ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ (ಟಿಕೆಎಂ) ದೇಶಿಯವಾಗಿ ತಯಾರಿಸಿದ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವಿಶೇಷವಾಗಿರುವ ಈ ಕಾರನ್ನು ಬಿಡದಿಯಲ್ಲಿರುವ ಟಿಕೆಎಂನ 2ನೇ ಘಟಕದಲ್ಲಿ ತಯಾರಿಸಲಾಗುತ್ತದೆ. ವಿಶಿಷ್ಟ ತಂತ್ರಜ್ಞಾನ ಹೊಂದಿರುವ ಈ ಕಾರು, 2.5 ಲೀ. ಬೆಲ್ಟ್‌ಲೆಸ್ ಪೆಟ್ರೋಲ್ ಎಂಜಿನೊಂದಿಗೆ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಪ್ರತಿ ಲೀಟರ್ ಇಂಧನಕ್ಕೆ 19.16 ಕಿ.ಮೀ. ಓಡುತ್ತದೆ. ಹೊಸ ಕಾರು ಗ್ರೇ ಮೆಟಾಲಿಕ್, ವೈಟ್ ಪರ್ಲ್ ಕ್ರಿಸ್ಟಲ್ ಶೈನ್, ಸಿಲ್ವರ್ ಮೆಟಾಲಿಕ್ ಮತ್ತು ಆ್ಯಟಿಟ್ಯೂಡ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ. ಕಾರಿನ ದರ ರು. 25,75,000 (ಎಕ್ಸ್ ಶೋರೂಮ್ ಬೆಲೆ- ನವದೆಹಲಿ).
ಡೊಕೊಮೋದಿಂದ ವೇಗದ ಬ್ರಾಡ್‌ಬ್ಯಾಂಡ್
ಟಾಟಾ ಟೆಲಿಸರ್ವಿಸಸ್ ತನ್ನ ಗ್ರಾಹಕರಿಗಾಗಿ ವೇಗದ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕವನ್ನು ಬಿಡುಗಡೆ ಮಾಡಿದೆ. ಅದು ಪ್ರತಿ ಸೆಕೆಂಡ್‌ಗೆ 100 ಮೆಗಾಬೈಟ್ ವೇಗ ಹೊಂದಿದೆ. ಹೊಸ ಯೋಜನೆಯನ್ನು ಜನಪ್ರಿಯಗೊಳಿಲು ಪ್ರತಿ ಹೊಸ ಗ್ರಾಹಕರಿಗೆ ರು. 40 ಸಾವಿರ ಮೌಲ್ಯದ ಲ್ಯಾಪ್‌ಟಾಪ್ ಅನ್ನು ಉಚಿತವಾಗಿ ನೀಡಲು ಸಂಸ್ಥೆ ಮುಂದಾಗಿದೆ. ವಾರ್ಷಿಕವಾಗಿ 100 ಎಂಬಿಪಿಎಸ್ ಬ್ರಾಡ್‌ಬ್ಯಾಂಡ್ ಸೇವೆ ಖರೀದಿಸುವ ಗ್ರಾಹಕರಿಗೆ ಈ ಸೌಲಭ್ಯ ಅನ್ವಯವಾಗುತ್ತದೆ. ಇನ್ನೊಂದು ಯೋಜನೆಯಡಿ ಪ್ರತಿ ತಿಂಗಳು 1,099ರ ಬ್ರಾಡ್‌ಬ್ಯಾಂಡ್ ಸೇವೆಗೆ ಚಂದಾದಾರರಾಗುವವರು ರು. 5 ಸಾವಿರ ಮೌಲ್ಯದ ಲ್ಯಾಪ್‌ಟಾಪ್ ಅನ್ನು ಉಚಿತವಾಗಿ ಪಡೆಯಲಿದ್ದಾರೆ. ಅಂದಹಾಗೆ, ಸೆಪ್ಟೆಂಬರ್ 30ರ ವರೆಗೆ ಮಾತ್ರ ಈ ಕೊಡುಗೆ ಇರುತ್ತದೆ.
ಹೊಸ ಕ್ರೆಡಿಟ್ ಕಾರ್ಡ್
ಖಾಸಗಿ ಕ್ಷೇತ್ರದ ಅಗ್ರಗಣ್ಯ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಒಂದು ಹೊಸ ಸಿಹಿ ಹಂಚಿದೆ. ಒಬ್ಬರ ಕಾರ್ಡ್ ಅನ್ನು ವಂಚನೆಯಿಂದ ಪಡೆದುಕೊಂಡು ಮಾಡುವ ವ್ಯವಹಾರಗಳನ್ನು ತಪ್ಪಿಸಲು ಹೊಸ ಮಾದರಿಯ ಕ್ರೆಡಿಟ್ ಕಾರ್ಡ್ ಅನ್ನು ಬ್ಯಾಂಕ್ ಬಿಡುಗಡೆ ಮಾಡಿದೆ. ಬ್ಯಾಂಕ್ ಹೇಳಿಕೊಂಡಿರುವ ಪ್ರಕಾರ ಇದು ಏಷ್ಯಾದಲ್ಲಿಯೇ ಮೊದಲ ಬಾರಿಗೆ ಆ ರೀತಿಯ ಕಾರ್ಡ್‌ಗಳನ್ನು ಜಾರಿಗೊಳಿಸುತ್ತಿದೆ. 'ಕಾರ್ಬನ್ ಕ್ರೆಡಿಟ್ ಕಾರ್ಡ್' ಎಂಬ ಹೆಸರಿನ ಈ ಕಾರ್ಡ್ ಹಲವು ವಿಶೇಷಗಳನ್ನು ಹೊಂದಿದೆಯಂತೆ. ಅದು ಇಎಂವಿ ಚಿಪ್ ತಾಂತ್ರಿಕತೆ, ಆಲ್ಫಾ ನ್ಯುಮೆರಿಕ್ ಎಲ್‌ಸಿಡಿ ಸ್ಕ್ರೀನ್, ಇನ್‌ಬಿಲ್ಟ್ ಬ್ಯಾಟರಿಯನ್ನು ಹೊಂದಿರುವ 12 ಬಟನ್ ಟಚ್ ಕೀಪ್ಯಾಡ್ ಅನ್ನು ಹೊಂದಿದೆ.
ಫ್ರೀಚಾರ್ಜ್‌ಗೆ ಹೊಸ ಸಿಇಒ
ಆನ್‌ಲೈನ್ ರೀಚಾರ್ಜ್ ವೆಬ್‌ಸೈಟ್ ಫ್ರೀಚಾರ್ಜ್‌ಗೆ ಹೊಸ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಅಲೋಕ್ ಗೋಯಲ್ ನೇಮಕಗೊಂಡಿದ್ದಾರೆ. ಗೋಯಲ್ ರೆಡ್‌ಬಸ್.ಇನ್‌ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುನಾಲ್ ಶಾ 2010ರಲ್ಲಿ ಫ್ರೀಚಾರ್ಜ್ ಅನ್ನು ಸಂದೀಪ್ ಟಂಡನ್ ಜತೆಗೂಡಿ ಆರಂಭ ಮಾಡಿದ್ದರು.