ರಾಜ್ಯ ಬಜೆಟ್

ರಾಜ್ಯ ಬಜೆಟ್ 2023: ನಮ್ಮ ಮೆಟ್ರೋ ವಿಸ್ತರಣೆಗೆ 31,328 ಕೋಟಿ ರೂ. ಅನುದಾನ

Lingaraj Badiger

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದು, ಬೆಂಗಳೂರಿನ ನಮ್ಮ ಮೆಟ್ರೋ ವಿಸ್ತರಣೆಗೆ 31,328 ಕೋಟಿ ರೂಪಾಯಿ ಅನುದಾನ ನೀಡಿದ್ದು, ಎರಡು ಪ್ರತ್ಯೇಕ ಮೆಟ್ರೋ ರೈಲು ಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ.

ಇಂದು ವಿಧಾನಸಭೆಯಲ್ಲಿ ದಾಖಲೆಯ 14ನೇ ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು, ಮೆಟ್ರೋ ಹಂತ-3ರ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಲಾಗಿದೆ ಎಂದರು.

ಮೆಟ್ರೋ ಮೂರನೆ ಹಂತದ ಯೋಜನೆಯಡಿ ಅಂದಾಜು 16,328 ಕೋಟಿ ರೂ. ವೆಚ್ಚದಲ್ಲಿ ಕೆಂಪಾಪುರದಿಂದ ಜೆಪಿ ನಗರ 4ನೆ ಹಂತದವರೆಗಿನ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಪಶ್ಚಿಮ ಒಆರ್‍ಆರ್ ಮಾರ್ಗವನ್ನು ಒಳಗೊಳ್ಳುವ ಮೂಲಕ 45ಕಿಮೀ ಉದ್ದದ ಮೆಟ್ರೋ ರೈಲು ಯೋಜನೆಯ ವಿಸ್ತೃತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲಾಗಿದೆ ಎಂದರು.

ಇದರೊಂದಿಗೆ ಹೆಬ್ಬಾಳದಿಂದ ಸರ್ಜಾಪುರದವರೆಗೆ 37 ಕಿ.ಮೀ ಉದ್ದದ ಹೊಸ ಮೆಟ್ರೊ ಮಾರ್ಗವನ್ನು 15,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸುವ ಹೊಸ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಿಎಂ ತಿಳಿಸಿದರು.

ಪ್ರಸಕ್ತ ವರ್ಷ ಬೈಯ್ಯಪ್ಪನಹಳ್ಳಿಯಿಂದ ಕೃಷ್ಣರಾಜಪುರ, ಕೆಂಗೇರಿಯಿಂದ ಚಲ್ಲಘಟ್ಟ, ನಾಗಸಂದ್ರದಿಂದ ಮಾದವಾರ, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಮೆಟ್ರೊ ಮಾರ್ಗ ವಿಸ್ತರಣೆಯಾಗಲಿದೆ ಎಂದರು.

ಮುಂದಿನ ಮೂರು ವರ್ಷಗಳಲ್ಲಿ 70ಕಿ.ಮೀ. ಉದ್ದದ ಸಂಪರ್ಕ ಜಾಲ ಹೊಂದಿರುವ ಮೆಟ್ರೋ ಮಾರ್ಗವನ್ನು 176 ಕಿಮೀಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. 
ಪ್ರತಿನಿತ್ಯ 5.7 ಲಕ್ಷ ಪ್ರಯಾಣಿಕರು ಸಂಚರಿಸುವ ಮೆಟ್ರೋ ರೈಲು ಮಾರ್ಗ 70ಕಿಮೀ ಉದ್ದದ ಸಂಪರ್ಕ ಜಾಲ ಹೊಂದಿದ್ದು, 2024ರ ಅಂತ್ಯದ ವೇಳೆಗೆ ಬಯ್ಯಪ್ಪನಹಳ್ಳಿಯಿಂದ ಕೆಆರ್ ಪುರಂವರೆಗೆ, ಕೆಂಗೇರಿ ಯಿಂದ ಚಲ್ಲಘಟ್ಟದವರೆಗೆ, ನಾಗಸಂದ್ರದಿಂದ ನಾಗವಾರದವರೆಗೆ, ಆರ್‍ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಒಟ್ಟು 27ಕಿಮೀ ಉದ್ದದ ನೂತನ ಮಾರ್ಗಗಳನ್ನು ಪ್ರಾರಂಭಿಸಲಾಗುವುದು ಎಂದು ಸಿಎಂ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ಇದರ ಜತೆಗೆ ಪ್ರಗತಿಯಲ್ಲಿರುವ ಏರ್‍ಪೋರ್ಟ್ ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿ 2026ರ ವೇಳೆಗೆ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ನಡೆಸುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.

SCROLL FOR NEXT