ಹ್ಯುಂಡೈ ಗ್ರ್ಯಾಂಡ್ ಐ10' ಮಾರುಕಟ್ಟೆಗೆ
ಬೆಂಗಳೂರು: ಕಾರು ಉತ್ಪಾದನೆಯಲ್ಲಿ ದೇಶದ 2ನೇ ಅತಿ ದೊಡ್ಡ ಕಂಪನಿ ಎನಿಸಿಕೊಂಡಿರುವ ಹ್ಯುಂಡೈ ಮೋಟಾರ್ ಇಂಡಿಯಾ ನಿಯಮಿತ ತನ್ನ ಅತ್ಯಾಧುನಿಕ ಹಾಗೂ ನೂತನ ಮಾದರಿಯ 'ಹ್ಯುಂಡೈ ಗ್ರ್ಯಾಂಡ್ ಐ10' ಅನ್ನು ನಗರದ ಮಾರುಕಟ್ಟೆಗೆ ಮಂಗಳವಾರ ಬಿಡುಗಡೆ ಮಾಡಿದೆ. ಗ್ರ್ಯಾಂಡ್ ಐ10 ಪೆಟ್ರೋಲ್, ಡೀಸೆಲ್ ಎಂಜಿನ್ ಎರಡೂ ಆಯ್ಕೆಯಲ್ಲೂ ಲಭ್ಯ. ಅಲ್ಲದೆ, 4 ಶ್ರೇಣಿ ಮತ್ತು 8 ವಿವಿಧ ಬಣ್ಣಗಳ ಆಯ್ಕೆಗೆ ಅವಕಾಶವಿದ್ದು, 24 ಕಿ.ಮೀ.ವರೆಗೆ ಇಂಧನ ಕ್ಷಮತೆ ಹೊಂದಿದೆ. ವಾಹನದ(ಎಕ್ಸ್ ಶೋ ರೂಂ)ಬೆಲೆ 4.29 ಲಕ್ಷದಿಂದ 6.41 ಲಕ್ಷದವರೆಗಿದೆ.
ಅತ್ಯಾಧುನಿಕ 2 ಪೀಳಿಗೆಯ ಯು2 ಸಿಆರ್‌ಡಿಐ ಡಿಸೇಲ್ ಎಂಜಿನ್(ಯೂರೋ 5)ಹೊಂದಿರುವ ಗ್ರ್ಯಾಂಡ್ ಐ10 ಕಡಿಮೆ ಹೊಗೆಯುಗುಳುವಿಕೆ ಕಾರಣ ಪರಿಸರಸ್ನೇಹಿಯಾಗಿದೆ. ಜತೆಗೆ ಯು 2 ಎಂಜಿನ್ ನಗರ ಪ್ರದೇಶದಲ್ಲಿ ಗೇರ್ ಬದಲಾಯಿಸುವ ಪ್ರಮಾಣ ತಗ್ಗಿಸುತ್ತದೆ. ಅಲ್ಲದೆ 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಇರುವುದರಿಂದ ಚಾಲನೆ ಆರಾಮದಾಯಕ ಹಾಗೂ ಜರ್ಕ್ ಫ್ರೀ ಆಗಿರುತ್ತದೆ. ಡೀಸೆಲ್ ಮಾದರಿ ಲೀಟರ್‌ಗೆ 24 ಕಿ.ಮೀ. ಮೈಲೇಜ್ ಕೊಡಲಿದೆ. ಹಾಗೆಯೇ, ಡ್ಯುಯಲ್ ವಿಟಿವಿಟಿ ತಂತ್ರಜ್ಞಾನ ಹೊಂದಿರುವ ಪೂರ್ಣ ಅಲ್ಯುಮಿನಿಯಂ 1.2 ಲೀ. ಕಪ್ಪ ಪೆಟ್ರೋಲ್ ಎಂಜಿನ್ ಮಾದರಿ 5 ಸ್ಪೀಡ್ ಮ್ಯಾನ್ಯುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಎರಡೂ ಆಯ್ಕೆ ಹೊಂದಿದೆ. ಈ ಮಾದರಿ ಲೀ.ಗೆ 18.9 ಕಿ.ಮೀ. ಮೈಲೇಜ್ ಕೊಡುತ್ತದೆ ಎಂದು ಕಂಪನಿ ತಿಳಿಸಿದೆ. ಗ್ರ್ಯಾಂಡ್ ಐ10 ಬಿಡುಗಡೆ ಬಳಿಕ ಮಾತನಾಡಿದ ಹ್ಯುಂಡೈ ಸಂಸ್ಥೆಯ ನಿರ್ದೇಶಕ ಸೇತುರಾಮನ್ ಅವರು, ವಿಶ್ವ ಮಟ್ಟದ ಗ್ರ್ಯಾಂಡ್ ಐ10 ಭಾರತೀಯ ಮಾರುಕಟ್ಟೆಗೆ ಹೇಳಿ ಮಾಡಿಸಿದಂತಿದೆ. ವಾಹನ ಕ್ಷೇತ್ರದ ಕಾಂಪಾಕ್ಟ್ ಹೈ ಎಂಟ್ರಿ ವಿಭಾಗದಲ್ಲಿ ಮೈಲಿಗಲ್ಲಾಗಿರುವ ಗ್ರ್ಯಾಂಡ್ ಐ10 ಶ್ರೇಷ್ಠ ಗುಣಮಟ್ಟ, ಬಾಳಿಕೆ ಮತ್ತು ವಿಶ್ವಾಸಾರ್ಹತೆ ಮೂಲಕ ಭಾರತೀಯ ಗ್ರಾಹಕರ ಮನ ಸೆಳೆಯಲಿದೆ ಎಂದರು.