ಬಜೆಟ್ ಭಾಷಣದ ಪ್ರತಿಯನ್ನು ತಮ್ಮ ನಿವಾಸದಲ್ಲಿ ಓದುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಲಿರುವ ಬಜೆಟ್ ನಲ್ಲಿ ಘೋಷಿಸುವ ಯೋಜನೆಗಳನ್ನು ಜಾರಿಗೆ ತರಲು ಸಮಯಾವಕಾಶ ಇದೆಯೇ ಇಲ್ಲವೇ ಎಂಬುದನ್ನು ಮುಂಬರುವ ವಿಧಾನಸಭೆ ಚುನಾವಣೆಯ ಫಲಿತಾಂಶ ನಿರ್ಧರಿಸಲಿದೆ.
ಈಗಿನ ಕಾಂಗ್ರೆಸ್ ಸರ್ಕಾರದ ಕೊನೆಯ ಮತ್ತು ಹಾಗೂ ಮುಖ್ಯಮಂತ್ರಿಸಿದ್ದರಾಮಯ್ಯನವರು ಮಂಡಿಸುತ್ತಿರುವ ಆರನೇ ಬಜೆಟ್ ಇದಾಗಿದ್ದು ರಾಜ್ಯದ ಜನತೆ ಅನೇಕ ಆಸೆ, ಆಕಾಂಕ್ಷೆಗಳನ್ನಿಟ್ಟುಕೊಂಡು ಕಾತರದಿಂದ ಕಾಯುತ್ತಿದ್ದಾರೆ.
ಕೃಷಿ ಬೆಳೆಗಳನ್ನು ಬೆಳೆಯಲು ಮತ್ತು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿ ರಾಜ್ಯದ ರೈತರು ಇದ್ದರೆ ಸ್ಟಾರ್ಟ್ ಅಪ್ ಉದ್ದಿಮೆದಾರರು ತಮ್ಮ ಉದ್ಯಮವನ್ನು ಆರಂಭಿಸಲು ಉಚಿತ ಸ್ಥಳವನ್ನು ಕೇಳುತ್ತಿದ್ದಾರೆ. ಆರೋಗ್ಯ ವಲಯದ ವೃತ್ತಿಪರರು ತಮ್ಮ ಕೌಶಲ್ಯಾಭಿವೃದ್ಧಿಯನ್ನು ಮೇಲ್ದರ್ಜೆಗೇರಿಸಲು ಸರ್ಕಾರದಿಂದ ಸಾಂಸ್ಥಿಕ ವ್ಯವಸ್ಥೆಗೆ ಹೆಚ್ಚಿನ ಹೂಡಿಕೆಯನ್ನು ಅಪೇಕ್ಷಿಸುತ್ತಿದ್ದಾರೆ.
ಇಂದು ಮುಖ್ಯಮಂತ್ರಿಯವರು ಮಂಡಿಸುತ್ತಿರುವ ರಾಜ್ಯ ಬಜೆಟ್ ಗೆ ಮುನ್ನ ಜನರ ಆಶೋತ್ತರಗಳನ್ನು ಕೇಳಿದಾಗ ಅವರಿಂದ ಬಂದ ಪ್ರತಿಕ್ರಿಯೆ ಹೀಗಿದೆ:
ಬೆಂಗಳೂರಿನ ಮೊಬೈಲ್ ಸ್ಟಾರ್ಟ್ ಅಪ್ ಉದ್ದಿಮೆದಾರ ವಿಕೆಡ್ ರೈಡ್ ನ ಸಹ ಸ್ಥಾಪಕ ಅನಿಲ್ ಜಿ, ಸ್ಟಾರ್ಟ್ ಅಪ್ ಉದ್ದಿಮೆದಾರರಿಗೆ ನೆರವಾಗಲು ಮೊಬೈಲ್ ಸೇವೆಗಳಿಗೆ ಸರ್ಕಾರ ಬೆಂಬಲ ನೀಡಬೇಕು. ವಾಣಿಜ್ಯ ಉದ್ದೇಶಗಳ ವಾಹನಗಳಿಗೆ ರಸ್ತೆ ತೆರಿಗೆಯಿಂದ ವಿನಾಯ್ತಿ ನೀಡಬೇಕು. ಸ್ಟಾರ್ಟ್ಅಪ್ ಸ್ಪರ್ಧೆಗಳಿಗೆ ನೆರವಾಗಲು ಕೋಶವೊಂದನ್ನು ತೆರೆಯಬೇಕು ಎಂದು ಅಪೇಕ್ಷಿಸುತ್ತಾರೆ.
ಸಜ್ಜನ್ ರಾಜ್ ಮೆಹ್ತಾ ಎಂಬ ವ್ಯಾಪಾರಿ, ಬಿಬಿಎಂಪಿ ವ್ಯಾಪಾರ ಅನುಮತಿಯನ್ನು ತೆಗೆದುಹಾಕಬೇಕು, ಇ-ವೆ ಬಿಲ್ ನಲ್ಲಿ ವಿವಿಧ ನಿಯಮಗಳನ್ನು ಹೇರಬಾರದು, ಬೆಂಗಳೂರು ಸುತ್ತಮುತ್ತ ವ್ಯಾಪಾರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎನ್ನುತ್ತಾರೆ.
ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಸಣ್ಣ ಆದಾಯವಿರುವ ವ್ಯಾಪಾರಿಗಳು ಹಣವಿಲ್ಲದೆ ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಪ್ಯಾಕೇಜ್ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸುತ್ತಾರೆ.
ಹುಬ್ಬಳ್ಳಿಯ ಕುಸುಗಾಲ್ ಎಂಬ ಗ್ರಾಮದಲ್ಲಿ 6 ಎಕರೆ ಜಮೀನನ್ನು ಹೊಂದಿರುವ ಖದರ್ಸಾಬ್ ಮುಲ್ಲನವರ್ ಎಂಬ ರೈತ, ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿಯಾದವರಿಗೆ ಪ್ರತ್ಯೇಕ ನಿಧಿ ಎಂದು ಬಜೆಟ್ ನಲ್ಲಿ ಬಿಡುಗಡೆ ಮಾಡಬೇಕು. ರೈತರು ಮತ್ತು ಕಾರ್ಮಿಕರಿಗೆ ನಿಗದಿತ ನಿಶ್ಚಿತ ಆದಾಯವೆಂಬುದಿರಬೇಕು. ಉತ್ತಮ ಬೆಲೆ ಸಿಗುವಲ್ಲಿಯವರೆಗೆ ತಮ್ಮ ಬೆಳೆಗಳನ್ನು ಸಂರಕ್ಷಿಸಿಡಲು ಶೀತ ಸಂಗ್ರಹ ವ್ಯವಸ್ಥೆ ಒದಗಿಸಿಕೊಡಬೇಕು, ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸುವ ಮೂಲಕ ನೀರಾವರಿ ಸೌಲಭ್ಯಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಾರೆ.
ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿ ವಿದ್ಯುನ್ ರಾಜ್ ಎ ಮಾತನಾಡಿ, ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಜಾರಿ ಕುರಿತು ನಿಗಾ ವಹಿಸಲು ಯೋಜನೆ, ಮಹಿಳೆಯರ ಸಶಕ್ತೀಕರಣಕ್ಕೆ ಹಣಕಾಸು ನೆರವು, ಉದ್ಯೋಗಾವಕಾಶ, ಎರಡನೇ ದರ್ಜೆಯ ನಗರಗಳಲ್ಲಿ ಉತ್ತಮ ಮೂಲಭೂತ ಸೌಕರ್ಯ, ಉತ್ತಮ ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ಒದಗಿಸಿಕೊಡಬೇಕು.
ಸಾರ್ವಜನಿಕ ಆರೋಗ್ಯ ಫೌಂಡೇಶನ್ ನ ಹೆಚ್ಚುವರಿ ಪ್ರಾಧ್ಯಾಪಕ ವೈದ್ಯ ಡಾ.ಗಿರಿಧರ್ ಆರ್ ಬಾಬು ಮಾತನಾಡಿ, ಆರೋಗ್ಯ ಥಿಂಕ್-ಟ್ಯಾಂಕ್ ನಲ್ಲಿ ತಾಂತ್ರಿಕ ತಜ್ಞರ ನೇಮಕ, ಸಾರ್ವಜನಿಕ ಆರೋಗ್ಯ ಕಾರ್ಯದಲ್ಲಿ ಹೂಡಿಕೆ, ಕೌಶಲ್ಯ ಮೇಲ್ದರ್ಜೆ ಮತ್ತು ಬಹುಶಿಸ್ತಿನ ಸಾರ್ವಜನಿಕ ಆರೋಗ್ಯ ಕಾರ್ಯಪಡೆಯಲ್ಲಿ ಹೂಡಿಕೆ, ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರಿಂದ ರೋಗಗಳ ಕುರಿತು ಮಾಹಿತಿ ಸಿಗುವಂತಾಗಬೇಕು ಎಂದು ಹೇಳುತ್ತಾರೆ.