ವಾಹನ

ಪರಲಿ ತಪ್ಪಲು

ಮಹಾರಾಷ್ಟ್ರ ಹೆಸರಿಗೆ ತಕ್ಕಂತೆ ಸುವಿಶಾಲ ಸುಂದರ ನಾಡು. ಇಂಥ ಭವ್ಯ ನಾಡಿನ ಬೀಡ್ ಜಿಲ್ಲೆಯ 'ಅಂಬೆಜೋಗಾಯಿ' ಪಟ್ಟಣದಿಂದ 26 ಕಿ.ಮೀ. ದೂರದ ಪರಲಿ ಗ್ರಾಮ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ 5ನೆಯದಾದ ವೈದ್ಯನಾಥ ಶಿವಲಿಂಗ ಇರುವ ತಾಣ. ಮಧ್ಯ ಮಹಾರಾಷ್ಟ್ರದ ಈ ಪರಲಿ ಗ್ರಾಮ ಮೇರು ಪರ್ವತ ಅಥವಾ ನಾಗನಾರಾಯಣ ಬೆಟ್ಟದ ತಪ್ಪಲಿನಲ್ಲಿದೆ.

ಧಾರ್ಮಿಕ ಹಿನ್ನೆಲೆ
ದೇವಿಯು ಮಧುಕೈಟಭರನ್ನು ಕೊಂದಿದ್ದು ಇದೇ ಸ್ಥಳ ಎನ್ನುತ್ತದೆ ಪುರಾಣ. ಸತ್ಯವಾನ- ಸಾವಿತ್ರಿ ಕಥೆ ನಡೆದಿದ್ದೂ ಇದೇ ಸ್ಥಳದಲ್ಲಿ ಎಂಬುದಕ್ಕೆ ವಟವೃಕ್ಷ, ವಟೇಶ್ವರ ದೇಗುಲ ಸಾಕ್ಷಿಯಾಗಿದೆ. ಶಿವಪುರಾಣದ ಪ್ರಕಾರ ಮಾರ್ಕಂಡೇಯನಿಗೆ ಶಿವಕೃಪೆಯಿಂದ ಜೀವದಾನವಾದದ್ದು ಇದೇ ಕ್ಷೇತ್ರದಲ್ಲಿ. ಈ ಪ್ರತೀತಿಗೆ ಇಂಬುಕೊಡುತ್ತದೆ ಮಾರ್ಕಂಡೇಯ ಹೆಸರಿನ ಕೆರೆ. ಮತ್ತೊಂದು ಪೌರಾಣಿಕ ಕಥೆಯಂತೆ, ಅಮೃತ ಮಥನದಲ್ಲಿ ಹುಟ್ಟಿದ 14 ರತ್ನಗಳಲ್ಲಿ ಅಮೃತ ಹಾಗೂ ಧನ್ವಂತರಿ ಎಂಬ ಎರಡು ರತ್ನಗಳನ್ನು ಶ್ರೀವಿಷ್ಣುವಿನ ಲಿಂಗರೂಪಿ ಪರಶಿವನಲ್ಲಿ ಅಡಗಿಸಿಟ್ಟಿದ್ದನು. ರಾಕ್ಷಸರು ಅಮೃತ ಹುಡುಕುತ್ತಾ ಶಿವಲಿಂಗದ ಬಳಿ ಬಂದಾಗ ಲಿಂಗದಿಂದ ಮಹಾಜ್ವಾಲೆ ಎದ್ದು ರಾಕ್ಷಸರು ದಿಗಿಲುಕೊಂಡು ದೂರ ಓಡಿದರು. ಆದರೆ, ದೇವತೆಗಳು ಬಂದಾಗ ಲಿಂಗದಿಂದ ಮಹಾಜ್ವಾಲೆ ಶಾಂತವಾಗಿ ಅಮೃತ ಧಾರಾಕಾರವಾಗಿ ಹರಿಯಿತು. ಆದ್ದರಿಂದ ಇಲ್ಲಿ ಜ್ಯೋತಿರೂಪದಲ್ಲಿ ಶಿವ ನೆಲೆಸಿದ್ದಾನೆಂಬ ನಂಬಿಕೆ ಇದೆ.
ಪರಶಿವ ತನ್ನ ಭಕ್ತಿಯಿಂದ ಆರಾಧಿಸುವ ಭಕ್ತರು ಸ್ಪರ್ಶಿಸಿದರೆ ಅಮೃತ ಹರಿಸುವನೆಂಬ ಪ್ರತೀತಿ ಇದೆ. ಇಲ್ಲಿ ಜಾತಿಭೇದ, ಲಿಂಗಭೇದವಿಲ್ಲ. ಶಿವನು ಅಮೃತ- ಧನ್ವಂತರಿ ಎರಡನ್ನೂ ಒಳಗೊಂಡಿರುವುದರಿಂದ ಅಮೃತೇಶ್ವರ- ಧನ್ವಂತರಿ- ವೈದ್ಯನಾಥನೆಂದು ಆರಾಧಿಸಲಾಗುತ್ತದೆ. ಬಹಳ ಹಿಂದೆ ಈ ಇಲ್ಲಿ ಔಷಧಿ ಸಸ್ಯಗಳನ್ನು ಒಳಗೊಂಡ ದಟ್ಟ ಕಾಡಿತ್ತು. ಸಂತನೊಬ್ಬ ವೈದ್ಯ ಮಾಡುವುದರಲ್ಲಿ ನಿಷ್ಣಾತನಾಗಿದ್ದನು. ಅವನು ಶಿವನನ್ನು ಒಲಿಸಿಕೊಂಡು, ಅಲ್ಲೇ ನೆಲೆಸಲು ಪ್ರಾರ್ಥಿಸಿದನಂತೆ. ಆಗ ಭಕ್ತನಿಗೆ ಸ್ಪಂದಿಸಿದ ಶಿವನು ಜ್ಯೋತಿರೂಪದಲ್ಲಿ ಅಲ್ಲೇ ನೆಲೆಸಿ, ಪರಲಿ ವೈದ್ಯನಾಥ ಜ್ಯೋತಿರ್ಲಿಂಗ ಆದ ಎನ್ನಲಾಗುತ್ತದೆ.
ಇದು 5ನೇ ಜ್ಯೋತಿರ್ಲಿಂಗವೆಂದು ಖ್ಯಾತಿ ಪಡೆದಿದ್ದರೂ ಭಕ್ತರು ಜಾರ್ಖಂಡ್‌ನ ವೈದ್ಯನಾಥನನ್ನೂ ದರ್ಶಿಸುತ್ತಾರೆ. 'ಅಂಬೆಜೋಗಾಯಿ'ಯಲ್ಲಿ ಈ ಕುರಿತು ಒಂದು ಕುತೂಹಲಕಾರಿ ಕಥೆ ಇದೆ. ವೈದ್ಯನಾಥನ ವಿವಾಹ ಯೋಗೇಶ್ವರಿಯೊಂದಿಗೆ ನಿಶ್ಚಿತವಾಗಿತ್ತು. ಮುಹೂರ್ತ ಶುಭಸಮಯಕ್ಕೆ ದಿಬ್ಬಣ ತಲುಪದ ಕಾರಣ ದಿಬ್ಬಣವೇ ಕಲ್ಲಾಗಿ ಪರಿವರ್ತಿತವಾಯಿತು ಎಂಬ ನಂಬಿಕೆ ಇದೆ.
ದೇವಾಲಯವು ಪರಲಿಯ ಹೊರಭಾಗದಲ್ಲಿದ್ದು, ನೆಲಮಟ್ಟದಿಂದ 80 ಅಡಿ ಎತ್ತರದಲ್ಲಿದೆ. 3 ಬಾಗಿಲುಗಳಿವೆ. ಗರ್ಭಗೃಹ ದೇಗುಲದ ನೆಲಮಟ್ಟದಲ್ಲಿದೆ. ಮಧ್ಯಮ ಗಾತ್ರದ ಶಿವಲಿಂಗವು ಸಾಲಿಗ್ರಾಮ ಶಿಲೆಯಿಂದಾಗಿದೆ. ಅದು ಅತ್ಯಂತ ನಯವಾಗಿ ಭವ್ಯವಾಗಿದೆ. ನಾಲ್ಕೂ ಕಡೆ ಪ್ರಜ್ವಲಿಸುವ ಅಖಂಡ ನಂದಾದೀಪದ ಜ್ಯೋತಿ ಶಿವಲಿಂಗದಲ್ಲಿ ಪ್ರತಿಫಲನಗೊಂಡು, ಭಕ್ತರನ್ನು ಆಕರ್ಷಿಸುತ್ತದೆ. ಈ ದೇಗುಲಕ್ಕೆ 2000 ವರ್ಷಗಳ ಇತಿಹಾಸವಿದೆ. ಹೇಮದ್ ಶೈಲಿಯ ಈ ದೇಗುಲ ನಿರ್ಮಾಣ 18 ವರ್ಷಗಳಲ್ಲಿ ಪೂರ್ಣಗೊಂಡಿತು. ಈಗಿನ ದೇಗುಲ 18ನೇ ಶತಮಾನದಲ್ಲಿ ಮಹಾಭಕ್ತೆ ಅಹಲ್ಯಬಾಯಿ ಹೋಳ್ಕರ್‌ರಿಂದ ಜೀರ್ಣೋದ್ಧಾರಗೊಂಡಿದೆ.
ಮುಂಜಾನೆ 5 ಗಂಟೆಗೆ ಆರತಿಯೊಂದಿಗೆ ದೇಗುಲ ತೆರೆದರೆ ಮಧ್ಯಾಹ್ನ 3 ಗಂಟೆ ವರೆಗೆ ಪೂಜೆ, ಅಭಿಷೇಕ ನೆರವೇರುತ್ತದೆ. ಸಂಜೆ 5ಕ್ಕೆ ಬ್ರಹ್ಮಪೂಜೆ, 9.45ಕ್ಕೆ ಆರತಿ ಬಳಿಕ 10 ಗಂಟೆಗೆ ದೇಗುಲದ ಬಾಗಿಲು ಮುಚ್ಚಲಾಗಿತ್ತದೆ. ನಿಗದಿತ ಅವಧಿಯೊಳಗೆ ದರ್ಶನ ಮಾತ್ರ ಸಾಧ್ಯ. ಅತಿ ಹೆಚ್ಚು ಹಿಂದೂಗಳು ಭೇಟಿ ನೀಡುವ ಪ್ರಸಿದ್ಧ ಧಾರ್ಮಿತ ತಾಣ ಈ ಪರಲಿ ಕ್ಷೇತ್ರ.

ಹೀಗೆಬನ್ನಿ...
ಪರಲಿ ಕ್ಷೇತ್ರಕ್ಕೆ ಬಹುತೇಕ ಪ್ರಮುಖ ನಿಲ್ದಾಣಗಳಿಂದ ಬಸ್ ಸೌಕರ್ಯವಿದೆ. ಖಾಸಗಿ ವಾಹನಗಳೂ ಪ್ರವಾಸಕ್ಕೆ ಲಭ್ಯವಾಗುತ್ತವೆ. ಸಿಕಂದರಾಬಾದ್ ರೇಲ್ವೆ ಡಿವಿಜನ್‌ನಿಂದ ಪರಲಿ ವೈದ್ಯನಾಥ್- ವಿಕರಾಬಾದ್, ಪರಲಿ ವೈದ್ಯನಾಥ್- ಪರಲಿ ಪವರ್ ಪ್ಲಾಂಟ್, ನಂದೇಡ್ ಡಿವಿಜನ್‌ನಿಂದ ಪರಲಿ ವೈದ್ಯನಾಥ್- ಪರ್ಭಾಣಿ ರೇಲು ಮಾರ್ಗಗಳನ್ನು ಬಳಸಿಯೂ ಪರಲಿ ತಲುಪಬಹುದು. 

- ಲೇಖನ: ಸೀತಾ ಎಸ್. ನಾರಾಯಣ
seetha.snarayana@gmail.com
ಚಿತ್ರ: ಶಂಕರನಾರಾಯಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್