ವಾಹನ

ಮದ್ದಿನ ಸದ್ದು

ಶಿಂಷಾ ನದಿಯ ತಟದಲ್ಲಿರುವ 'ಮದ್ದೂರು' ಹಲವರ ನಾಲಗೆಯನ್ನು ಬೆಚ್ಚಗೆ ಮಾಡಿದ ಪದ. ರುಚಿಯಾದ ಮದ್ದೂರ್ ವಡೆ, ಕಾಯ್ ಚಟ್ನಿಯ ರುಚಿಯನ್ನು ಯಾರೂ ಬೇಡ ಅನ್ನುವುದಿಲ್ಲ. ಆದರೆ, ಮದ್ದೂರು ಇದೊಂದಕ್ಕ ಮಾತ್ರ ಫೇಮಸ್ಸಾ?
ಖಂಡಿತಾ ಅಲ್ಲ. ಇದು ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳವೂ ಹೌದು. ಮೊನ್ನೆ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುವಾಗ ಮಾರ್ಗಮಧ್ಯ ಕಾರನ್ನು ಮದ್ದೂರಿನಲ್ಲಿ ನಿಲ್ಲಿಸಿದಾಗ ನನಗೆ ಅರಿವಾಯಿತು. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ 85 ಕಿ.ಮೀ. ಸಾಗಿದರೆ ಮದ್ದೂರು ಸಿಗುತ್ತದೆ. ರಸ್ತೆಯ ಎಡಭಾಗದಲ್ಲಿ 'ವರದರಾಜರ ದೇವಸ್ಥಾನ' ಎನ್ನುವ ಫಲಕ ಇರುವ ತಿರುವಿನ ಕಡೆ ನಡೆದರೆ ಎರಡು ಪ್ರಾಚೀನ ದೇಗುಲಗಳನ್ನು ಕಾಣಬಹುದು. ಮುಖ್ಯ ಬಸ್ ನಿಲ್ದಾಣದಿಂದ 5-10 ನಿಮಿಷದ ನಡಿಗೆ.
11- 12ನೇ ಶತಮಾನದಲ್ಲಿ ಕಟ್ಟಿರುವ ಉಗ್ರನರಸಿಂಹ ದೇಗುಲ ಹೊಯ್ಸಳ ಶೈಲಿಯಲ್ಲಿದೆ. ಹೊಯ್ಸಳರ ತದನಂತರ ವಿಜಯನಗರದ ಅರಸರು ಇದರ ಜೀರ್ಣೋದ್ಧಾರ ಮಾಡಿದ್ದರು. ಗರ್ಭಗುಡಿಯಲ್ಲಿ ಅದ್ಭುತವಾಗಿರುವ ಉಗ್ರನರಸಿಂಹ ಮೂರ್ತಿ. ಉಗ್ರರೂಪದಲ್ಲಿರುವ ದೇವರನ್ನು ನೋಡುತ್ತಿದ್ದಂತೆಯೇ ಭಕ್ತರಲ್ಲಿ ಭಯ- ಭಕ್ತಿ ಎರಡೂ ಮೂಡುತ್ತವೆ. ವಿಶೇಷವೆಂದರೆ ಮೂರು ಕಣ್ಣು ಮತ್ತು ಎಂಟು ಕೈಗಳಿರುವ ಉಗ್ರನರಸಿಂಹ, ಹಿರಣ್ಯಕಶಿಪುವನ್ನು ವಧೆ ಮಾಡುತ್ತಿರುವ ಮೂರ್ತಿ. ಸಂಹಾರ ಸಮಯದಲ್ಲಿ ಮೂರನೇ ಕಣ್ಣು ಕಾಣಿಸಿಕೊಂಡಿದ್ದು, ಇದು ಬಹಳ ಅಪರೂಪದ ವಿಗ್ರಹವಾಗಿದೆ. ಅಂತೆಯೇ ದೇವರಿಗೆ ತ್ರಿನೇತ್ರಧಾರಿ ನರಸಿಂಹಸ್ವಾಮಿ ಎಂಬ ಹೆಸರೂ ಇದೆ. ನರಸಿಂಹಸ್ತೋತ್ರದಲ್ಲಿ ಜ್ವಲಕೇಶಂ, ತ್ರಿನೇತ್ರಂ ಎಂದು ವರ್ಣಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ತನ್ನ ತೊಡೆಯ ಮೇಲೆ ಹಿರಣ್ಯಕಶಿಪುವನ್ನು ಮಲಗಿಸಿಕೊಂಡು, ಅವನ ಹೊಟ್ಟೆ ಬಗೆದು, ಕರುಳನ್ನು ಮಾಲೆಯನ್ನಾಗಿ ಧರಿಸಿರುವ ಮೂರ್ತಿ. ಮೂರ್ತಿಯ ಕೆಳಗೆ ಎಡಕ್ಕೆ ಗರುಡ ಮತ್ತು ಬಲಭಾಗದಲ್ಲಿ ಕೈಮುಗಿದು ನಿಂತಿರುವ ಪ್ರಹ್ಲಾದರನ್ನು ಕಾಣಬಹುದು.
ದೇಗುಲದ ಪ್ರಾಕಾರದಲ್ಲಿ ನಡೆದರೆ ಬಲಕ್ಕೆ ಸೌಮ್ಯನಾಯಕಿ ಮತ್ತು ಎಡಕ್ಕೆ ನರಸಿಂಹನಾಯಕಿಯರ ದರುಶನ. ದೇಗುಲದಲ್ಲಿ, ಪುಟ್ಟ ಕೃಷ್ಣನಿಗೆ ಯಶೋಧ ಮೊಲೆ ಹಾಲುಣಿಸುತ್ತಿರುವ ಮೂರ್ತಿಗಳು ವಿಶೇಷ. ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತ, ಶ್ರೀನಿವಾಸ, ಇವರೆಲ್ಲರ ಸನ್ನಿಧಿಯೂ ದೇಗುಲದಲ್ಲಿದೆ. ವೈಶಾಖ ಮಾಸದಲ್ಲಿ ಬ್ರಹ್ಮರಥೋತ್ಸವ ಮತ್ತು ನರಸಿಂಹ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಇಲ್ಲಿ ಆಚರಿಸಲಾಗುತ್ತದೆ. ಉಗ್ರನರಸಿಂಹಮೂರ್ತಿಯನ್ನು ಸಾಕ್ಷಾತ್ ಕೃಷ್ಣನೇ ಸ್ಥಾಪಿಸಿದ್ದು ಎಂಬ ಕಥೆಯಿದೆ. ಅರ್ಜುನ ಕೃಷ್ಣನಲ್ಲಿ... ಹರಿಯ ಎಲ್ಲ ಅವತಾರಗಳನ್ನು ಪೂಜಿಸಿದೆ, ಆದರೆ ನರಸಿಂಹಾವತಾರವನ್ನು ಪೂಜಿಸಲಾಗಲಿಲ್ಲ ಎಂದಾಗ, ಶ್ರೀಕೃಷ್ಣ ಅರ್ಜುನನಿಗೋಸ್ಕರ ಇಲ್ಲಿ ಉಗ್ರನರಸಿಂಹ ಮೂರ್ತಿಯನ್ನು ಸ್ಥಾಪಿಸಿದ್ದರಿಂದ ಈ ಊರಿಗೆ ಅರ್ಜುನಪುರಿ ಎಂದು ಹೆಸರಾಯಿತಂತೆ. ಕಾಲಕ್ರಮೇಣ ಇಲ್ಲಿ ಮದ್ದು ಗುಂಡು ತಯಾರಿಸಲಾಗುತ್ತಿದ್ದ ಕಾರಣ ಮದ್ದಿನ ಊರು ಕ್ರಮೇಣ ಮದ್ದೂರಾಯಿತು.
ಉಗ್ರನರಸಿಂಹ ದೇಗುಲದ ಬಲಗಡೆ ಇರುವುದು ವರದರಾಜಸ್ವಾಮಿಯ ಸನ್ನಿಧಾನ. 10- 15 ಮೆಟ್ಟಿಲು ಹತ್ತಿದರೆ ಸಿಗುವುದು 12 ಅಡಿಯ ನಯನಮನೋಹರ ವರದರಾಜಸ್ವಾಮಿಯ ಮೂರ್ತಿ. ಸ್ಥಳ ಪುರಾಣ ಕೇಳಿದಾಗ ದೇಗುಲದ ಅರ್ಚಕರು ಹೇಳಿದ ಕಥೆ ಹೀಗಿದೆ. ಹೊಯ್ಸಳೇಶ್ವರ ವಿಷ್ಣುವರ್ಧನನ ತಾಯಿ ದೃಷ್ಟಿ ಕಳೆದುಕೊಳ್ಳುತ್ತಾರೆ. ಅರಸನಿಗೆ ರಾಮಾನುಜಾಚಾರ್ಯರು ಕನಸಲ್ಲಿ ಬಂದು 'ನಿನ್ನ ತಾಯಿಗೆ ದೃಷ್ಟಿ ಮರಳಿ ಬರಬೇಕಾದರೆ, ಅವರಿಗೆ ಕಂಚಿ ವರದರಾಜಸ್ವಾಮಿಯ ದರ್ಶನವಾಗಬೇಕು' ಎಂದು ತಿಳಿಸುತ್ತಾರಂತೆ. ಕಂಚಿ ಬಹಳ ದೂರವಿದ್ದು, ಅಲ್ಲಿಗೆ ಹೋಗಿ ಬರಲು ತಾಯಿಯವರಿಗೆ ಕಷ್ಟವಾಗುತ್ತದೆಂದೂ ತಿಳಿದು, ಕಂಚಿ ವರದರಾಜಸ್ವಾಮಿಯ ದೇಗುಲದ ತದ್ರೂಪವನ್ನು ವಿಷ್ಣುವರ್ಧನ ಮದ್ದೂರಿನಲ್ಲಿ ಕಟ್ಟಿಸಿದರಂತೆ. ಕಂಚಿದೇವರನ್ನು ಕೆತ್ತಿದ ಶಿಲ್ಪಿಗಳನ್ನು ಅಲ್ಲಿಂದ ಕರೆಸಿ ಯಥಾವತ್ ಮೂರ್ತಿಯನ್ನು ಇಲ್ಲಿ ಸ್ಥಾಪಿಸಿದರಂತೆ.


-ರೂಪ ಶ್ರೀನಿವಾಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!