ನವದೆಹಲಿ: ಪ್ರಸಕ್ತ ವರ್ಷದ ಬಜೆಟ್ ಮಂಡಿಸಿದ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಾಕಷ್ಟು ಯೋಜನೆಗಳನ್ನು ಘೋಷಣೆ ಮಾಡಿದ್ದು, ಪ್ರಮುಖವಾಗಿ ದೇಶದಲ್ಲಿ ಈ ವರ್ಷ24 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ದೆಹಲಿಯ ಸಂಸತ್ ಭವನದಲ್ಲಿ ಮಾತನಾಡಿದ ಅರುಣ್ ಜೇಟ್ಲಿ, ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರವನ್ನು ಜನರ ಮನೆಗೆ ತೆಗೆದುಕೊಂಡು ಹೋಗಬಯಸುತ್ತದೆ. ಭಾರತ ಆರೋಗ್ಯಕರವಾಗಿದ್ದರೆ ಮಾತ್ರ ಆರ್ಥಿಕ ಸ್ಥಿತಿಯೂ ಆರೋಗ್ಯಕರವಾಗಿರುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ವಿಶೇಷ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ ಎಂದು ಹೇಳಿದರು. ಪ್ರಮುಖವಾಗಿ ಬಡವರಿಗೆ ಉಚಿತ ಔಷಧಿ ದೊರಕಿಸಲು 12,000 ಕೋಟಿ ರುಪಾಯಿ ನಿಗದಿಪಡಿಸಲಾಗಿದ್ದು, ಬಡವರಿಗೆ ಉಚಿತ ಡಯಾಲಿಸಿಸ್ ಗಾಗಿ ಯೋಜನೆ ರೂಪಿಸಲಾಗಿದೆ. ಇದಲ್ಲದೆ ಸ್ಟಂಟ್ ಗಳ ದರ ಇಳಿಕೆ ಮಾಡಲಾಗಿದ್ದು, ಎಲ್ಲ ರೀತಿಯ ವೈದ್ಯಕೀಯ ಸೇವೆಗಳೂ ಆನ್ ಲೈನ್ ನಲ್ಲಿ ಲಭ್ಯವಿದೆ. ಇದಲ್ಲದೆ ನ್ಯಾಷನಲ್ ಹೆಲ್ತ್ ಪಾಲಿಸಿ ಮೂಲಕ ಅತ್ಯುತ್ತಮ ಆರೋಗ್ಯ ಸೇವೆ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗೆ 30 ಸಾವಿರ ಕೋಟಿ ಮೀಸಲಿರಿಸಲಾಗಿದ್ದು, ರಾಷ್ಟ್ರೀಯ ಹೆಲ್ತ್ ಪಾಲಿಸಿ ಮೂಲಕ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಯೋಜನೆ ರೂಪಿಸಲಾಗಿದೆ.
ಕ್ಷಯ ರೋಗಿಗಳಿಗಾಗಿ 600 ಕೋಟಿ ರುಪಾಯಿ ನಿಗದಿಪಡಿಸಲಾಗಿದ್ದು, ಟಿಬಿ ರೋಗಿಗಳ ಚಿಕಿತ್ಸೆಗಾಗಿ, ಪೌಷ್ಟಿಕಾಂಶಕ್ಕಾಗಿ 600ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. 10 ಕೋಟಿ ಬಡ ಮತ್ತು ನಿರ್ಗತಿಕರ ಸಂರಕ್ಷಣೆಗಾಗಿ ಪ್ರತೀ ಕುಟುಂಬಕ್ಕೆ 5 ಲಕ್ಷ ರುಪಾಯಿ ನೀಡಲಾಗುವುದು. ಪ್ರತೀ ಕುಟುಂಬಕ್ಕೆ ಆಸ್ಪತ್ರೆ ವೆಚ್ಚಕ್ಕಾಗಿ 5 ಲಕ್ಷ ರೂ. ಮೀಸಲಿರಿಸಲಾಗಿದ್ದು, 50 ಲಕ್ಷ ಬಿಪಿಎಲ್ ಫಲಾನುಭವಿಗಳಿಗೆ ಯೋಜನೆ ಉಪಯುಕ್ತವಾಗಲಿದೆ. ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ 1 ಕುಟುಂಬಕ್ಕೆ 5 ಲಕ್ಷ ರೂಪಾಯಿ ವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಇದು ವಿಶ್ವದ ಅತೀ ದೊಡ್ಡ ಸರ್ಕಾರಿ ಫಂಡಿಂಗ್ ಆರೋಗ್ಯ ವಿಮಾ ಯೋಜನೆಯಾಗಿದೆ. ಈ ಯೋಜನೆಯಿಂದಾಗಿ 10 ಕೋಟಿ ಕುಟುಂಬದ ಬಡ ಮತ್ತು ಅಶಕ್ತ 50 ಕೋಟಿ ಮಂದಿಗೆ ಲಾಭವಾಗಲಿದೆ ಎಂದು ಜೇಟ್ಲಿ ಹೇಳಿದರು.
24 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ
ಇದೇ ವೇಳೆ ದೇಶದಲ್ಲಿರುವ ಪ್ರಸ್ತುತ ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದಲ್ಲದೆ ಈ ವರ್ಷ 24 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಮಾಡುವುದಾಗಿ ಹೇಳಿದ ಜೇಟ್ಲಿ, ಪ್ರತೀ ಮೂರು ಲೋಕಸಭಾ ಕ್ಷೇತ್ರದಲ್ಲಿ ತಲಾ 1 ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗುವುದು. ಅಲ್ಲದೆ ಹೆಲ್ಚ್ ವೆಲ್ ನೆಸ್ ಸ್ಕೀಂಗಾಗಿ 1200 ಕೋಟಿ ಮೀಸಲಿರಿಸಲಾಗುತ್ತದೆ. ಇನ್ನು ದೆಹಲಿಯ ವಾಯು ಮಾಲಿನ್ಯ ನಿಜಕ್ಕೂ ಕಳವಳಕಾರಿ ಎಂದ ಜೇಟ್ಲಿ ಇದಕ್ಕಾಗಿ ದೆಹಲಿ, ಹರ್ಯಾಣ, ಪಂಜಾಬ್, ಉತ್ತರ ಪ್ರದೇಶದಲ್ಲಿ ಮಾಲಿನ್ಯ ಕಡಿಮೆ ಮಾಡಲು ವಿಶೇಷ ಯೋಜನೆಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.