ಬೆಂಗಳೂರು: ರಾಮನಗರ ಜಿಲ್ಲೆ ಮೇಲೆ ಸಿಎಂ ಕುಮಾರ ಸ್ವಾಮಿ ತುಸು ಹೆಚ್ಚೆ ಒಲವು ತೋರಿದ್ದಾರೆ. ದೊಡ್ಡದಾಗಿ ಬೆಳೆಯುತ್ತಿರುವ ಚಲನಚಿತ್ರೋದ್ಯಮದಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚಿತ್ರದ ತಯಾರಿಕೆ, ನಿರ್ದೇಶನ, ಛಾಯಾಚಿತ್ರ, ಧ್ವನಿ, ಸಂಕಲನ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡಲು ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿದ್ದಾರೆ.
ಕುಮಾರಸ್ವಾಮಿಯವರ ಸ್ವಕ್ಷೇತ್ರವೂ ಆಗಿರುವ ರಾಮನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ವಿಶ್ವವಿದ್ಯಾನಿಲಯ ತೆರೆಯಲು 30 ಕೋಟಿ ರೂ. ಬಂಡವಾಳ ಮೀಸಲಿಟ್ಟಿದ್ದಾರೆ.
ರಾಮನಗರ ಫಿಲಂ ಸಿಟಿಯಲ್ಲಿ ಛಾಯಾಚಿತ್ರ, ಸಂಕಲನ, ಸೌಂಡ್ ರೆರ್ಕಾಡಿಂಗ್ ಮಾಡುವ ಸಂಸ್ಥೆ, ಅನಿಮೇಷನ್ ಸ್ಟುಡಿಯೋಗಳು, ಕಂಪ್ಯೂಟರ್ ಗ್ರಾಫಿಕ್ ಸ್ಟುಡಿಯೋಗಳು ಚಲನಚಿತ್ರ ರಂಗಕ್ಕೆ ಸೇವೆ ಸಲ್ಲಿಸುವ ಉದ್ಯಮಗಳಿಗೆ ಪ್ರೋತ್ಸಾಹ ನೀಡಲು 40 ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಬಜೆಟ್ನಲ್ಲಿ ಘೋಷಿಸಿದ್ಧಾರೆ. ಹೊರ ದೇಶದಿಂದ ಚಿತ್ರ ನಿರ್ಮಾಣಕ್ಕಾಗಿ ಬರುವ ಕಲಾವಿದರು ಮುಂತಾದ ತಂತ್ರಜ್ಞರಿಗೆ ವಸತಿ ಹಾಗೂ ಇನ್ನಿತರೆ ಅವಶ್ಯಕ ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕಾಗಿ 20 ಕೋಟಿ ರೂ. ನೀಡುವುದಾಗಿ ಬಜೆಟ್ನಲ್ಲಿ ಪ್ರಕಟಿಸಿದ್ದಾರೆ.
ರಾಮನಗರದಲ್ಲಿ 40 ಕೋಟಿ ವೆಚ್ಚದಲ್ಲಿ ಸೂಪರ್ ಸ್ಫೆಷಾಲಿಟಿ ಆಸ್ಪತ್ರೆ ಆರ್ಟ್ಸ್ ಅಂಡ್ ಕ್ರಾಫ್ಟ್ ವಿಲೇಜ್. ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ.