ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಬ್ಯಾಂಕ್: ಅಗತ್ಯಕ್ಕೆ ಬದಗುವ ಆಪ್ತಮಿತ್ರ

ಗೃಹ ಸಾಲ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಾಲವು ಬ್ಯಾಂಕ್‌ನ ಆದ್ಯತಾ ವಲಯವಾಗಿದೆ. ಬೆಂಗಳೂರು...

Vishwanath S
Updated On : 13 Dec 2013, 11:29 am

ಸಾಲ ಸಹ್ಯಗೊಳಿಸಲು ಎಸ್‌ಬಿಐ ಸೂತ್ರಗಳು
ಗೃಹ ಸಾಲ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಾಲವು ಬ್ಯಾಂಕ್‌ನ ಆದ್ಯತಾ ವಲಯವಾಗಿದೆ. ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳಲ್ಲಿ ಸಾಲದ ಪ್ರಮಾಣ ಹೆಚ್ಚಿಸಲು ಬ್ಯಾಂಕ್ ಉತ್ಸುಕವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ ಅಶ್ವಿನಿ ಮೆಹ್ರಾ ಹೇಳಿದ್ದಾರೆ.
ಆರ್ಥಿಕ ವ್ಯವಸ್ಥೆಯ ಸುಧಾರಣೆ ಹಾಗೂ ಬೆಂಗಳೂರಿನ ಅಭಿವೃದ್ಧಿ ಬಳಿಕ ನಗರದಲ್ಲಿ ಮನೆ ನಿರ್ಮಾಣ ಕಾರ್ಯ ಹೆಚ್ಚಾಗುತ್ತಿದೆ. ದೇಶದ ಇತರೆ ಬೃಹತ್ ನಗರಗಳಿಗೆ ಹೋಲಿಸಿದರೆ ರಿಯಲ್ ಎಸ್ಟೇಟ್ ಉದ್ಯಮವು ಸಾರ್ವಜನಿಕರಿಗೆ ಕೈಗೆಟಕುವಂತಿದೆ. ಇದರಿಂದ ಕಳೆದ 3 ವರ್ಷಗಳಲ್ಲಿ ಗೃಹ ನಿರ್ಮಾಣ ಹಾಗೂ ಗೃಹ ಸಾಲ ಪ್ರಮಾಣ ಏರಿಕೆಯಾಗಿದೆ ಎಂದು ಅವರು 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದರು.  ರಿಯಲ್ ಎಸ್ಟೇಟ್ ಉದ್ಯಮದ ಕಡೆಗೆ ಯುವಕರು ಹಾಗೂ ಉದ್ಯೋಗಸ್ಥರನ್ನು ಆಕರ್ಷಿಸುವ ಉದ್ದೇಶದಿಂದ ಎಸ್‌ಬಿಐ ವಿಶೇಷ ಸಾಲ ಯೋಜನೆ ರೂಪಿಸಿದೆ. ಈಗಾಗಲೇ ಗೃಹ, ವಾಹನ ಹಾಗೂ ಸಣ್ಣ ಕೈಗಾರಿಕೆ ಕ್ಷೇತ್ರದಲ್ಲಿ ಬ್ಯಾಂಕ್ ಉತ್ತಮ ಸ್ಥಾನ ಹೊಂದಿದ್ದು, ಪಾರುಪತ್ಯ ಸ್ಥಾಪಿಸಲು ಸಜ್ಜಾಗಿದೆ. ಇದರ ಜತೆಗೆ ಆರ್‌ಬಿಐ ಅನುಮತಿ ನೀಡಿದರೆ ವಿದೇಶಿ ಖಾಸಗಿ ಬ್ಯಾಂಕ್‌ಗಳ ಪೈಪೋಟಿ ಎದುರಿಸಲು ಎಸ್‌ಬಿಐ ಸನ್ನದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
-  ಬ್ಯಾಂಕಿನ ನೂತನ ಗೃಹ ಸಾಲ ಯೋಜನೆ ವಿವರಿಸಿ
ಯುವ ಗ್ರಾಹಕರಿಗಾಗಿ 'ಎಸ್‌ಬಿಐ ಯುವ ಗೃಹ ಸಾಲ' ಯೋಜನೆ ಪ್ರಾರಂಭಿಸಲಾಗಿದೆ. ಈ ಯೋಜನೆಯ ಪ್ರಕಾರ ಸಾಮಾನ್ಯ ಗೃಹ ಸಾಲಕ್ಕಿಂತ ಶೇ.20ರಷ್ಟು ಅಧಿಕ ಸಾಲ ದೊರೆಯುತ್ತದೆ. 21ರಿಂದ 45 ವಯಸ್ಸಿನೊಳಗಿನ ಯುವಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಮಾಸಿಕ ರು. 30 ಸಾವಿರ ಸಂಬಳ ಹೊಂದಿದ ಗ್ರಾಹಕರು ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, 30 ವರ್ಷಗಳ ಕಂತನ್ನು ನೀಡಲಾಗುತ್ತದೆ. ಇನ್ನು ಎಸ್‌ಬಿಐ ಗೃಹಸಾಲಕ್ಕೆ ಸಂಬಧಿಸಿ ಓವರ್ ಡ್ರಾಫ್ಟ್ ಸೌಲಭ್ಯವಿದೆ. ನಿಗದಿತ ಕಂತಿನ ಮೊತ್ತಕ್ಕಿಂತಲೂ ಅಧಿಕ ಮೊತ್ತವನ್ನೂ ಪಾವತಿಸಬಹುದಾಗಿದೆ. ಇದರಿಂದ ಉದ್ಯೋಗಿಗಳ ಕೈಗೆ ಹೆಚ್ಚಿನ ಹಣ ಬಂದಾಗ ಸಾಲ ಮರುಪಾವತಿಗೆ ಬಳಸಿಕೊಳ್ಳಬಹುದು. ಓವರ್ ಡ್ರಾಫ್ಟ್ ವ್ಯವಸ್ಥೆಯಿಂದ ಪಾವತಿ ಮಾಡಿದ ಹಣವನ್ನು ಡ್ರಾ ಮಾಡಿಕೊಳ್ಳುವ ವ್ಯವಸ್ಥೆಯೂ ಇದೆ.
-  ಪ್ರಸಕ್ತ ಆರ್ಥಿಕ ಪರಿಸ್ಥಿತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ವಾಹನ ಕ್ಷೇತ್ರದ ಸಾಲದ ಮೇಲೆ ಪರಿಣಾಮ ಬೀರಿದೆಯೆ?
ಕಳೆದ ಎರಡು ವರ್ಷದಲ್ಲಿನ ಆರ್ಥಿಕ ಬೆಳವಣಿಗೆಯಲ್ಲಿ ಕುಂಠಿತವಾಗಿರುವುದರಿಂದ ಸಾಲದ ಪ್ರಮಾಣದಲ್ಲಿಯೂ ಕುಸಿತವಾಗಿದೆ. ಇದು ಎಸ್‌ಬಿಐಗೆ ಮಾತ್ರ ಸೀಮಿತವಾಗಿಲ್ಲ. ಆದರೆ ಆರ್ಥಿಕ ಸುಧಾರಣೆಯ ಲಕ್ಷಣಗಳು ಗೋಚರಿಸುತ್ತಿವೆ. ಮೂಲಸೌಕರ್ಯದಲ್ಲಿನ ಹೂಡಿಕೆ ಹಾಗೂ ಅಭಿವೃದ್ಧಿಯ ನಂತರ ಈ ಕ್ಷೇತ್ರದಲ್ಲಿ ಬದಲಾವಣೆಯ ನಿರೀಕ್ಷೆ ಇರಿಸಿಕೊಂಡಿದ್ದೇವೆ. ಇನ್ನು ವಾಹನ ಸಾಲಕ್ಕೆ ಸಂಬಂಧಿಸಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಳವಣಿಗೆ ಬೇಸರ ತರಿಸಿದೆ. ಆಟೋಮೊಬೈಲ್ ಕ್ಷೇತ್ರವೇ ಭಾರತದಲ್ಲಿ ಕುಸಿದಿದೆ. ಇದರ ಪರಿಣಾಮವಾಗಿ ವಾಹನ ಸಾಲದತ್ತ ಗ್ರಾಹಕರು ಅಷ್ಟು ಆಸಕ್ತಿ ತೋರುತ್ತಿಲ್ಲ. ಕಳೆದ ಆರ್ಥಿಕ ವರ್ಷದ ಕೊನೆಯಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆಯಾದರೂ ನಿರೀಕ್ಷಿತ ಮಟ್ಟ ತಲುಪಲಿಲ್ಲ. ಇದಲ್ಲದೇ ವಾಹನ ಸಾಲಕ್ಕೆ ಸಂಬಂಧಿಸಿ ಬ್ಯಾಂಕ್ ಕೂಡ ತನ್ನ ನಿಯಮ ಬದಲಾಯಿಸಿದ್ದು, ಸಾಲ ಪಡೆಯಲು ಇರುವ ಆದಾಯ ಮಿತಿಯನ್ನು ರು. 6 ಲಕ್ಷಕ್ಕೆ ಏರಿಸಲಾಗಿದೆ. ಈ ಹಿಂದೆ ಇದು ರು. 2.5 ಲಕ್ಷವಾಗಿತ್ತು. ಸರ್ಕಾರಿ ನೌಕರರಿಗೆ ಆದಾಯ ಮಿತಿಯನ್ನು ರು. 4 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಗಂಡ-ಹೆಂಡತಿಯರು ಜಂಟಿ ಖಾತೆಯ ಮೇಲೂ ಸಾಲ ಪಡೆಯಬಹುದಾಗಿದೆ.
-  ಬ್ಯಾಂಕ್‌ನ ಸಾಲ ಹಾಗೂ ಮರುಪಾವತಿ ಪ್ರಮಾಣ ಹೇಗಿದೆ?
ಗೃಹ ಸಾಲಕ್ಕೆ ಸಂಬಂಧಿಸಿ ಉತ್ತಮವಾದ ಮರುಪಾವತಿ ಪ್ರಮಾಣವಿದ್ದು, ಶೇ.80ಕ್ಕೂ ಅಧಿಕ ಮರುಪಾವತಿಯಾಗುತ್ತಿದೆ. ಸಾಲ ಮರುಪಾವತಿಗಾಗಿ ಕಾಲಕಾಲಕ್ಕೆ ಗ್ರಾಹಕರಿಗೆ ಎಸ್‌ಎಂಎಸ್, ಸೂಚನಾ ಪತ್ರಗಳನ್ನು ನಿಯಮದ ಪ್ರಕಾರ ನೀಡಲಾಗುತ್ತಿದೆ. ಇನ್ನು ಬೆಂಗಳೂರು ನಗರದಲ್ಲಿ ಸಾಲ ಪ್ರಮಾಣ ಪ್ರತಿ ಗ್ರಾಹಕರಿಗೆ ಸುಮಾರು ರು. 40 ಲಕ್ಷದಷ್ಟಿದೆ. ಅದೇ ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ನಗರಗಳಲ್ಲಿ ಸುಮಾರು ರು. 12 ಲಕ್ಷದಷ್ಟಿದೆ. ರಾಜ್ಯದಲ್ಲಿ ಸುಮಾರು ರು. 13 ಸಾವಿರ ಕೋಟಿಗೂ ಅಧಿಕ ಗೃಹಸಾಲವಿದೆ. ಬ್ಯಾಂಕ್‌ನ ಒಟ್ಟಾರೆ ಸಾಲದ ಶೇ.42ರಷ್ಟು ಪ್ರಮಾಣವನ್ನು ಗೃಹ ಸಾಲ ಆವರಿಸಿಕೊಂಡಿದೆ. ಭವಿಷ್ಯದಲ್ಲಿ ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಗುಲ್ಬರ್ಗಾ ಸೇರಿದಂತೆ ಎರಡನೇ ಹಂತದ ನಗರಗಳಲ್ಲಿಯೂ ಗೃಹ ಸಾಲದ ವ್ಯಾಪ್ತಿಯನ್ನು ಹೆಚ್ಚಿಸಲು ಬ್ಯಾಂಕ್ ನಿರ್ಧರಿಸಿದೆ.
-  ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಆಸಕ್ತಿ ಹೇಗಿದೆ?
ಕೃಷಿ ಕ್ಷೇತ್ರವು ಮೊದಲಿನಿಂದಲೂ ಬ್ಯಾಂಕ್‌ನ ಆದ್ಯತಾ ವಲಯದಲ್ಲಿ ಸೇರಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು 1200 ಕೋಟಿ ಕೃಷಿ ಸಾಲವನ್ನು ಬ್ಯಾಂಕ್ ನೀಡಿದೆ. ಇಷ್ಟು ದಿನ ಕೇವಲ ಬೆಳೆ ಸಾಲದ ರೂಪದಲ್ಲಿ ರೈತರಿಗೆ ಹಣ ನೀಡಲಾಗುತ್ತಿತ್ತು. ಆದರೆ ರೈತರನ್ನು ಆರ್ಥಿಕವಾಗಿ ಗಟ್ಟಿಯಾಗಿಸಲು ಪರ್ಯಾಯ ಕೃಷಿಗೂ ಸಾಲ ನೀಡಲು ಬ್ಯಾಂಕ್ ನಿರ್ಧರಿಸಿದೆ.

ಸಿಂಡಿಕೇಟ್ ಬ್ಯಾಂಕ್
1925ರಲ್ಲಿ ನಮ್ಮ ಕರ್ನಾಟಕದ ಉಡುಪಿಯಲ್ಲಿ ನೇಕಾರರಿಗೆ ಆರ್ಥಿಕ ಸಹಾಯ ಒದಗಿಸುವ ನಿಟ್ಟಿನಲ್ಲಿ ಕೇವಲ 8000 ಹೂಡಿಕೆಯೊಂದಿಗೆ ಸಣ್ಣದಾಗಿ ಆರಂಭವಾದ ಸಿಂಡಿಕೇಟ್ ಬ್ಯಾಂಕ್ ಇಂದು 33 ಮಿಲಿಯನ್ ಗ್ರಾಹಕರನ್ನು ಹೊಂದಿ ದೇಶಾದ್ಯಂತ ತನ್ನ ಬಾಹುವನ್ನು ವಿಸ್ತರಿಸಿದೆ. ತನ್ನ ಬೇರನ್ನು ಆಳವಾಗಿ ಊರಿರುವ ಸಿಂಡಿಕೇಟ್ ಬ್ಯಾಂಕ್‌ಗೆ ದೇಶದ ನಾಗರಿಕರ ಅಗತ್ಯಗಳ ಬಗ್ಗೆ ಚೆನ್ನಾಗಿ ಅರಿವಿದೆ. ಹಾಗಾಗೇ ಭವಿಷ್ಯದ ಭಾರತ ನಿರ್ಮಾಣದ ದೂರದೃಷ್ಟಿಯನ್ನಿಟ್ಟುಕೊಂಡು ಬ್ಯಾಂಕ್ ತನ್ನ ಸೇವಾಯೋಜನೆಗಳನ್ನು ವಿಸ್ತರಿಸುತ್ತಲೇ ಬಂದಿದೆ.
ಪಿಗ್ಮಿ ಹೂಡಿಕೆ, ರೈತರಿಗಾಗಿ ಜಮೀನು ಮಾಹಿತಿ ವಿನಿಮಯ ಕೇಂದ್ರ, ಶಾಲಾ ಮಕ್ಕಳಿಗಾಗಿ ಭವಿಷ್ಯದ ರೈತ ಸಂಘ, ಜಮೀನು ಚಿಕಿತ್ಸಾಲಯ ಇತ್ಯಾದಿ ಯೋಜನೆಗಳನ್ನು ಪ್ರಪ್ರಥಮ ಬಾರಿಗೆ ಜಾರಿಗೊಳಿಸಿದ ಕೀರ್ತಿ ಸಿಂಡಿಕೇಟ್‌ನದ್ದು. ಬದಲಾದ ಯುಗಕ್ಕೆ ತನ್ನನ್ನು ಒಡ್ಡಿಕೊಳ್ಳುವುದರಲ್ಲೂ ಬ್ಯಾಂಕ್ ಹಿಂದೆ ಬಿದ್ದಿಲ್ಲ. ಮಾಹಿತಿ ತಂತ್ರಜ್ಞಾನ ಬಳಸಿಕೊಂಡು, ಬದಲಾಗುತ್ತಿರುವ ವಾಣಿಜ್ಯ ಕ್ಷೇತ್ರದ ವಿಸ್ತಾರದ ಜ್ಞಾನ ಮೇಲ್ಮಟ್ಟಕ್ಕೇರಿಸಿಕೊಂಡು ಇತರೆ ಬ್ಯಾಂಕ್‌ಗಳ ಪೈಪೋಟಿಗೆ ಸೆಡ್ಡು ಹೊಡೆದು ಬೆಳೆಯುತ್ತಿದೆ.  ಕೇಂದ್ರೀಕೃತ ಬ್ಯಾಂಕಿಂಗ್ ಪರಿಹಾರ ಸೇವೆಯನ್ನು ಒದಗಿಸುವ ಮೂಲಕ ಗ್ರಾಹಕಸ್ನೇಹಿ ವ್ಯಕ್ತಿತ್ವವನ್ನು ಪ್ರದರ್ಶಿಸಿದೆ. ಇದರಿಂದ ಗ್ರಾಹಕರು ಬ್ಯಾಂಕಿನ ಯಾವುದೇ ಬ್ರ್ಯಾಂಚಿನಲ್ಲಿಯೂ ತಮ್ಮ ವಹಿವಾಟು ನಿರ್ವಹಣೆ ಮಾಡಬಹುದಾಗಿದೆ.
ಸಿಂಡ್‌ಎಂಎಸ್‌ಇ: ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಹೆಚ್ಚು ನಿರುದ್ಯೋಗ ಸಮಸ್ಯೆ ನೀಗುತ್ತಾ, ಅಭಿವೃದ್ಧಿಗೆ ಕಾರಣವಾಗುವುದರಿಂದ ಇವುಗಳಿಗೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಿಂದ ರಿಯಾಯಿತಿ ಬಡ್ಡಿದರದಲ್ಲಿ ಅನೇಕ ಸಾಲಸೌಲಭ್ಯಗಳನ್ನು ಬ್ಯಾಂಕ್ ನೀಡುತ್ತಿದೆ. 2013ರಿಂದ ಸಿಂಡ್‌ಡಾಕ್ಟರ್, ಸಿಂಡ್‌ಕ್ಯಾಶ್ಯೂ, ಸಿಂಡ್‌ಟೆಕ್ಸ್‌ಟೈಲ್, ಸಿಂಡ್‌ಮಾರ್ಬಲ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಅತಿ ಸಣ್ಣ, ಸಣ್ಣ ಉದ್ದಿಮೆಗಳಿಗೆ ಸುಮಾರು ಒಂದು ಕೋಟಿಯವರೆಗೂ ಸಾಲ ವಿಸ್ತರಿಸಿದೆ. ಅತಿ ಸಣ್ಣ, ಸಣ್ಣ ಉದ್ದಿಮೆದಾರರ ಆರ್ಥಿಕ ಅಗತ್ಯ ಪೂರೈಸಲೆಂದೇ ದೇಶಾದ್ಯಂತ 67 ವಿಶೇಷ ಉಪಕಚೇರಿಗಳನ್ನು ತೆರೆದಿದೆ.
ಮನೆ, ವಾಹನಸಾಲ
ಚಿಲ್ಲರೆ ವ್ಯಾಪಾರವನ್ನು ಪ್ರೋತ್ಸಾಹಿಸುವ ಸಲುವಾಗಿ ಸಾಲದ ಮೊತ್ತ ಎಷ್ಟೇ ಇದ್ದರೂ ಅತ್ಯಂತ ಕಡಿಮೆ ಅಂದರೆ ಶೇ.10.25 ಬಡ್ಡಿದರದಲ್ಲಿ ಮನೆಸಾಲ ನೀಡುತ್ತಿದೆ. ಈ ಸಾಲದ ಅವಧಿ 30 ವರ್ಷಗಳು. ಅಲ್ಲದೆ ಸೇವಾಶುಲ್ಕದಲ್ಲೂ ಶೇ.50ರಷ್ಟು ರಿಯಾಯಿತಿ ಒದಗಿಸಿದೆ. ಹಬ್ಬದ ಕೊಡುಗೆಯಾಗಿ ಜನವರಿ15, 2014ರವರೆಗೆ ಕಾರ್ ಸಾಲಗಳಿಗೆ ಕೂಡ ಬಡ್ಡಿದರ ಇಳಿಸಲಾಗಿದೆ. ಮನೆಸಾಲ ತೆಗೆದುಕೊಂಡ ಗ್ರಾಹಕರಿಗೆ ಶೇ.0.15 ಹಾಗೂ ತೆಗೆದುಕೊಳ್ಳಿದ ಗ್ರಾಹಕರಿಗೆ ಶೇ.0.75 ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಹೊಣೆದಾರರಿಲ್ಲದೆ ಈ ಸಾಲವನ್ನು 2 ಲಕ್ಷ ವಾರ್ಷಿಕ ಆದಾಯವಿರುವ ಯಾರೇ ಆದರೂ ಪಡೆಯಬಹುದಾಗಿದೆ.
ಹಲವು ಪ್ರಶಸ್ತಿಯ ಗರಿ
ಈ ಬಾರಿ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಉತ್ತಮ ನಿರ್ವಾಹಕ ಪ್ರಶಸ್ತಿ ಪಡೆದಿರುವ ಹೆಗ್ಗಳಿಕೆ ನಮ್ಮ ಬ್ಯಾಂಕ್‌ನದಾಗಿದೆ. ಇಷ್ಟಲ್ಲದೆ ಸೇವಾಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಿಂಡ್ ಬ್ಯಾಂಕ್ 16 ಸಿಂಡ್‌ಆರ್‌ಎಸ್‌ಇಟಿ ಸಂಸ್ಥೆಗಳಿಗೆ ಒತ್ತಾಸೆಯಾಗಿ ನಿಂತು, ಆ ಮೂಲಕ ಪ್ರತಿದಿನ ಹಲವಾರು ನಿರುದ್ಯೋಗಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಉಚಿತ ವಸತಿಯೊಂದಿಗೆ ತರಬೇತಿ ನೀಡುತ್ತಿದೆ. ಸಿಂಡ್ ಬ್ಯಾಂಕ್‌ನ ಫರಿದಾಬಾದ್ ಹಾಗೂ ಕೋಟ್ಯಾನ್ ಉಪಕಚೇರಿಗಳು ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಂಪುಟದಿಂದ ಅತ್ಯುತ್ತಮ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.


ಬ್ಯಾಂಕ್ ಆಫ್ ಬರೋಡ

ಬರೋಡದಲ್ಲಿ ಮುಖ್ಯಕಚೇರಿಯನ್ನು ಹೊಂದಿರುವ, ದೇಶದ ಅಂತಾರಾಷ್ಟ್ರೀಯ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬ್ಯಾಂಕ್ ಆಫ್ ಬರೋಡ 105 ವರ್ಷಗಳಿಂದ ತನ್ನ ಗ್ರಾಹಕರ ನಂಬಿಕೆಯನ್ನು ಕಾಯ್ದುಕೊಂಡು ಬಂದಿದೆ. ತನ್ನ 4500ಕ್ಕೂ ಹೆಚ್ಚು ಉಪಕಚೇರಿಗಳ ಮೂಲಕ ಸಂಘಸಂಸ್ಥೆಗಳಿಗೂ, ಬಿಡಿ ವ್ಯಾಪಾರಿಗಳಿಗೂ ಹಲವು ಆರ್ಥಿಕ ಸೌಲಭ್ಯ ಯೋಜನೆಗಳನ್ನು ಒದಗಿಸುತ್ತಿದೆ. ಅಲ್ಲದೆ 24 ದೇಶಗಳಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಿಕೊಂಡು ಕಳೆದ ಏಪ್ರಿಲ್‌ಗೇ 8,24,786 ಕೋಟಿ ವಹಿವಾಟು ನಡೆಸಿದ ಹೆಗ್ಗಳಿಕೆ ಬ್ಯಾಂಕ್‌ನದಾಗಿದೆ.
ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ವೇಗ ತರುವ ನಿಟ್ಟಿನಲ್ಲಿ ರಾಜ್ಯದಲ್ಲೂ ತನ್ನ ಸೇವೆಗಳನ್ನು ವಿಸ್ತರಿಸಿರುವ ಬ್ಯಾಂಕ್ 89 ಉಪಕಚೇರಿ ಹಾಗೂ 100 ಎಟಿಎಂಗಳೊಂದಿಗೆ ರಾಜ್ಯದ ಗ್ರಾಹಕರ ಅಭಿಲಾಶೆಗಳಿಗೆ ಒತ್ತಾಸೆಯಾಗಿ ನಿಂತಿದೆ. ಅತಿ ಸಣ್ಣ ಮತ್ತು ಸಣ್ಣ ಉದ್ದಿಮೆದಾರರು ಹಾಗೂ ಚಿಲ್ಲರೆ ವ್ಯಾಪಾರಸ್ಥರ ಬೇಡಿಕೆಗಳಿಗೆ ಪ್ರಾಮುಖ್ಯ ನೀಡುತ್ತಾ ಅವರಿಗಾಗಿ ಹಲವು ಯೋಜನೆಗಳನ್ನು ಹೊರತಂದಿದೆ. ಹೆಚ್ಚು ಬಲಿಷ್ಠ ತಂತ್ರಜ್ಞಾನ ಜಾಲವನ್ನು ಅಳವಡಿಸಿಕೊಂಡಿರುವ ಬ್ಯಾಂಕ್ ಆಫ್ ಬರೋಡ ತನ್ನ ಗ್ರಾಹಕರಿಗೆ ಸೇವೆಗಳನ್ನು ಪಡೆದುಕೊಳ್ಳುವ ಕಾರ್ಯವನ್ನು ಹೆಚ್ಚು ಸುಲಭದಾಯಕವಾಗಿಸಿದೆ. ಈ ನಿಟ್ಟಿನಲ್ಲಿ ಗ್ರಾಹಕರು ಮನೆಯಲ್ಲೇ ಕುಳಿತು ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್, ಎಲೆಕ್ಟ್ರಾನಿಕ್ ಹಣ ವರ್ಗಾವಣೆ ಮಾಡಬಹುದಾಗಿದೆ.
ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ಮಣೆ: ಕರ್ನಾಟಕ ಹಾಗೂ ಆಂಧ್ರ ಕಚೇರಿಗಳ ಜೆನೆರಲ್ ಮ್ಯಾನೇಜರ್ ಮಿ. ಆರ್.ಪಿ. ಮರಾಟೆ ತಿಳಿಸಿದಂತೆ ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಚಿಲ್ಲರೆ ವ್ಯಾಪಾರ, ಸಣ್ಣ, ಮಧ್ಯಮ ಉದ್ದಿಮೆಗಳ ಪ್ರಗತಿಗೆ ಬ್ಯಾಂಕ್ ಆಫ್ ಬರೋಡ ಹಲವು ಹೊಸ ಯೋಜನೆಗಳನ್ನು ನೀಡುವ ಮೂಲಕ ಶ್ರಮಿಸುತ್ತಿದೆ. ಇದಕ್ಕಾಗಿ ಕೇವಲ ಕರ್ನಾಟಕವೊಂದರಲ್ಲೇ 767 ಕೋಟಿ ಹಣ ತೊಡಗಿಸಿದೆ.  ಎಸ್‌ಎಂಇ ಸಾಲ ನೀಡುವುದಕ್ಕಾಗಿಯೇ 'ಎಸ್‌ಎಂಇ ಲೋನ್ ಫ್ಯಾಕ್ಟರಿ' ಎಂಬ ವಿಶೇಷ ಯೋಜನೆಯಲ್ಲಿ ದಾಖಲೆಗಳನ್ನೆಲ್ಲ ಒದಗಿಸಿದ 14 ದಿನಗಳ ಒಳಗೆ ಸಾಲ ನೀಡಲಾಗುತ್ತದೆ. ಬ್ಯಾಂಕಿನ ಸಿಬ್ಬಂದಿಯೇ ಗ್ರಾಹಕರ ಸಂಸ್ಥೆಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ, ದಾಖಲೆ ಕಲೆ ಹಾಕುತ್ತಾರೆ.ದೇಶದ 52 ಕೇಂದ್ರಕಚೇರಿಗಳಲ್ಲಿ ವಿಭಾಗಗಳನ್ನು ತೆಗೆದಿದೆ. ಇದರಿಂದ ಗ್ರಾಹಕರಿಗೆ ತ್ವರಿತ ಸಾಲ ಲಭ್ಯಗೊಳಿಸುವುದು ಸಾಧ್ಯವಾಗಿದೆ. ಅಲ್ಲದೆ ಎಸ್‌ಎಂಇ ಲೋನ್ ಪ್ಯಾಕ್, ಬರೋಡ ಎಂಎಸ್‌ಎಂಇ ಕ್ಯಾಪೆಕ್ಸ್ ಲೋನ್, ಬರೋಡ ಎಸ್‌ಎಂಇ ಗೋಲ್ಡ್ ಕಾರ್ಡ್ ವಿಶೇಷ ಸಾಲ ಯೋಜನೆಗಳನ್ನು ಜಾರಿಗೊಳಿಸಿದೆ. ನ.1, 2013ರಿಂದ ಡಿ.31ರವರೆಗೆ ಎಸ್‌ಎಂಇ ಸಾಲ ಹಬ್ಬ ಎಂಬ ವಿಶೇಷ ಗ್ರಾಹಕಸ್ನೇಹಿ ಕಾರ್ಯಕ್ರಮವನ್ನು ಬ್ಯಾಂಕ್ ಪ್ರಸ್ತುತಪಡಿಸಿದ್ದು ಈ ಸಮಯದಲ್ಲಿ ಸೇವಾಶುಲ್ಕದಲ್ಲಿ ರಿಯಾಯಿತಿ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ ಗ್ರಾಹಕರೊಂದಿಗೆ ಸಂವಾದ, ಆರ್ಥಿಕ ಸೌಲಭ್ಯ ಗ್ರಾಹಕರ ಬಳಿಯೇ ತೆರಳಿ ನೀಡಲು ಕಾರ್ಖಾನೆ ಪ್ರದೇಶಗಳಿಗೆ ಭೇಟಿ, ವಿವಿಧ ಉದ್ದಿಮೆದಾರರ ಭೇಟಿ ಕಾರ್ಯಕ್ರಮವನ್ನೂ ನಡೆಸುತ್ತಿದೆ. ಇವೆಲ್ಲವೂ ಬ್ಯಾಂಕ್‌ನ ವಿಶ್ವಾಸಾರ್ಹತೆಯ ಪ್ರತೀಕ ಎನ್ನುತ್ತಾರೆ ಮರಾಟೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement