ಬೆಂಗಳೂರು: ಸಮಾಜದಲ್ಲಿ ಮಹಿಳೆ/ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ ಸಿನಿಮಾಗಳ ಪಾತ್ರ ಶೂನ್ಯ. ಸಿನಿಮಾಗಳಿಂದ ಇಂದು ಜನರಿಗೆ ಯಾವುದೇ ಉತ್ತಮ ಸಂದೇಶವೂ ರವಾನೆಯಾಗುತ್ತಿಲ್ಲ.
'ಬದಲಾಗಿ ಸಿನಿಮಾಗಳಿಂದಲೇ ಯುವ ಜನತೆ ಹಿಂಸಾತ್ಮಕ ಕೃತ್ಯಗಳನ್ನು ಎಸಗಲು ಪ್ರೇರಿಪಿತರಾಗುತ್ತಿದ್ದಾರೆ ಎಂದು ಎಂದು ಸಾಹಿತಿ ಪ್ರತಿಭಾ ನಂದಕುಮಾರ್ ವಿಷಾಧಿಸಿದರು.
ಜನವಾದಿ ಮಹಿಳಾ ಸಂಘಟನೆಯಿಂದ ಮಂಗಳವಾರ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಏರ್ಪಡಿಸಿದ್ದ ಲೈಂಗಿಕ ದೌರ್ಜನ್ಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ ದೌರ್ಜನ್ಯ ಎಂಬುದಕ್ಕೆ ಇಂದು ಲಿಂಗತಾರತಮ್ಯ ಇಲ್ಲವಾಗಿದೆ. ಸಮಾಜಕ್ಕೆ ಉತ್ತಮ ಸಂದೇಶ ಸಾರಬೇಕಾದ ಸಿನಿಮಾಗಳೇ ದುಷ್ಕೃತ್ಯವೆಸಗುವಂತೆ ಮಾಡುತ್ತಿದ್ದು, ಇಂಥ ಸಿನಿಮಾಗಳನ್ನು ನಿರ್ಬಂಧಿಸಬೇಕೆಂದರು. ಇಲ್ಲವಾದಲ್ಲಿ ಅದು ನೋಡುಗರ ಮೇಲೆ ಪರಿಣಾಮ ಬೀರಿ ಸಮಾಜದ ನೆಮ್ಮದಿ ಹಾಳು ಮಾಡುತ್ತದೆ. ಯಾವ ದೇಶವನ್ನೂ ಬಿಡದೆ ಮಹಿಳೆ/ಪುರುಷರ ಮೇಲೂ ದೌರ್ಜನ್ಯಗಳು ನಿರಂತರವಾಗಿ, ವ್ಯವಸ್ಥಿತವಾಗಿ ನಡೆಯುತ್ತಿವೆ. ಎಲ್ಲೆಡೆ ಇದು ನಿರಂತರವಾಗಿ ಹಾಗೂ ವ್ಯವಸ್ಥಿತವಲಾಗಿ ನಡೆಯುತ್ತಿದೆ.
ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮಾತ್ರವಲ್ಲ ಪ್ರತಿಯೊಬ್ಬರೂ ಮುಂದಾಗ ಬೇಕೆಂದು ಅಭಿಪ್ರಾಯಪಟ್ಟರು. ಉಪನ್ಯಾಸಕ ಮನು ಚಕ್ರವರ್ತಿ ಮಾತನಾಡಿ, ಸಮಾಜದಲ್ಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದರಿಂದದ ಜತೆಗೆ ಇಂದು ಕಾರ್ಪೋರೇಟ್ ಜಗತ್ತಿನಲ್ಲಿಯೂ ಹಿಂಸೆ ತಾಂಡವ ಆಡುತ್ತಿದೆ. ಅಲ್ಲಿ ಹಿಂಸೆಗೊಳಪಡುವವರು ಕೇವಲ ಒಂದು ಆಟಿಕೆ ಮಾತ್ರ ಎಂಬಂತಾಗಿದೆ. ಲೈಂಗಿಕ, ದೈಹಿಕ ದೌರ್ಜನ್ಯಗಳ ತಡೆಗೆ ಚಿಂತನೆ ಅಗತ್ಯ ಎಂದರು.
ಇಂದಿನ ಸಿನಿಮಾ ಜಗತ್ತಿನಿಂದ ಹಾಗೂ ದೌರ್ಜನ್ಯಗಳ ವಿರುದ್ಧ ಅರಿವು ಮೂಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದು ಜಾತಿ, ವರ್ಗ ಎಲ್ಲವನ್ನೂ ಮೀರಿದ್ದು. ದೇಶ, ವಿದೇಶಗಳಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆ ನಿವಾರಣೆಗೆ ಒಂದು ದಾರಿ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ, ಸಂಘ ಸಂಸ್ಥೆಗಳು ಎಲ್ಲ ಒಂದಾಗಬೇಕಿದೆ ಎಂಬ ಒಟ್ಟಾರೆ ಅಭಿಪ್ರಾಯ ಸಂಕಿರಣದಲ್ಲಿ ಕೇಳಿಬಂತು.