್ ಕೂಡ ಜೋರಾಗುತ್ತದೆ. ಮಳೆ ನಿಂತರೆ ವೈಪರ್ ಕೂಡ ಕೆಲಸ ನಿಲ್ಲಿಸುತ್ತದೆ. ಕತ್ತಲಾದರೆ ಸಾಕು ಹೆಡ್‌ಲೈಟ್ ತನ್ನಷ್ಟಕ್ಕೇ ಆನ್ ಆಗುತ್ತದೆ. ಬೆಳಕು ಹೆಚ್ಚಾದರೆ ಲೈಟ್ ಆಫ್ ಆಗುತ್ತದೆ. ಉದಾಹರಣೆಗೆ ಬೆಳಗ್ಗಿನ ಹೊತ್ತಿನಲ್ಲೇ ನೀವು ಅಂಡರ್‌ಪಾಸ್ ಅಥವಾ ನೆಲಮಹಡಿಯಲ್ಲಿರುವ ಪಾರ್ಕಿಂಗ್ ಪ್ರದೇಶ ಪ್ರವೇಶಿಸಿದಿರಿ ಅಂದುಕೊಳ್ಳಿ. ಅಲ್ಲಿ ಕತ್ತಲಿದ್ದರೆ ಹೆಡ್‌ಲೈಟ್ ತನ್ನಿಂದ ತಾನೇ ಆನ್ ಆಗುತ್ತದೆ.

ಚಾಲಕನ ಸೀಟನ್ನು 3 ಬೇರೆ ಬೇರೆ ವಿಧದಲ್ಲಿ ಸೆಟ್ ಮಾಡಿಡಬಹುದು. ಅಂದರೆ ಮನೆಯಲ್ಲಿರುವ 3-4 ಜನ ಈ ಕಾರನ್ನು ಚಲಾಯಿಸುತ್ತಾರೆ ಎಂದಾದರೆ ಅವರಿಗೆಲ್ಲ ಒಂದು ನಂಬರ್ ನೀಡಿ, ಅವರಿಗಿಷ್ಟವಾಗುವ ಅಥವಾ ಅನುಕೂಲ ಎನ್ನಿಸುವ ಸೆಟ್ಟಿಂಗ್‌ಗಳನ್ನು ಆ ನಂಬರ್‌ನಲ್ಲಿ ಸೇವ್ ಮಾಡಿಡಬಹುದು. ಅವರು ಹೋಗಿ ಕುಳಿತುಕೊಂಡು ತಮ್ಮ ನಂಬರ್ ಒತ್ತಿದ ತಕ್ಷಣ ಸೀಟು ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಸೆಟ್ಟಾಗುತ್ತದೆ.
ಹೀಗಿಲ್ಲದಿದ್ದರೂ ಕೇವಲ ಬಟನ್ ಒತ್ತುವ ಮೂಲಕ ಸೀಟನ್ನು ನಿಮಗೆ ಬೇಕಾದಂತೆ ಸೆಟ್ ಮಾಡಿಕೊಳ್ಳಬಹುದು.

ಬೆನ್ಝ್ ಅಂದಮೇಲೆ ಪ್ರತಿ ಲೀಟರ್‌ಗೆ ಎಷ್ಟು ಕೊಡುತ್ತೆ ಎಂದು ಕೇಳುವ ಹಾಗೆಯೇ ಇಲ್ಲ ಅಂದುಕೊಳ್ಳಬೇಡಿ. ಕಾರಣ ಬೆನ್ಝ್ ಎ180 ಕಾರು ಇಂಧನ ಕ್ಷಮತೆಯನ್ನೂ ಹೆಚ್ಚಿಸಿಕೊಂಡಿದೆ. ಇಕೋ ಎಂಬ ತಂತ್ರಜ್ಞಾನ ಅಳವಡಿಸಿದ ಕಾರಣ ನಗರ ವ್ಯಾಪ್ತಿ ಚಾಲನೆಯಲ್ಲೂ 14-16 ಕಿ.ಮೀ. ಇಂಧನ ಕ್ಷಮತೆ ಸಾಧಿಸಲಾಗಿದೆ.

ಇಕೋ ತಂತ್ರಜ್ಞಾನದ ಸಹಾಯದಿಂದ ನಿಲ್ಲಿಸಿದ ತಕ್ಷಣ ನಿಮ್ಮ ಕಾರಿನ ಎಂಜಿನ್ ಆಫ್ ಆಗುತ್ತದೆ. ಎಸಿ ಪವರ್ ಕೂಡ ತನ್ನಿಂದ ತಾನೇ ಕಡಿಮೆಯಾಗುತ್ತದೆ. ನೀವು ಎಕ್ಸಿಲರೇಟರ್ ಕೊಡುತ್ತಿದ್ದಂತೆ ಅಥವಾ ಬ್ರೇಕ್ ಬಿಡುತ್ತಿದ್ದಂತೆ ಕಾರಿನ ಎಂಜಿನ್ ಸ್ಟಾರ್ಟ್ ಆಗುತ್ತದೆ. ಇದರಿಂದಾಗಿ ಉತ್ತಮ ಇಂಧನ ಕ್ಷಮತೆ ಸಾಧ್ಯವಾಗಿದೆ.

ಸಾಮಾನ್ಯವಾಗಿ ಕಾರು ಹೋಗುವಾಗ ಎಕ್ಸಿಲರೇಟರ್ ಬಿಟ್ಟ ತಕ್ಷಣ ಕಾರಿನ ವೇಗ ಕಡಿಮೆಯಾಗುತ್ತದೆ. ಆದರೆ ಬೆನ್ಝ್ ಎ180ಯಲ್ಲಿ ವೇಗದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅದರಲ್ಲೂ ಇಳಿಜಾರಿದ್ದರೆ ವೇಗ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿಯೂ ಉತ್ತಮ ಮೈಲೇಜ್ ದೊರೆಯುತ್ತದೆ. ಇದನ್ನು ಸರಿಯಾಗಿ ಬಳಸಿಕೊಳ್ಳುವುದು ಚಾಲಕನಿಗೆ ಬಿಟ್ಟಿದ್ದು. ಇದನ್ನು ಸರಿಯಾಗಿ ಬಳಸಿಕೊಂಡರೆ ಹೆದ್ದಾರಿಯಲ್ಲಿ ಪ್ರತಿ ಲೀಟರ್ ಡೀಸೆಲ್‌ಗೆ 20 ಕಿ.ಮೀ. ಮೈಲೇಜ್ ಪಡೆದುಕೊಳ್ಳಬಹುದು.

ಇನ್ನು ಕಾರು ಓಡಿಸುತ್ತಿರುವಾಗಲೇ ಚಕ್ರಕ್ಕೆ ಗಾಳಿ ಕಡಿಮೆಯಾಗಿದೆಯೇ? ಟ್ಯಾಂಕಿನಲ್ಲಿರುವ ಇಂಧನದಿಂದ ಎಷ್ಟು ಕಿ.ಮೀ. ಚಲಿಸಬಹುದು? ಯಾವವೇಗದಲ್ಲಿ ಹೋದರೆ ಎಷ್ಟು ಕಿ.ಮೀ. ಹೋಗಬಹುದು? ಮುಂತಾದ ವಿವರಗಳನ್ನು ಕಾರು ತೋರಿಸುತ್ತಿರುತ್ತದೆ. ರಿವರ್ಸ್ ಗೇರ್ ಹಾಕಿದರೆ ಹಿಂದೆ ಏನೆಲ್ಲ ಎಂಬುದರ ಲೈವ್ ವೀಡಿಯೋ ನಿಮ್ಮ ಮುಂದಿರುವ ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡು ನಿಮ್ಮನ್ನು ಅಚ್ಚರಿಗೊಳಿಸುತ್ತದೆ.

ವಾಹನದ ಡ್ಯಾಶ್‌ಬೋರ್ಡ್ ನಡುವೆ ಇರುವ ಸ್ಕ್ರೀನ್‌ನಲ್ಲಿ ಹಾಡು, ಮ್ಯಾಪ್, ನಿಮ್ಮ ಮೊಬೈಲ್ ಮುಂತಾದ ಅಂಶಗಳನ್ನು ನೋಡಬಹುದು. ಪೆಟ್ರೋಲ್ ಕಾರಿಗಿಂತ ಡೀಸೆಲ್ ಕಾರು ಕಡಿಮೆ ದರದ್ದು ಎಂಬುದು ಕೂಡ ಅಚ್ಚರಿಗಳಲ್ಲೊಂದು. ಪೆಟ್ರೋಲ್ ಕಾರಿನಲ್ಲಿ ಸನ್‌ರೂಫ್ ಮತ್ತು ಕೆಲವು ಸೇವೆಗಳು ಹೆಚ್ಚುವರಿಯಾಗಿ ಲಭ್ಯವಿದೆ. ಡಿಕ್ಕಿ ಕೂಡ ದೊಡ್ಡದಾಗಿದೆ.
ಈಗ ಸದ್ಯ ಬೆನ್ಝ್ ಸಂಸ್ಥೆ ಈ ಕಾರನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತದಲ್ಲೇ ಉತ್ಪಾದನೆ ಆರಂಭವಾದರೆ ದರ ಕೊಂಚ ಕಡಿಮೆಯಾಗಬಹುದು. ಆದರೂ ಇದು ಬೆನ್ಝ್‌ನ ಅತ್ಯಂತ ಕಡಿಮೆ ದರದ ಕಾರುಗಳಲ್ಲಿ ಒಂದು. ಈ ಕಾರಿನ ಶೋರೂಂ ಬೆಲೆ ರು. 26 ಲಕ್ಷ.
ಕಾರು ಅಗಲವಾಗಿ ಎತ್ತರ ಕಡಿಮೆ ಇರುವುದರಿಂದ ತಿರುವುಗಳನ್ನು ತಿರುಗಿದ್ದೇ ಗೊತ್ತಾಗುವುದಿಲ್ಲ. 100-120 ಕಿ.ಮೀ. ವೇಗದಲ್ಲಿ ತಿರುವುಗಳನ್ನು ದಾಟಿದರೂ ಒಳಗೆ ಇರುವವರಿಗೆ ಅದರ ಅನುಭವ ಆಗುವುದೇ ಇಲ್ಲ. ಕಾರಣ ಬಾಡಿರೋಲ್ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇದೆ.

ಕಾರಿನ ಇಷ್ಟೆಲ್ಲ ಉತ್ತಮ ಅಂಶಗಳನ್ನು ಹೇಳಿದ ಮೇಲೆ ಒಂದು ಅಂಶ ಹೇಳಲೇಬೇಕು. ಭಾರತದ ಅದರಲ್ಲೂ ನಮ್ಮ ರಾಜ್ಯದ ರಸ್ತೆಗಳಿಗೆ ಹೋಲಿಸಿದರೆ ಈ ಕಾರಿನ ಗ್ರೌಂಡ್ ಕ್ಲಿಯರೆನ್ಸ್ ಅತ್ಯಂತ ಕಡಿಮೆ. ಹಿಮಾಲಯಕ್ಕೆ ಪೈಪೋಟಿ ನೀಡುವ ನಮ್ಮ ಹಂಪ್‌ಗಳು, ಪಾತಾಳ ಕಾಣುವಂತಿರುವ ಹೊಂಡಗಳು, ನಮ್ಮ ರಸ್ತೆಗಳ ಅದ್ಭುತ ತಂತ್ರಜ್ಞಾನಕ್ಕೆ ಬೆನ್ಝ್ ಹೊಂದಿಕೊಳ್ಳುವುದು ಕಷ್ಟ.

ಇಲ್ಲಿನ ಕಾರಿನ ತಪ್ಪೇನೂ ಇಲ್ಲ. ಕಾರಿನ ತಂತ್ರಜ್ಞಾನದಲ್ಲಿ ಯಾವ ಲೋಪವೂ ಇಲ್ಲ. ಆದರೆ ಈ ಕಾರಿನ ಗುಣಮಟ್ಟಕ್ಕೆ ನಮ್ಮ ರಸ್ತೆಗಳಿಲ್ಲ. ಈ ಕಾರನ್ನು ಖರೀದಿಸಿದರೆ ನಿಮಗೆ ಗೊತ್ತಿರುವ ಮತ್ತು ಉತ್ತಮವಾಗಿರುವ ರಸ್ತೆಗಳಲ್ಲಿ ಮಾತ್ರ ಸಂಚರಿಸಬೇಕು. ಇಲ್ಲವಾದಲ್ಲಿ ಕಾರಿನ ಕೆಳಭಾಗಕ್ಕೆ ಗೀರು, ಡೆಂಟ್‌ಗಳಾಗುವುದು ಅತ್ಯಂತ ಸಹಜ ಎಂಬಂತಾಗಿಬಿಡುತ್ತದೆ. ಇಷ್ಟು ದುಬಾರಿ ಕಾರು ಖರೀದಿ ದಿನವೂ ಅಲ್ಲಿ-ಇಲ್ಲಿ ತಾಗಿಸಿಕೊಂಡು ತಿರುಗಾಡುವುದನ್ನು ನೀವು ಖಂಡಿತಾ ಇಷ್ಟಪಡುವುದಿಲ್ಲ.
ಆದರೆ ಅತ್ಯಾಧುನಿಕ ಸೌಲಭ್ಯಗಳು, ತಂತ್ರಜ್ಞಾನ, ಐಷಾರಾಮಿ ಮತ್ತು ಸುಖಕರ ಪ್ರಯಾಣಕ್ಕೆ ಇದಕ್ಕಿಂತ ಉತ್ತಮ ಕಾರು ಇಲ್ಲ. ಅಷ್ಟೇ ಗಟ್ಟಿ ಕೂಡ. ಈ ಕಾರಿನೊಳಗೆ ಸಂಗೀತ ಕೇಳಿದರೆ ಮತ್ತೆ ಬೇರೆ ಕಾರಿನ ಮ್ಯೂಸಿಕ್ ಸಿಸ್ಟಂಗಳೆಲ್ಲ ವೇಸ್ಟ್ ಎಂದು ಭಾವಿಸುವುದು ಖಂಡಿತ. <

-ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!