ಕೇಂದ್ರ ಬಜೆಟ್

ಕೇಂದ್ರ ಬಜೆಟ್ 2020: ಆರೋಗ್ಯ ಕ್ಷೇತ್ರ: ಮಕ್ಕಳ ಆರೋಗ್ಯಕ್ಕಾಗಿ ಇಂದ್ರಧನುಷ್ ಯೋಜನೆ ವಿಸ್ತರಣೆ

Srinivasamurthy VN

ನವದೆಹಲಿ: ಮಕ್ಕಳ ಆರೋಗ್ಯ ಸಂರಕ್ಷಣೆಗಾಗಿ ಇಂದ್ರಧನುಷ್ ಯೋಜನೆಯ ವಿಸ್ತರಿಸಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಸಂಸತ್ ನಲ್ಲಿ 2020ನೇ ಸಾಲಿನ ಬಜೆಟ್ ಮಂಡಿಸಿದ ಅವರು, ಆರೋಗ್ಯ ವಲಯಕ್ಕೆ ಸಂಬಂಧಿಸಿದ ಯೋಜನೆಗಳ ವಿವರ ನೀಡಿದರು. ಈ ವೇಳೆ, 'ಮಕ್ಕಳ ಆರೋಗ್ಯ ಸಂರಕ್ಷಣೆಗಾಗಿ ಇಂದ್ರಧನುಷ್ ಯೋಜನೆಯ ವಿಸ್ತರಣೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಮೂಲಕ ತಾಲ್ಲೂಕು ಮತ್ತು ಹೋಬಳಿ ಹಂತದ ಅಸ್ಪತ್ರೆಗಳಿಗೂ ಸೌಲಭ್ಯ ಒದಗಿಸಲು ಚಿಂತನೆ. ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇನ್ನು ಕ್ಷಯರೋಗ ಹೋದರೆ ದೇಶ ಬಲಿಷ್ಠವಾಗುತ್ತದೆ ಎಂದು ಅಭಿಪ್ರಾಯಪಟ್ಟ ನಿರ್ಮಲಾ ಸೀತಾರಾಮನ್ ಅವರು, 2025ರ ವೇಳೆಗೆ ಕ್ಷಯ ರೋಗ ನಿರ್ಮೂಲನೆಗೆ ಪಣ ತೊಟ್ಟರು. 2024ರ ಹೊತ್ತಿಗೆ ದೇಶದ ಎಲ್ಲ ಜಿಲ್ಲೆಗಳಿಗೆ ಜನ ಆರೋಗ್ಯ ಯೋಜನೆ ವಿಸ್ತರಣೆ ಮಾಡಲಾಗುವುದು. ಅಂತೆಯೇ ವೈದ್ಯಕೀಯ ಸಲಕರಣೆಗಳಿಂದ ಸಂಗ್ರಹಿಸುವ ತೆರಿಗೆಯನ್ನು ಗುರುತಿಸಲಾದ 112 ಜಿಲ್ಲೆಗಳಲ್ಲಿ ಆರೋಗ್ಯ ಸುಧಾರಿಸಲು ಬಳಸಲಾಗುವುದು. ಜನರಿಗೆ ಸುಲಭ ಬೆಲೆಯಲ್ಲಿ ಔಷಧಿ ದೊರಕುವಂತಾಗಲು ಜನೌಷಧಿ ಕೇಂದ್ರಗಳನ್ನು ದೇಶದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಆಯುಷ್ಮಾನ್ ಭಾರತ್ ಅಡಿಯಲ್ಲಿ ಸುಸಜ್ಜಿತ ದ ಆಸ್ಪತ್ರೆಗಳಿಲ್ಲದ ಜಿಲ್ಲೆಗಳಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಲು ಮತ್ತು ಕೃಷಿ ಉತ್ಪನ್ನಗಳಿಗೆ ಗೋದಾಮುಗಳನ್ನು ಸ್ಥಾಪಿಸಲು ಒತ್ತು ನೀಡಲಾಗುವುದು. ಜಾನುವಾರುಗಳ ಉತ್ಪಾದಕತೆಯನ್ನು ಹೆಚ್ಚಿಸಲು ಕೃತಕ ಗರ್ಭಧಾರಣೆಯ ವ್ಯಾಪ್ತಿಯನ್ನು ಶೇಕಡಾ 30 ರಿಂದ 70 ಕ್ಕೆ ವಿಸ್ತರಿಸಲು ಸರ್ಕಾರ ಯೋಜಿಸಿದೆ ಎಂದು ಹೇಳಿದರು.

ವಾಯುಮಾಲಿನ್ಯ ಕಡಿತಕ್ಕೆ 4,400 ಕೋಟಿ ರೂ ಮೀಸಲು
ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತೇವೆ. ಮಾಲಿನ್ಯಕಾರಿ ಹಳೆಯ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳನ್ನು ಮುಚ್ಚಲು ಸೂಚಿಸುತ್ತೇವೆ. 10 ಲಕ್ಷಕ್ಕೂ ಹೆಚ್ಚು ಜನರಿರುವ ನಗರಗಳಲ್ಲಿ ವಾಯುಮಾಲಿನ್ಯ ಕಡಿಮೆ ಮಾಡಲು ರಾಜ್ಯ ಸರ್ಕಾರಗಳು ಪ್ರಸ್ತಾವ ಕೊಟ್ಟರೆ ಅನುದಾನ ಕೊಡುತ್ತೇವೆ. ಇದಕ್ಕಾಗಿ  4,400 ಕೋಟಿ ರೂ ಮೀಸಲಿಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದರು.

ಜಲಜೀವನ ಯೋಜನೆಗೆ 3.60 ಲಕ್ಷ ಕೋಟಿ ರೂ
ಎಲ್ಲ ಮನೆಗಳಿಗೆ ಕುಡಿಯುವ ನೀರು ಒದಗಿಸಲು ಜಲ ಜೀವನ್ ಮಿಷನ್ ಘೋಷಣೆ. ಇದಕ್ಕಾಗಿ 3.60 ಲಕ್ಷ ಕೋಟಿ ರೂ ಘೋಷಣೆ. ಸ್ಥಳೀಯ ಕುಡಿಯುವ ನೀರು ಶುದ್ಧೀಕರಣ ಬಳಕೆ. 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ನಗರಗಳಿಗೆ ಈ ಯೋಜನೆಯನ್ನು ಇದೇ ವರ್ಷ ಅನುಷ್ಠಾನಕ್ಕೆ ತರಲು ಸೂಚಿಸುತ್ತೇವೆ ಎಂದು ಹೇಳಿದರು.

SCROLL FOR NEXT