ಮಾರುತಿ ಜಿಪ್ಸಿ ನೋಡಬೇಕೆಂದಿದ್ದರೆ ಮಿಲಿಟರಿ ಕ್ಯಾಂಪ್‌ಗಳಿಗೆ ಭೇಟಿ ನೀಡಬೇಕಿತ್ತು. ಇನ್ನು ಮುಂದೆ ಸೈನ್ಯದಿಂದಲೂ ಜಿಪ್ಸಿ ಮಾಯವಾಗಲಿದೆ!
2017ರಷ್ಟೊತ್ತಿಗೆ ಸೈನ್ಯದಲ್ಲಿನ 25 ಸಾವಿರಕ್ಕೂ ಅಧಿಕ ಜಿಪ್ಸಿಗಳ ಬದಲಿಗೆ ಮಹೀಂದ್ರಾ ಸ್ಕಾರ್ಪಿಯೋ ಅಥವಾ ಟಾಟಾ ಸಫಾರಿಯನ್ನು ಕೊಳ್ಳಲು ಸೈನ್ಯ ಮನ ಮಾಡಿದೆ. ಪೆಟ್ರೋಲ್ ದರ ಏರಿಕೆಯೇ ಇದಕ್ಕೆ ಮೂಲ ಕಾರಣವಾಗಿದ್ದು, ಡೀಸೆಲ್ ಎಂಜಿನ್‌ಗಳತ್ತ ಸೈನ್ಯದ ಅಧಿಕಾರಿಗಳು ಒಲವು ತೋರಿಸುತ್ತಿದ್ದಾರೆ. ಇದಲ್ಲದೆ 4-ವ್ಹೀಲ್ ಡ್ರೈವ್‌ಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲು ನಿರ್ಧರಿಸಲಾಗಿದೆ. ಇದೇ ಕಾರಣದಿಂದ ಮುಂದಿನ ವಾರ ಜೈಪುರದಲ್ಲಿ ಸೈನ್ಯಕ್ಕಾಗಿಯೇ ವಿಶೇಷವಾಗಿ ರೂಪಿಸಿದ ಸ್ಕಾರ್ಪಿಯೋ ಹಾಗೂ ಸಫಾರಿಯ ಪ್ರದರ್ಶನ ನಡೆಯುತ್ತಿದೆ.
ಈ ಯೋಜನೆಗಾಗಿ ಪ್ರಾರಂಭಿಕ ಹಂತದಲ್ಲಿ ಕೇಂದ್ರ ಸರ್ಕಾರವು ರು. 3 ಸಾವಿರ ಕೋಟಿ ಮೀಸಲಿರಿಸಿದೆ. ಆದರೆ ಮುಂದಿನ 20 ವರ್ಷದಲ್ಲಿ ಒಟ್ಟು 30 ಸಾವಿರ ವಾಹನಗಳನ್ನು ಸೇನೆಗೆ ಸೇರಿಸಿಕೊಳ್ಳುವ ಗುರಿ ಹೊಂದಲಾಗಿದೆ.
ಸೇನೆಯು ಈಗಾಗಲೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಟೆಂಡರ್ ಪಡೆಯುವ ಕಂಪನಿಗೆ ದೊಡ್ಡ ಲಾಟರಿ ಹೊಡೆದಂತೆಯೇ. ಇದಲ್ಲದೇ ಸೆಕೆಂಡ್‌ಹ್ಯಾಂಡ್ ಮಾರುಕಟ್ಟೆಗೆ ಮಿಲಿಟರಿಯ 25 ಸಾವಿರ ಜಿಪ್ಸಿಗಳು ಲಗ್ಗೆ ಇಡಲಿದ್ದು, ಅಲ್ಪ ಮಟ್ಟಿನ ಸದ್ದು ಮಾಡಲಿದೆ.