ನವದೆಹಲಿ: ಕೇಂದ್ರ ಸಾಮಾನ್ಯ ಬಜೆಟ್ 2017ರಲ್ಲಿ ಗ್ರಾಮೀಣಾಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಪ್ರಕಟಿಸಿದೆ.
ನೋಟುಗಳ ಅಮಾನ್ಯತೆಯಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದ ಗ್ರಾಮೀಣ ಪ್ರದೇಶಗಳ ಅಭಿವದ್ಧಿಗೆ ಅನೇಕ ಯೋಜನೆಗಳನ್ನು ನೀಡಿದೆ.
ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಈ ವರ್ಷ 8,200 ಕೋಟಿ ರೂಪಾಯಿ ಮೀಸಲಿಟ್ಟಿದೆ. ಹಣಕಾಸು ವರ್ಷ 2017-18ರಲ್ಲಿ ಗ್ರಾಮೀಣ ವಲಯದ ಅಭಿವೃದ್ಧಿಗೆ 1,87,200 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ವರ್ಷ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿ 48,700 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಮನ್ರೇಗಾದಡಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಶೇಕಡಾ 55ರಷ್ಟು ಹೆಚ್ಚಿಸಲಾಗಿದೆ.
2019ರ ವೇಳೆಗೆ ಗ್ರಾಮೀಣ ಪ್ರದೇಶವನ್ನು ಗುಡಿಸಲು ಮುಕ್ತಗೊಳಿಸಿ ಸರ್ವರಿಗೂ ಸೂರು ಕಲ್ಪಿಸಲು ನಿರ್ಧಾರ. 10 ದಶಲಕ್ಷ ಗ್ರಾಮೀಣ ವಾಸಿಗಳಿಗೆ ಮನೆ ನಿರ್ಮಾಣ. 2019ರ ವೇಳೆಗೆ 10 ದಶಲಕ್ಷ ಮನೆ ನಿರ್ಮಾಣದ ಗುರಿ ಸರ್ಕಾರ ಹೊಂದಿದೆ.
2018ರ ಮೇ 1ರ ಹೊತ್ತಿಗೆ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಪ್ರಕಟಿಸಿದೆ. 20,000 ಮೆಗಾ ವ್ಯಾಟ್ ನ ಸೋಲಾರ್ ವಿದ್ಯುತ್ ಯೋಜನೆಯನ್ನು ಪ್ರಕಟಿಸಿದೆ.
ಬರಪೀಡಿತ ಗ್ರಾಮಗಳಲ್ಲಿ 2016-17ರಲ್ಲಿ 5 ಲಕ್ಷ ಕೊಳಗಳ ನಿರ್ಮಾಣ. 2017-18ರಲ್ಲಿ ಅಷ್ಟೇ ಸಂಖ್ಯೆಯಲ್ಲಿ ಕೊಳಗಳ ನಿರ್ಮಾಣ ಗುರಿಯನ್ನು ಸರ್ಕಾರ ಹೊಂದಿದೆ.
2022ರ ವೇಳೆಗೆ 5 ಲಕ್ಷ ಗ್ರಾಮೀಣ ಕೂಲಿಕಾರರಿಗೆ ಕಲ್ಲು ಕೆಲಸದ ತರಬೇತಿ ನೀಡಲಾಗುತ್ತದೆ.
ಗ್ರಾಮೀಣ ಮಹಿಳೆಯರ ಸಶಕ್ತೀಕರಣಕ್ಕೆ ಈ ವರ್ಷ ಮಹಿಳಾ ಶಕ್ತಿ ಕೇಂದ್ರಗಳ ಸ್ಥಾಪನೆಯನ್ನು ಕೇಂದ್ರ ಸರ್ಕಾರ ಸ್ಥಾಪಿಸಲಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೀಡುವ ಸಾಲದ ಅವಧಿಯನ್ನು 15ರಿಂದ 20 ವರ್ಷಕ್ಕೆ ಹೆಚ್ಚಿಸಲಾಗಿದೆ.ಅಲ್ಲದೆ ಈ ಯೋಜನೆಗೆ ಬಜೆಟ್ ನಲ್ಲಿ ಮೀಸಲಿಟ್ಟ ಹಣವನ್ನು 15,000 ಕೋಟಿಯಿಂದ 23,000 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆಗಳ ಕಾಮಗಾರಿಯನ್ನು 73 ಕಿಲೋ ಮೀಟರ್ ನಿಂದ 133 ಕಿಲೋ ಮೀಟರ್ ಗೆ ವಿಸ್ತರಿಸಲಾಗಿದೆ.
ಕೇಂದ್ರ ಸರ್ಕಾರ ಬಯಲು ಶೌಚ ಮುಕ್ತ ಗ್ರಾಮಗಳ ನಿರ್ಮಾಣದ ಗುರಿಯನ್ನು ಹೊಂದಿದ್ದು ಗ್ರಾಮೀಣ ಪ್ರದೇಶಗಳಿಗೆ ಪೈಪ್ ಮೂಲಕ ನೀರಿನ ಪೂರೈಕೆಯನ್ನು ಮಾಡುವ ಗುರಿ ಹೊಂದಿದೆ.