ಆಪ್ ಬನೇಗಾ ಕರೋಡ್‌ಪತಿ!
ಕೋಟ್ಯಧಿಪತಿ ಆಗಬೇಕೆಂಬ ಕನಸು ಯಾರಿಗೆ ಇಲ್ಲ ಹೇಳಿ? ಎಲ್ಲರಿಗೂ ಅಂಥ ಆಸೆ ಇರುತ್ತದೆ. ಹಾಗಿದ್ದರೆ ಸುಮ್ಮನೆ ಕುಳಿತರೆ ಅದು ಪೂರೈಸುತ್ತದೆಯೇ? ಖಂಡಿತವಾಗಿಯೂ ಇಲ್ಲ. ಅದಕ್ಕಾಗಿರುವ ಮಾರ್ಗಗಳೇನು? ಬಿಗ್ ಬಿ ನಡೆಸಿಕೊಡುವ 'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಗೆದ್ದರಾಯಿತು ಎಂಬ ಯೋಚನೆಯೇ? ಅದಕ್ಕೂ ಹಲವಾರು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ಹಾಗಿದ್ದರೆ ಕೋಟಿಪತಿಯಾಗಲು ಯಾವ ಮಾರ್ಗಗಳನ್ನು ಅನುಸರಿಸಬೇಕು ಎಂಬುದಕ್ಕೆ ನಮ್ಮಲ್ಲೇ ಇದೆ ಉಪಾಯ. ಅದಕ್ಕಿದೆ ಮೂರು ಮಾರ್ಗಗಳು-
ಪ್ರತಿ ತಿಂಗಳು ಅಥವಾ ಪ್ರತಿ ವರ್ಷ ಹೂಡಿಕೆ ಮಾಡುವ ಮೊತ್ತ
ಪ್ರತಿಫಲ ದರ
ಹೂಡಿಕೆ ಕಾಲಾವಧಿ
ಪ್ರತಿ ತಿಂಗಳು ಅಥವಾ ವರ್ಷದ ಹೂಡಿಕೆ
ಇಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ತಿಂಗಳು ಅಥವಾ ಪ್ರತಿ ವರ್ಷ ಹೂಡಿಕೆ ಮಾಡಬೇಕು. ಅದಕ್ಕೊಂದು ಉದಾಹರಣೆ ಇಲ್ಲಿದೆ. ಪ್ರತಿ ತಿಂಗಳು1 ಸಾವಿರ ತುಂಬಿದಲ್ಲಿ 25 ವರ್ಷದ ಬಳಿಕ ಆ ಮೊತ್ತ 3 ಲಕ್ಷ ಆಗಿರುತ್ತದೆ. ಪ್ರತಿ ವರ್ಷ ಸರಾಸರಿ ಶೇ.12 ರಿಟರ್ನ್ ಬಂದರೆ ದೊರೆಯುವ ಒಟ್ಟು ಮೊತ್ತ 29,41,000.
ಪ್ರತಿಫಲ ದರ
ಹೂಡಿಕೆ ಮಾಡಿದ ಹಣಕ್ಕೆ ಕಡಿಮೆ ಪ್ರತಿಫಲ ದೊರೆತರೂ ಅದು ವೃದ್ಧಿಯಾಗುತ್ತದೆ. ಉದಾಹರಣೆಗೆ 100 ಹೂಡಿಕೆ ಮಾಡಿದರೆ ಪ್ರತಿವರ್ಷ ಶೇ.5 ರಿಟರ್ನ್ ಬಂದಲ್ಲಿ 20 ವರ್ಷಗಳ ನಂತರ ಅದು 265 ಆಗಿರುತ್ತದೆ. ಪ್ರತಿ ವರ್ಷ ಶೇ.11 ರಿಟರ್ನ್ ಬಂದಲ್ಲಿ 806 ಆಗುತ್ತದೆ. ಪ್ರತಿ ವರ್ಷ ಶೇ.15 ರಿಟರ್ನ್ ಬಂದಲ್ಲಿ ಹೂಡಿಕೆ ಮಾಡಿದ 100 1,637 ಆಗಿರುತ್ತದೆ.
ಕಾಲಾವಧಿ ಹೂಡಿಕೆ
ಯಾವ ವರ್ಷದಿಂದ ಹಣ ಹೂಡಿಕೆ ಮಾಡಲು ಆರಂಭವಾಗಿದೆ ಎನ್ನುವುದರ ಮೇಲೆ ಅದು ವೃದ್ಧಿಯಾಗುತ್ತಾ ಹೋಗುತ್ತದೆ. ಕಡಿಮೆ ವಯಸ್ಸಿನಿಂದ ಹಣ ಉಳಿತಾಯ ಮತ್ತು ಹೂಡಿಕೆ ಮಾಡಲು ಆರಂಭಿಸಿದ್ದರೆ ಹೆಚ್ಚಿನ ಪ್ರಮಾಣದ ಲಾಭ ದೊರೆಯುತ್ತದೆ.
-ಮಹಾಂತೇಶ ಕುಳ್ಳೊಳ್ಳಿ