ನವದೆಹಲಿ: 2016-17ರ ಪ್ರಸಕ್ತ ಸಾಲಿನ ರೈಲ್ವೆ ಬಜೆಟ್ ಗುರುವಾರ ಮಂಡನೆಯಾಗಲಿದ್ದು, ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಬಜೆಟ್ ಮಂಡಿಸಲಿದ್ದಾರೆ.
ಸುರೇಶ್ ಪ್ರಭು ಅವರು ಮಂಡಿಸುತ್ತಿರುವ 2ನೇ ಬಜೆಟ್ ಇದಾಗಿದ್ದು, ಪ್ರಯಾಣದ ಗುಟ್ಟನ್ನು ಸಚಿವರು ಇಂದು ಮಧ್ಯಾಹ್ನ 12 ಗಂಟೆಗೆ ರಟ್ಟು ಮಾಡಲಿದ್ದಾರೆ.
ಇದೇ ತಿಂಗಳ ಮೊದಲ ವಾರದಲ್ಲಿ ರಾಜ್ಯದಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಸುರೇಶ್ ಪ್ರಭು ನಗರಕ್ಕೆ ಸಬರ್ಬನ್ ರೈಲು ಸೇವೆ ಒದಗಿಸುವುದಾಗಿ ಭರವಸೆ ನೀಡಿದ್ದರು. ಇದರಂತೆ ಈ ಬಾರಿ ಬೆಂಗಳೂರು-ಮೈಸೂರು ನಡುವೆ ಸ್ಪೀಡ್ ರೈಲು ಹಾಗೂ ರಾಜಧಾನಿ ಬೆಂಗಳೂರು ಆಸುಪಾಸಿನ ಉಪನಗರಗಳ ರೈಲು ಸೇವೆಗಳ ಕುರಿತಂತೆ ಇರುವ ನಿರೀಕ್ಷೆಗಳು ಈ ಬಾರಿಯ ಬಜೆಟ್ ನಲ್ಲಿ ಸಾಕಾರಗೊಳ್ಳುವುದೇ ಎಂಬುದರ ಕುರಿತಂತೆ ಹಲವು ಕುತೂಹಲ ಮೂಡಿದೆ.
ಮೂಲಗಳ ಪ್ರಕಾರ ಈ ಬಾರಿ ಮಂಡನೆಯಾಗಲಿರುವ ರೈಲ್ವೆ ಬಜೆಟ್ ನಲ್ಲಿ ಪ್ರಯಾಣದ ಸಾಮಾನ್ಯ ದರದ ಏರಿಕೆಯು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು, ಫಸ್ಟ್ ಕ್ಲಾಸ್, ಎಸಿ ಕೋಚ್ ಗಳ ದರ ಏರಿಕೆಯಾಗುವ ಸಾಧ್ಯತೆಯಿದೆ. ಇದರಂತೆ ಹೊಸ ರೈಲುಗಳ ಘೋಷಣೆ ಕೂಡ ಅನುಮಾನವಾಗಿದೆ.
ಈಗಾಗಲೇ ಆದಾಯ ಹಾಗೂ ಅನುದಾನದ ಕೊರತೆಯಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಭಾರತೀಯ ರೈಲ್ವೆ ಇಲಾಖೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಸಚಿವ ಸುರೇಶ್ ಪ್ರಭು ಅವರು ಯಾವ ರೀತಿಯ ಯೋಜನೆ ಹಾಗೂ ಕ್ರಮಗಳನ್ನು ಕೈಗೊಳ್ಳಲಿದ್ದಾರೆಂಬ ಹಲವು ಕುತೂಹಲಗಳು ಮೂಡತೊಡಗಿದೆ.