ನವದೆಹಲಿ: 2017-18ನೇ ಸಾಲಿನ ಬಜೆಟ್ ನಲ್ಲಿ ಗ್ರಾಮೀಣ ಭಾರತಕ್ಕೆ ಹೆಚ್ಚು ಒತ್ತು ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, 2019ರ ವೇಳೆಗೆ ದೇಶದಲ್ಲಿ 1 ಕೋಟಿ ಕುಟುಂಬಗಳನ್ನು ಮತ್ತು 50 ಸಾವಿರ ಗ್ರಾಮ ಪಂಚಾಯ್ತಿಗಳನ್ನು ಬಡತನ ಮುಕ್ತಗೊಳಿಸುವುದು ನಮ್ಮ ಸರ್ಕಾರದ ಗುರಿ ಎಂದು ಬುಧವಾರ ಘೋಷಿಸಿದ್ದಾರೆ.
ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟ ಸುಧಾರಿಸುವ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಹೀಗಾಗಿಯೇ ಬಜೆಟ್ ನಲ್ಲಿ ಹಿಂದೆಂದಿಗಿಂತಲೂ ಉದ್ಯೋಗ ಖಾತ್ರಿಗೆ ಅತಿ ಹೆಚ್ಚು ಅನುದಾನ ನೀಡಲಾಗಿದೆ. ದೇಶದಲ್ಲಿ ಬಡತನ ನಿರ್ಮೂಲನೆಗಾಗಿ ಸರ್ಕಾರ ಮಿಷನ್ ಅಂತ್ಯೋದಯ ಆರಂಭಿಸಲಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಮಿಷನ್ ಅಂತ್ಯೋದಯ ಕಾರ್ಯಕ್ರಮದಡಿ 2019ರೊಳಗೆ, ಮಹಾತ್ಮ ಗಾಂಧಿಯ 150ನೇ ಜಯಂತಿಯೊಳಗೆ ದೇಶದ ಒಂದು ಕೋಟಿ ಕುಟುಂಬಗಳನ್ನು ಮತ್ತು 50 ಸಾವಿರ ಗ್ರಾಮ ಪಂಚಾಯ್ತಿಗಳನ್ನು ಬಡತನ ಮುಕ್ತಗೊಳಿಸಲಾಗುವುದು ಎಂದು ಜೇಟ್ಲಿ ತಿಳಿಸಿದ್ದಾರೆ.
2015-16ನೇ ಸಾಲಿನಲ್ಲಿ 3.5 ಕೋಟಿ ಜನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದು, ಆ ಪೈಕಿ 99 ಲಕ್ಷ ಮಂದಿ 2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದರೆ, 1.95 ಕೋಟಿ ಮಂದಿ 2.5 ಲಕ್ಷದಿಂದ 5 ಲಕ್ಷ ಹಾಗೂ 52 ಲಕ್ಷ ಮಂದಿ 5 ರಿಂದ 10 ಲಕ್ಷ ಆದಾಯ ಹೊಂದಿದ್ದಾರೆ ಎಂದು ತಿಳಿಸಿದರು.
ಜೇಟ್ಲಿ ಅವರು ತಮ್ಮ ಬಜೆಟ್ ನಲ್ಲಿ ಕೃಷಿ ಮತ್ತು ರೈತರ ಕಲ್ಯಾಣಕ್ಕಾಗಿ 51,026 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದು, ಈ ಸಾಲಿನ ಬಜೆಟ್ ಗ್ರಾಮೀಣ ಪ್ರದೇಶದವರಿಗೆ ಅಚ್ಛೇ ದಿನ್ ತರುವಂತಹದ್ದಾಗಿದೆ. ರೈತರು, ಗ್ರಾಮೀಣ ಜನತೆ, ಯುವಜನತೆ, ಬಡವರು, ಮೂಲಸೌಕರ್ಯ, ಹಣಕಾಸು ಕ್ಷೇತ್ರ, ಡಿಜಿಟಲ್ ಎಕಾನಮಿ, ಪಬ್ಲಿಕ್ ಸರ್ವಿಸ್, ಆರ್ಥಿಕ ವ್ಯವಸ್ಥೆ, ತೆರಿಗೆ ನಿರ್ವಹಣೆ ಸೇರಿದಂತೆ ಒಟ್ಟು 10 ಪ್ರಮುಖ ಗುರಿಯನ್ನು ಇಟ್ಟುಕೊಂಡ ಬಜೆಟ್ ಮಂಡಿಸಲಾಗಿದೆ.