ಮುಂಬೈ: ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದ ಕೇಂದ್ರ ರೈಲ್ವೇ ಬಜೆಟ್ ಭಾರತೀಯ ಷೇರುಮಾರುಕಟ್ಟೆ ಹೂಡಿಕೆದಾರರನ್ನು ಸೆಳೆಯುವಲ್ಲಿ ವಿಫಲವಾಗಿದ್ದು, ಸೆನ್ಸೆಕ್ಸ್ 73 ಅಂಕಗಳಷ್ಟು ಕುಸಿತ ಕಂಡಿದೆ.
ಬಜೆಟ್ ಮಂಡನೆಗೂ ಮುನ್ನ ಷೇರುಮಾರುಕಟ್ಟೆ 39 ಅಂಕಗಳಷ್ಟು ಏರಿಕೆಯಾಗಿತ್ತಾದರೂ, ಹೂಡಿಕೆದಾರರ ನಿರೀಕ್ಷೆ ತಲುಪುವಲ್ಲಿ ರೈಲ್ವೇ ಬಜೆಟ್ ವಿಫಲವಾದ ಹಿನ್ನಲೆಯಲ್ಲಿ ಸೆನ್ಸೆಕ್ಸ್ 73 ಅಂಕಗಳ ಕುಸಿತಕಂಡಿದೆ. ಮಧ್ಯಾಹ್ನ ರೈಲ್ವೇ ಬಜೆಟ್ ಘೋಷಣೆ ಮುಗಿಯುತ್ತಿದ್ದಂತೆಯೇ ಸೆನ್ಸೆಕ್ಸ್ ನಲ್ಲಿ ಶೇ.0.32ರಷ್ಟು ಕುಸಿತಕಂಡಿದ್ದು, 73.02 ಅಂಕಗಳ ಕುಸಿತದೊಂದಿಗೆ 22,961.05 ಅಂಕಗಳಿಗೆ ಇಳಿಯಿತು.
ನಿಫ್ಟಿ ಕೂಡ 28.4 ಅಂಕಗಳ ಕುಸಿತ ಕಾಣುವ ಮೂಲಕ ಶೇ.04ರಷ್ಟು ಕುಸಿತದೊಂದಿಗೆ 6,99.30. ಅಂಕಗಳಿಗೆ ಇಳಿಯಿತು. ರೈಲ್ವೇ ಸೆಕ್ಟರ್ ನೊಂದಿಗೆ ಸಂಪರ್ಕವಿರುವ ಪ್ರಮುಖ ಸಂಸ್ಥೆಗಳ ಷೇರುಗಳ ಮೌಲ್ಯ ಕುಸಿತಕಂಡಿದೆ. ಪ್ರಮುಖವಾಗಿ ಬಿಇಎಂಎಲ್, ಕಾರ್ನೆಕ್ಸ್ ಮೈಕ್ರೋ ಸಿಸ್ಟಮ್ಸ್, ತಿತಾಗರ್ಹ್ ವ್ಯಾಗನ್ಸ್, ಕಲಿಂದೀ ರೈಲ್ ಸಂಸ್ಥೆಗಳ ಷೇರು ಮೌಲ್ಯದಲ್ಲಿ ಶೇ.5ರಷ್ಟು ಕುಸಿತಕಂಡುಬಂದಿದೆ.