ರೇಲ್ವೆ ಬಜೆಟ್

ರೇಲ್ವೇಗೆ ಪ್ರಭು ನವಚೈತನ್ಯ..?

Srinivasamurthy VN

ನವದೆಹಲಿ: ಹಲವು ನಿರೀಕ್ಷೆಗಳೊಂದಿಗೆ ಪ್ರಧಾನಿ ಮೋದಿ ಸರ್ಕಾರ ರೈಲ್ವೆ ಬಜೆಟ್ ಗುರುವಾರ ಮಂಡನೆಯಾಗಲಿದೆ. ಇದು ಹಾಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಚೊಚ್ಚಲ ಬಜೆಟ್ ಸಹ ಆಗಿದ್ದು, ಅವರ ಚಿಂತನೆ, ರೈಲ್ವೆ ಅಭಿವೃದ್ಧಿಗೆ ಕೈಗೊಳ್ಳುವ ಯೋಜನೆಗಳ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ. ಹೀಗಾಗಿ ಇಲ್ಲಿ ಅಭಿವೃದ್ಧಿ `ಪ್ರಭು'ವಾಗುತ್ತದೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಇದಲ್ಲದೆ ರೈಲ್ವೆ ಇಲಾಖೆ ಸಾಕಷ್ಟು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಬಗ್ಗೆ ಸ್ವತಃ ರೈಲ್ವೆ ಸಚಿವರಾದ ಪ್ರಭು ಅವರೇ ಹಲವು ಬಾರಿ ಹೇಳಿದ್ದಾರೆ. ಹೀಗಾಗಿ ಇವುಗಳಿಗೆ ನವಚೈತನ್ಯ ನೀಡುವ ಕೆಲಸವನ್ನು ಅವರು ಮಾಡಲಿದ್ದಾರೆ. ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ರೈಲು ಸಂಪರ್ಕ ಮಾರ್ಗ ಹೊಂದಿರುವ ಭಾರತ ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ಬೆಳವಣಿಗೆ ಹೊಂದಿದೆ. ಆದರೆ, ಇದರ ಬಳಕೆ ಇನ್ನೂ ಹೆಚ್ಚಿನ ರೀತಿಯ ಲ್ಲಾಗಬೇಕಿರುವುದು ಪ್ರಭು ಅವರ ಮುಂದಿರುವ ಸವಾಲಾಗಿದೆ. ಇದೇ ವೇಳೆ ಡೀಸೆಲ್ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದೂ ಸಹ ಪ್ರಭು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.

ಇದರಿಂದ ರೈಲ್ವೆ ಇಲಾಖೆಗೆ ಸಾಕಷ್ಟು ಹಣ ಉಳಿತಾಯವಾಗಲಿದ್ದು, ಹೂಡಿಕೆಗೆ ಹೆಚ್ಚಿನ ಬಲ ತಂದಿದೆ. ಇದನ್ನು. ಯಾವ ರೀತಿ ಹಾಗೂ ಯಾವ ಪ್ರಮಾಣದಲ್ಲಿ ಹಂಚಿಕೆ ಮಾಡಲಾಗುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ.

ಏರುತ್ತಾ ದರ?: ರೈಲ್ವೆ ಇಲಾಖೆಯನ್ನು ಉತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ಯಬೇಕೆಂದಿರುವ ಪ್ರಧಾನಿ ಮೋದಿ ಹಾಗೂ ಸಚಿವ ಪ್ರಭು, ಹೂಡಿಕೆಗಾಗಿ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ರೈಲ್ವೆ ಪ್ರಯಾಣ ದರ ಏರಿಸುವ ಪ್ರಸ್ತಾಪವೂ ಮುಂದಿದ್ದು, ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂಬುದು ಗುರುವಾರ ಮಂಡನೆಯಾಗಲಿರುವ ಬಜೆಟ್‍ನಲ್ಲೇ ತಿಳಿಯಬೇಕು.

ನಿರೀಕ್ಷೆ ಏನು?: ಸುರೇಶ್ ಪ್ರಭು ಇಲಾಖೆಗೆ ಹೊರೆಯಾಗುವಂತಹ ಯಾವುದೇ ಯೋಜನೆಗಳನ್ನು ಹಮ್ಮಿಕೊಳ್ಳುವಲ್ಲಿ ಆಸಕ್ತಿ ವಹಿಸಿಲ್ಲ. ಇದಲ್ಲದೆ, ಈಗಾಗಲೇ ಕೇವಲ ಹೆಗ್ಗಳಿಕೆಗಾಗಿ ಘೋಷಣೆ ಮಾಡಿದ್ದ ಆದರೆ, ಅನುಷ್ಠಾನ ತರಲು ಸಾಧ್ಯವಾಗದ ಕೆಲವೇ ಯೋಜನೆಗಳನ್ನು ರದ್ದು ಮಾಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಹಾಗೇ ಈ ಬಾರಿ ಭರ್ಜರಿ ಯೋಜನೆಗಳನ್ನು ಘೋಷಿಸುವ ಉಸಾಬರಿಗೆ ಹೋಗದ ಪ್ರಭು, 100ಕ್ಕಿಂತ ಕಡಿಮೆ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದರ ಜತೆಗೆ ಸಾಧ್ಯವಾದಷ್ಟು ಮೂಲಗಳಿಂದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಲಿದ್ದಾರೆ. ಇದಲ್ಲದೆ ರೈಲ್ವೆ ಇಲಾಖೆಯಲ್ಲಿ ಪರಿಸರ  ಸ್ನೇಹಿ ಯೋಜನೆಗಳನ್ನು ಅಳವಡಿಸಲು ನಿರ್ಧರಿಸಿದ್ದು, ಹೆಚ್ಚು ಹೆಚ್ಚು ತಾಂತ್ರಿಕ ವ್ಯವಸ್ಥೆಯನ್ನು ಬಳಸಿಕೊಳ್ಳಲು ನಿರ್ಧರಿಸಿದ್ದಾರೆನ್ನಲಾಗಿದೆ.

SCROLL FOR NEXT