ಬೆಂಗಳೂರು: ಭಾರತೀಯ ಮಹಿಳೆಯರ ಮಾನ ಹಾನಿ ಆರೋಪಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, 400 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದು, ಆ ಕೃತ್ಯವನ್ನು ಚಿತ್ರೀಕರಣ ಮಾಡಿರುವುದು ಸಾಮೂಹಿಕ ಅತ್ಯಾಚಾರವಾಗಿದೆ. ಅದು ಸೆಕ್ಸ್ ಹಗರಣ ಅಲ್ಲ ಎಂದು ರಾಹುಲ್ ಗಾಂಧಿ ತಪ್ಪಾಗಿ ಹೇಳಿದ್ದಾರೆ ಎಂದು ಪಿಐಎಲ್ ನಲ್ಲಿ ಹೇಳಲಾಗಿತ್ತು.
ಅರ್ಜಿಯನ್ನು ವಜಾಗೊಳಿಸಿದ ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ ಅರವಿಂದ ಅವರಿದ್ದ ಪೀಠ, ಇದು ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿರುವುದಾಗಿ ಹೇಳಿ, ಅರ್ಜಿದಾರರಾದ ಅಖಿಲ ಭಾರತ ಕ್ರಿಯಾ ಸಮಿತಿಗೆ ರೂ. 25,000 ದಂಡವನ್ನು ವಿಧಿಸಿತು.
ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಾಡಿದ್ದ ಟೀಕೆಗಳು ಅತ್ಯಂತ ಬೇಜವಾಬ್ದಾರಿ ಮತ್ತು ವಿಶೇಷವಾಗಿ ಹಾಸನದ ಮಹಿಳೆಯರಿಗೆ ಅಪಮಾನ ಮಾಡಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಆರೋಪಗಳಿಗೆ ಪ್ರತಿಕ್ರಿಯಿಸುವಂತೆ ಒತ್ತಾಯಿಸಿ ಗಾಂಧಿಗೆ ನೋಟಿಸ್ ನೀಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ರಾಹುಲ್ ಗಾಂಧಿ ಒಬ್ಬ ಸರಣಿ ಅಪರಾಧಿ" ಎಂದು ಹೇಳಿದ ವಕೀಲರು, ಮೋದಿ ಎಂಬ ಉಪನಾಮ ಹೊಂದಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ಹೇಳಿಕೆಗಳು ಸೇರಿದಂತೆ ರಾಹುಲ್ ಈ ಹಿಂದೆ ಮಾಡಿದ್ದ ಹಲವು ಹೇಳಿಕೆಗಳನ್ನು ಉಲ್ಲೇಖಿಸಿದರು.
ಆದರೆ, ಅರ್ಜಿಯಲ್ಲಿ ಯಾವುದೇ ಅರ್ಹತೆ ಕಂಡುಬಂದಿಲ್ಲ ಎಂದು ಹೈಕೋರ್ಟ್, ದಂಡದ ಜೊತೆಗೆ ಅದನ್ನು ವಜಾಗೊಳಿಸಿದೆ. ಅರ್ಜಿದಾರರ ಪರ ವಕೀಲರು ದಂಡವನ್ನು ಮನ್ನಾ ಮಾಡುವಂತೆ ಕೋರಿದರು ಮತ್ತು ಸರಿಯಾದ ಕ್ರಮಕ್ಕಾಗಿ ದಂಡ ವಿಧಿಸಬಾರದು ಎಂದು ವಾದಿಸಿದರು.
ಪುರಾವೆ ಇಲ್ಲದೆ ರಾಹುಲ್ ಗಾಂಧಿ ಮಾಡಿರುವ ಆರೋಪಗಳು ಸಾರ್ವಜನಿಕರನ್ನು ತಪ್ಪುದಾರಿಗೆಳೆಯುತ್ತವೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ ಭಾರತೀಯ ಮಹಿಳೆಯರ ಘನತೆಗೆ ಅಗೌರವನ್ನುಂಟು ಮಾಡಿದೆ. ಗಾಂಧಿಯವರ ಹೇಳಿಕೆಯು ದ್ವೇಷ ಮತ್ತು ಲಿಂಗ ಆಧಾರಿತ ದ್ವೇಷವನ್ನು ಪ್ರೋತ್ಸಾಹಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ರಾಹುಲ್ ಗಾಂಧಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಮತ್ತು ಅವರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗವು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರ್ಟಿನಿಂದ ನಿರ್ದೇಶನವನ್ನು ಕೋರಿತು. ಅರ್ಜಿದಾರರ ಮನವಿಯ ಹೊರತಾಗಿಯೂ, ಈ ವಿಷಯವು ಹೆಚ್ಚಿನ ಪರಿಗಣನೆಗೆ ಅರ್ಹವಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿತು.