ಯಾರು ಏನೇ ಹೇಳಿಕೊಳ್ಳಲಿ, ಷೇರು-ಸೆಕ್ಯುರಿಟಿ ಬಜಾರಿನಲ್ಲಿ ಈಗ ಕಂಪನಿಗಳು ಪೇಟೆಯಲ್ಲಿ ಮಾಡಬಹುದಾದ ಹೊಸ ಷೇರುಗಳಲ್ಲಿ ಎಲ್ಲ ಹೂಡಿಕೆದಾರರ ವರ್ಗಗಳಲ್ಲೂ ಆಸಕ್ತಿ ಕುಸಿದು ಬಿದ್ದಿದೆ. ಕಂಪನಿಗಳು ಕಳೆದ ಹತ್ತು ವರ್ಷಗಳಲ್ಲಿ (2003-2013) ಹೊಸ ಷೇರುಗಳ ಮಾರಾಟದಿಂದ ಸಂಗ್ರಹಿಸಿದ ಹಣದ ವಿವರಗಳನ್ನು ಗಮನಿಸಿದರೆ, ಈ ವ್ಯವಹಾರವೇ ಬಂದ್ ಆಗುವ ಸಂಭವದ ಅಪಾಯವೂ ಕಂಡುಬರುತ್ತಿದೆ.
2010ರಲ್ಲಿ ಹೊಸ ಷೇರುಗಳ ಮಾರಾಟದಿಂದ ಕಂಪನಿಗಳು ಸಂಗ್ರಹಿಸಿದ ಹಣ ಸುಮಾರು 37,500 ಕೋಟಿ ರುಪಾಯಿಗಳು. 2013ರಲ್ಲಿ (ಇದುವರೆಗೆ) 1601 ಕೋಟಿ ರುಪಾಯಿಗಳಷ್ಟು ಸಂಗ್ರಹವಾಗಿತ್ತು. ಹತ್ತು ವರ್ಷಗಳಲ್ಲಿ, ಪ್ರಸ್ತುತ ವರ್ಷವೇ ಕನಿಷ್ಠ ಸಂಗ್ರಹದ ವರ್ಷ. ರುಪಾಯಿಯ ನಿಜ ಮೌಲ್ಯದ ಲೆಕ್ಕ ಹಿಡಿದರೆ, ಈ ವರ್ಷ ಸಂಗ್ರಹವಾದ ಹಣ ನಿಜಕ್ಕೂ ಒಂದು ಹನಿಯಷ್ಟು ಮಾತ್ರ. ಸಾಮಾನ್ಯ ವೈಯಕ್ತಿಕ ಹವ್ಯಾಸಿ ವ್ಯವಹಾರಸ್ಥ ಈಚೆಗೆ ಹೊಸ ಷೇರುಪೇಟೆಯ ಕಡೆ ತಲೆ ಇಟ್ಟು ಮಲಗಿದ್ದೂ ಇಲ್ಲ. ಈ ಪರಿಸ್ಥಿತಿ ಸದ್ಯದಲ್ಲಿ ಬದಲಾಗುವ ನಿರೀಕ್ಷೆ ಇಲ್ಲ. ಹಿಂದೆ, ಹೊಸ ಷೇರಿನ ಮಾರಾಟ ಆರಂಭವಾದ ದಿನ ಷೇರಿಗೆ ಅರ್ಜಿ ಸಲ್ಲಿಸಿದರೆ, ಅದು ಪೇಟೆಯ ಪಟ್ಟಿಗೆ ಸೇರುವ ವೇಳೆಗೆ ಲಾಭ ಖಚಿತ ಎನ್ನುವ ವಾತಾವರಣವಿತ್ತು. ಈಗ ಆ ಪ್ರಶ್ನೆಯೇ ಇಲ್ಲ. ಷೇರುಗಳು ಪೇಟೆಗೆ ಬಂದರೆ ತಾನೇ ಆ ಮಾತು?
ಸಾಂಸ್ಥಿಕ ಹೂಡಿಕೆದಾರರಲ್ಲಿನ ಚಿಂತನೆಯೂ ಇದೇ. ಈ ವರ್ಷ ಸ್ವದೇಶಿ ಕಂಪೆನಿಗಳು 70,000 ಕೋಟಿ ರುಪಾಯಿಗಳಷ್ಟು ಮೌಲ್ಯದ ಷೇರುಗಳನ್ನು ಮಾರಿವೆ. ವಿದೇಶೀ ಸಂಸ್ಥೆಗಳು ಲಕ್ಷ ಕೋಟಿ ರುಪಾಯಿಗಳ ಮೌಲ್ಯದ ಷೇರುಗಳನ್ನು ಕೊಂಡಿವೆ. ಸದ್ಯದಲ್ಲೇ ಬೃಹತ್ ಸರ್ಕಾರಿ ಕಂಪನಿಗಳು ಪೇಟೆಗೆ ಬಂದರೆ, ಕೊಳೆಯುತ್ತಿರುವ ಬಂಡವಾಳಕ್ಕೆ ಬೇಡಿಕೆ ಬರಬಹುದಷ್ಟೇ.
ಡಿವಿಡೆಂಟ್ ಪಾವತಿಯ ವಿಚಾರ
ಭಾರತೀಯ ಕಂಪನಿಗಳ ನಿವ್ವಳ ಲಾಭ ಕಳೆದ ಐದು ವರ್ಷಗಳಲ್ಲಿ ವಾರ್ಷಿಕ ಲೆಕ್ಕದಲ್ಲಿ ಶೇಕಡಾ ಎರಡರಷ್ಟು ಹೆಚ್ಚಿದೆ ಅಷ್ಟೇ. ಕಂಪನಿಗಳ ಪಾಲಿಗೆ ಇದೇನೂ ಸಂತಸದ ವಿಷಯವಲ್ಲ. ಆದರೆ, ಷೇರುದಾರರ ವಿಶ್ವಾಸವನ್ನು ಉಳಿಸಿಕೊಳ್ಳಲು ಕಂಪನಿಗಳು ಡಿವಿಡೆಂಟ್‌ಗಳ ಹಂಚಿಕೆಯ ಪ್ರಮಾಣವನ್ನು ಇಳಿಸಲಿಲ್ಲ. ಹಾಗೂ ಹೀಗೂ ಸರಾಸರಿ ಡಿವಿಡೆಂಟ್ ಪಾವತಿಯ ಒಟ್ಟು ಮೊತ್ತದ ಪ್ರಮಾಣ ವಾರ್ಷಿಕ ಲೆಕ್ಕದಲ್ಲಿ ಶೇಕಡ 13ರಷ್ಟು ಹೆಚ್ಚಿದೆ. ಕೆಲವು ಕಂಪೆನಿಗಳು, ಕಳೆದ ವರ್ಷ ತಮ್ಮ ಒಟ್ಟು ಲಾಭದ ಮೂರರಲ್ಲಿ ಒಂದು ಪಾಲನ್ನು ಡಿವಿಡೆಂಡ್ ಹಂಚಿಕೆಗೇ ಮೀಸಲಾಗಿ ಇಟ್ಟಿದ್ದವು. ಆದರೆ ಈ ವ್ಯವಸ್ಥೆ ಇನ್ನೆಷ್ಟು ದಿನ ನಡೆಯಲು ಸಾಧ್ಯ?
ಡಿವಿಡೆಂಡ್ ಹಂಚಿಕೆಯಲ್ಲಿ ಸದ್ಯದ ಸ್ಥಿತಿಯಲ್ಲಿ ಕಂಪನಿಗಳ ಆಡಳಿತ ಮಂಡಳಿಗಳು ಸಾಮಾನ್ಯ ಷೇರುದಾರರಿಗೆ ಅವರಿಗೆ ಸಿಗಬೇಕಾದ ಪಾಲಿಗಿಂತ ಹೆಚ್ಚು ಪ್ರತಿಫಲವನ್ನು ಕೊಡುತ್ತಿರುವುದು ನಿಜ. ಅದು ಪೇಟೆಯ ಅವಶ್ಯಕತೆ.
ರಿಸರ್ವ್ ಬ್ಯಾಂಕ್ ನೀತಿ
ಕಳೆದ ವಾರ ರಿಸರ್ವ್ ಬ್ಯಾಂಕಿನ ಹಣ ನೀತಿ ಪ್ರಕಟವಾಗಿದ್ದು ಬುಧವಾರ. ಅದುವರೆಗೆ ಹಣಕಾಸು ಸಂಬಂಧದ ಎಲ್ಲ ಸಂಸ್ಥೆಗಳು, ಮಾಧ್ಯಮ ಪ್ರಪಂಚ ಹಾಗೂ ಅನೇಕ ಪಂಡಿತರು, ಗವರ್ನರ್ ರಘುರಾಮನ್ ರಾಜನ್ ಅವರಿಗೆ ಬ್ಯಾಂಕ್ ಬಡ್ಡಿ ದರವನ್ನು ಏರಿಸದೇ ಬೇರೆ ಮಾರ್ಗವೇ ಇಲ್ಲ ಎನ್ನುವ ರೀತಿಯ ಭವಿಷ್ಯವನ್ನು ಸುಳ್ಳು ಮಾಡುವುದಕ್ಕೆಂದೇ ರಾಜನ್ ಬಡ್ಡಿ ದರದಲ್ಲಿ ಬದಲಾವಣೆ ಮಾಡಲೇ ಇಲ್ಲ.
ಆದರೆ, ಯಾವಾಗ ಬೇಕಾದರೂ ಬಡ್ಡಿ ದರಗಳನ್ನು ಬದಲಾಯಿಸುವ ಅಧಿಕಾರ ಇದೆ ಎನ್ನುವುದನ್ನು ಸ್ಪಷ್ಟ ಸೂಚನೆಯ ರೂಪದಲ್ಲಿ ತಿಳಿಸಿದ್ದಾರೆ. ಅದು ಜಾಣತನ.
ಕೊನೆಮಾತು
ಪೇಟೆಯ ಕಾವಲುಗಾರ, ಸೆಕ್ಯೂರಿಟೀಸ್ ಅಂಡ್ ಎಕ್ಸ್‌ಛೇಂಜಸ್ ಬೋರ್ಡ್ ಆಫ್ ಇಂಡಿಯಾಗೆ (ಸೆಬಿ) ವಿಶೇಷ ಅಧಿಕಾರ ನೀಡುವ ಸುಗ್ರೀವಾಜ್ಞೆಯನ್ನು ಸರ್ಕಾರ ಮೂರು ಬಾರಿ ಪ್ರಕಟಿಸಬೇಕಾಯಿತು. ಕಾರಣ: ಆ ಸಂಬಂಧದಲ್ಲಿ ತಯಾರಿಸಿದ ವಿಧೇಯಕದ ಪರಿಶೀಲನೆಗೆ ಸಂಸದೀಯ ಸ್ಥಾಯಿ ಸಮಿತಿಗೆ ಇನ್ನೂ ಪುರುಸೊತ್ತು ಸಿಕ್ಕಿಲ್ಲ. ಇದು ಚಿದಂಬರಂ ಉವಾಚ.
- ಸತ್ಯ