ರೈಲ್ವೆ ಬಜೆಟ್

ರೈಲ್ವೇ ಬಜೆಟ್ ಭ್ರಮೆಯ ಹೇಳಿಕೆ: ಮಾಜಿ ರೈಲ್ವೇ ಸಚಿವ ತ್ರಿವೇದಿ

Guruprasad Narayana

ನವದೆಹಲಿ: ೨೦೧೬-೧೭ರ ರೈಲ್ವೇ ಬಜೆಟ್ ಭ್ರಮೆಯ ಹೇಳಿಕೆ ಮತ್ತು ಸರ್ಕಾರ ದೇಶವನ್ನು ದಾರಿತಪ್ಪಿಸುತ್ತಿದೆ ಎಂದು ಮಾಜಿ ರೈಲ್ವೇ ಸಚಿವ ದಿನೇಶ್ ತ್ರಿವೇದಿ ಟೀಕಿಸಿದ್ದಾರೆ.

"ಸುರೇಶ್ ಪ್ರಭು ಮಂಡಿಸಿರುವುದು ರೈಲ್ವೇ ಬಜೆಟ್ ಅಲ್ಲ. ಇದು ಸಚಿವರ ಭ್ರಮೆಯ ಹೇಳಿಕೆ" ಎಂದು ತ್ರಿವೇದಿ ಟೀಕಿಸಿದ್ದಾರೆ.

"ಸರಿಯಾದ ಗುರಿ ಮತ್ತು ಮಾರ್ಗವಿಲ್ಲದ ಈ ಬಜೆಟ್ ನಿಂದ ಈ ಸರ್ಕಾರ ದೇಶದ ದಾರಿತಪ್ಪಿಸುತ್ತಿದೆ" ಎಂದು ತೃಣಮೂಲ ಕಾಂಗ್ರೆಸ್ ಸಂಸದ ಹೇಳಿದ್ದಾರೆ.

ಸುರೇಶ್ ಪ್ರಭು 'ನಪಾಸಾಗಿರುವ ವಿದ್ಯಾರ್ಥಿ' ಎಂದು ಟೀಕಿಸಿರುವ ತ್ರಿವೇದಿ, ಕಳೆದ ಒಂದು ವರ್ಷದಲ್ಲಿ ಅವರು ಮಾಡಿರುವ ಕೆಲಸದ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಅವರಿಗೆ ಧೈರ್ಯವಿಲ್ಲ ಎಂದಿದ್ದಾರೆ.

"ವಿದ್ಯಾರ್ಥಿ ಪರೀಕ್ಷೆಯಲ್ಲಿ ನಪಾಸಾದರೆ, ಅವನು ಅಂಕಪಟ್ಟಿಯನ್ನು ತನ್ನ ಪೋಷಕರ ಜೊತಗೆ ಹಂಚಿಕೊಳ್ಳುವುದಿಲ್ಲ. ಪ್ರಭು ಅವರದ್ದು ಕೂಡ ಇದೇ ತೊಂದರೆ. ಕಳೆದ ವರ್ಷ ನಡೆದ ಕೆಲಸಗಳ ಅಂಕಿ ಅಂಶ ನೀಡುವಲ್ಲಿ ವಿಫಲರಾಗಿದ್ದಾರೆ" ಎಂದಿದ್ದಾರೆ ತ್ರಿವೇದಿ.

"ಈ ರೈಲ್ವೇ ಬಜೆಟ್ ದೇಶವನ್ನು ಮತ್ತೆ ಮೂರ್ಖರನ್ನಾಗಿಸಲು ಹೊರಟಿದೆ. ಇದು ಯಾವ ರೀತಿಯೂ ರೈಲ್ವೇ ಬಜೆಟ್ ಅಲ್ಲ. ಅಂಕಿ ಅಂಶಗಳಿಲ್ಲ. ಬರೀ ದೊಡ್ಡ ಮಾತುಗಳು ಮತ್ತು ಆಶಾವಾದ" ಎಂದಿದ್ದಾರೆ ತ್ರಿವೇದಿ.

"ಸರ್ಕಾರ ಈ ಬಜೆಟ್ ಮಂಡಿಸಿರುವ ರೀತಿ ನೋಡಿದರೆ, ಇನ್ನು ಮುಂದೆ ರೈಲ್ವೇ ಬಜೆಟ್ ಮಂಡಿಸುವುದನ್ನೇ ನಿಲ್ಲಿಸಬೇಕು. ಇದು ಸಮಯಾಹರಣ" ಎಂದಿರುವ ತ್ರಿವೇದಿ "ನನಗೆ ಕೋಪ ಬಂದಿಲ್ಲ ಆದರೆ ನಿರಾಸೆಯಾಗಿದೆ" ಎಂದಿದ್ದಾರೆ.

SCROLL FOR NEXT