ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

9ರಂದು ವೊಡಾಫೋನ್ನಿಂದ ಸೈಕ್ಲಿಂಗ್

ಇಂಧನ ಉಳಿತಾಯ ಹಾಗೂ ಪರಿಸರ ರಕ್ಷಣೆಯ ಕಾಳಜಿಯಿಂದ ವೊಡಾಫೋನ್ ಸಂಸ್ಥೆಯು ಫೆ.9ರಂದು ಸೈಕ್ಲಿಂಗ್ ....

Rashmi Kasaragodu
Updated On : 3 Feb 2014, 1:29 am

ಇಂಧನ ಉಳಿತಾಯ ಹಾಗೂ ಪರಿಸರ ರಕ್ಷಣೆಯ ಕಾಳಜಿಯಿಂದ ವೊಡಾಫೋನ್ ಸಂಸ್ಥೆಯು ಫೆ.9ರಂದು ಸೈಕ್ಲಿಂಗ್ ಕಾರ್ಯಕ್ರಮ ಆಯೋಜಿಸಿದೆ. ಹಸಿರು ಬೆಂಗಳೂರು ಘೋಷ ವಾಕ್ಯದೊಂದಿಗೆ ನಡೆಯುತ್ತಿರುವ ಸೈಕ್ಲಿಂಗ್ ಮ್ಯಾರಾಥಾನ್ನಲ್ಲಿ ದೇಶದ ಖ್ಯಾತ ಸೈಕ್ಲಿಸ್ಟ್ಗಳು ಸೇರಿದಂತೆ 10 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ಸ್ಪರ್ಧೆಯಲ್ಲಿ ನಾಲ್ಕು ವಿಭಾಗ ಮಾಡಲಾಗಿದ್ದು, 60 ಕಿ.ಮೀಯ ಚಾಂಪಿಯನ್ ರೈಡ್, 40 ಕಿ.ಮೀಯ ಫ್ಯಾಷನ್ ರೈಡ್, 20 ಕಿ,ಮೀಯ ಗ್ರೀನ್ ರೈಡ್ ಹಾಗೂ 10 ಕಿ.ಮೀಯ ಫನ್ ರೈಡ್ ನಡೆಸಲಾಗುತ್ತಿದೆ. ಚಾಂಪಿಯನ್ ರೈಡ್ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದವರಿಗೆ 2.50 ಲಕ್ಷ ಹಾಗೂ ನಂತರದ ಮೂರು ಸ್ಥಾನಗಳಿಗೆ ಕ್ರಮವಾಗಿ 1.75 ಲಕ್ಷ, 1.25ಲಕ್ಷ ಹಾಗೂ 1 ಲಕ್ಷ  ಬಹುಮಾನ ಮೊತ್ತ ವಿತರಿಸಲಾಗುತ್ತದೆ. ಉಳಿದ ವಿಭಾಗಗಳಲ್ಲಿ 16 ಸೈಕ್ಲಿಸ್ಟ್ಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಪರಿಸರ ರಕ್ಷಣೆ ಜತೆಗೆ ಸೈಕಲ್ ಬಳಕೆಯನ್ನು ಪ್ರೋತ್ಸಾಹಿಸಿವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಮೂಲಕ ಸೈಕಲ್ ಬಳಕೆಯಲ್ಲಿ ಇತರ ನಗರಗಳಿಗೆ ಬೆಂಗಳೂರು ಮಾದರಿಯಾಗಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ ಎಂದು ವೊಡಾಫೋನ್ ಕರ್ನಾಟಕ ವೃತ್ತದ ವಾಣಿಜ್ಯ ಮುಖ್ಯಸ್ಥ ಅತನು ಬಟಬ್ಯಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಬುಕಿಂಗ್, ಟ್ರ್ಯಾಕಿಂಗ್ಗೆ ಅಪ್ಲಿಕೇಷನ್
ಆ್ಯಂಡ್ರಾಯ್ಡ್ ಹಾಗೂ ಐಒಎಸ್ನಲ್ಲಿ ಬಸ್ ಬುಕ್ಕಿಂಗ್ ಮತ್ತು ಟ್ರ್ಯಾಕಿಂಗ್ ಸೌಲಭ್ಯವುಳ್ಳ ಅಪ್ಲಿಕೇಷನ್ ಬಿಡುಗಡೆ ಮಾಡಲಾಗಿದೆ. ಟಿಕೆಟ್ಗೂಸ್.ಕಾಂ ಎಂಬ ಹೆಸರಿನ ಅಪ್ಲಿಕೇಷನ್ನ್ನು ಗ್ರಾಹಕರು ಇನ್ನು ಟಿಕೆಟ್ ಬುಕ್ಕಿಂಗ್ ಹಾಗೂ ಟ್ರ್ಯಾಕಿಂಗ್ಗೆ ಬಳಸಿಕೊಳ್ಳಬಹುದು. ಈ ಮುಂಚೆ ಆನ್ಲೈನ್ನಲ್ಲಿ ಈ ವೆಬ್ಸೈಟ್ ಮೂಲಕ ಬಸ್ ಟಿಕೆಟ್ ಕಾಯ್ದಿರಿಸಬಹುದಿತ್ತು. ಮೊಬೈಲ್ ಗ್ರಾಹಕರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟಿಕೆಟ್ ಬುಕ್ಕಿಂಗ್ಗೆ ಅಪ್ಲಿಕೇಷನ್ ತಯಾರಿಸಲಾಗಿದೆ. ಇದರ ಜತೆಗೆ ಜಿಪಿಎಸ್ ಸೌಲಭ್ಯದ ಮೂಲಕ ನೀವು ಪ್ರಯಾಣಿಸುತ್ತಿರುವ ಬಸ್ ಯಾವ ಮಾರ್ಗದಲ್ಲಿ ಚಲಿಸುತ್ತಿದೆ ಎನ್ನುವುದು ತಿಳಿಯುತ್ತದೆ. ಇದು ಉಚಿತವಾಗಿ ಡೌನ್ಲೋಡ್ ಮಾಡಬಹುದಾದ ಅಪ್ಲಿಕೇಷನ್ ಆಗಿದೆ.



ಅರವಿಂದ್ ಸಂಸ್ಥೆಯಿಂದ 9ನೇ ಮಳಿಗೆ
ಪ್ರತಿಷ್ಠಿತ ಅರವಿಂದ್ ಸಂಸ್ಥೆಯು ಬೆಂಗಳೂರಿನಲ್ಲಿ ಒಂಬತ್ತನೇ ಮಳಿಗೆಯನ್ನು ಆರಂಭಿಸಿದೆ. ಜಯನಗರ 9ನೇ ಹಂತದ ಸುಬ್ದೇವಾ ಟವರ್ಸ್ನಲ್ಲಿ ಈ ಮಳಿಗೆ ಆರಂಭವಾಗಿದ್ದು, ಇದು ಕರ್ನಾಟಕದ 13ನೇ ಹಾಗೂ ದೇಶದ 131ನೇ ಅರವಿಂದ ಮಳಿಗೆಯಾಗಿದೆ. ಯುಎಸ್ ಪೋಲೋ, ಫ್ಲೈಯಿಂಗ್ ಮಷಿನ್ ಹಾಗೂ ಆ್ಯರೋ ಬ್ರ್ಯಾಂಡ್ನ ಬಟ್ಟೆಗಳು ಮಳಿಗೆಯಲ್ಲಿ ಲಭ್ಯವಿರುತ್ತವೆ. ಈ ಮಳಿಗೆಗಳಲ್ಲಿ ಗ್ರಾಹಕರ ಕೋರಿಕೆಯ ಮೇರೆಗೆ ಕಸ್ಟಮೈಸ್ಡ್ ಬಟ್ಟೆಯನ್ನು ಕೂಡ ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.



ನೆಟ್ ಆ್ಯಪ್ ಸ್ಥಾಪನೆಗೆ ಅಡಿಗಲ್ಲು
ವಿಶ್ವ ದರ್ಜೆಯ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ನೆಟ್ ಆ್ಯಪ್ ಸ್ಥಾಪನೆಗೆ ಮಹದೇವಪುರದಲ್ಲಿ ಅಡಿಗಲ್ಲು ಹಾಕಲಾಗಿದೆ. 10 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಈ ಕೇಂದ್ರ ಪ್ರಾರಂಭವಾಗುತ್ತಿದ್ದು, ವಿಶ್ವ ದರ್ಜೆಯ ಕಾರ್ಯಕ್ಷೇತ್ರ ಹಾಗೂ ಮನೋರಂಜನಾ ಕ್ಷೇತ್ರವನ್ನು ಹೊಂದಿದೆ. ಜಾಗತಿಕ ಅಭಿವೃದ್ಧಿ ಹಾಗೂ ವ್ಯಾಪಾರಿ ಕಾರ್ಯಾಚರಣೆಯನ್ನು ಬೆಂಬಲಿಸಲು ಪರಿಣಾಮಕಾರಿಯಾದ ಮಾಹಿತಿ ಕೋಶವನ್ನು ಇದು ಒಳಗೊಂಡಿರುತ್ತದೆ. ಈ ಕೇಂದ್ರವು 2015ರ ಅಂತ್ಯದೊಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಕಳೆದ 2012ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಸರ್ಕಾರದೊಂದಿಗೆ ಸಂಸ್ಥೆ ಪ್ರಾರಂಭಿಸಲು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.


ಫ್ಯೂಚರ್ ಗ್ರೂಪ್ನಿಂದ 2 ಮಳಿಗೆ
ಫ್ಯೂಚರ್ ಗ್ರೂಪ್ನ ಬ್ರ್ಯಾಂಡ್ ಫ್ಯಾಕ್ಟರಿಯು ನಗರದಲ್ಲಿ ಮತ್ತೆರಡು ಮಳಿಗೆಗಳನ್ನು ಪ್ರಾರಂಭಿಸಿದೆ. ಬನ್ನೇರುಘಟ್ಟ ಹಾಗೂ ಹೊಸೂರು ರಸ್ತೆಯಲ್ಲಿ ಸುಮಾರು 38 ಸಾವಿರ ಚದರ ಅಡಿಯ ವಿಸ್ತೀರ್ಣದಲ್ಲಿ ನೂತನ ಮಳಿಗೆಯನ್ನು ಪ್ರಾರಂಭಿಸಲಾಗಿದೆ. ಸುಮಾರು 200 ಬ್ರ್ಯಾಂಡ್ಗಳು ಮಳಿಗೆಯಲ್ಲಿ ಲಭ್ಯವಿದ್ದು, ಶೇ.20ರಿಂದ ಶೇ.50ರವರೆಗೆ ವರ್ಷದ ಎಲ್ಲ ದಿನವೂ ರಿಯಾಯಿತಿ ಇದೆ. ಪ್ರಸ್ತುತ ಭಾರತದಲ್ಲಿ ಒಟ್ಟು 38 ಮಳಿಗೆಗಳನ್ನು ಬ್ರ್ಯಾಂಡ್ ಫ್ಯಾಕ್ಟರಿ ಹೊಂದಿದೆ. ಬ್ರ್ಯಾಂಡ್ ಫ್ಯಾಕ್ಟರಿ ಜತೆಗೆ ಫ್ಯೂಚರ್ ಲೈಫ್ಸ್ಟೈಲ್ ಫ್ಯಾಷನ್ಸ್ ಸಂಸ್ಥೆಯು ಬಿಗ್ ಬಜಾರ್, ಇ-ಝೋನ್, ಹೋಂ ಟೌನ್, ಸೆಂಟ್ರಲ್ ಮಳಿಗೆಗಳನ್ನು ಹೊಂದಿದೆ. ಒಂದೇ ಸೂರಿನಡಿ ಎಲ್ಲ ಬ್ರಾಂಡ್ ಬಟ್ಟೆಗಳನ್ನು ಮಾರಾಟ ಮಾಡುವುದು ಸಂಸ್ಥೆ ಉದ್ದೇಶ ಎಂದು ಬ್ರ್ಯಾಂಡ್ ಫ್ಯಾಕ್ಟರಿ ಮುಖ್ಯಸ್ಥ ಜಿತೇಂದ್ರನಾಥ್ ಪತ್ರಿ ಹೇಳಿದ್ದಾರೆ.


ಪೊಲಾರೀಸ್ ಫೈನಾನ್ಷಿಯಲ್ಗೆ 51 ಕೋಟಿ ಲಾಭ
ಪೊಲಾರೀಸ್ ಫೈನಾನ್ಷಿಯಲ್ ಟೆಕ್ನಾಲಜಿ ಸಂಸ್ಥೆಯು 51 ಕೋಟಿ ವಾರ್ಷಿಕ ಲಾಭವನ್ನು ಪ್ರಕಟಿಸಿದೆ. ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆದಾಯವು 643 ಕೋಟಿಗೆ ಏರಿದ್ದು, ಶೇ.12ರಷ್ಟು ಬೆಳವಣಿಗೆ ಕಂಡಿದೆ. ಲಾಭ ಪ್ರಮಾಣದಲ್ಲಿಯೂ ಶೇ.25ರಷ್ಟು ಏರಿಕೆಯಾಗಿದೆ. ಕಳೆದ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ವರದಿಯಲ್ಲಿ 41 ಕೋಟಿ ಲಾಭವನ್ನು ಸಂಸ್ಥೆ ಘೋಷಿಸಿತ್ತು. ಸಂಸ್ಥೆಯಲ್ಲಿ ಕೆಲ ಬದಲಾವಣೆ ತಂದ ಬಳಿಕ ಲಾಭದ ಪ್ರಮಾಣ ಗಣನೀಯವಾಗಿ ಏರಿದೆ. ಇದರಿಂದ ಸುಮಾರು 80ಕ್ಕೂ ಅಧಿಕ ಹೊಸ ಗ್ರಾಹಕರು ಸಂಸ್ಥೆಗೆ ದೊರೆತಿದ್ದಾರೆ. ಪೊಲಾರೀಸ್ ಫೈನಾನ್ಷಿಯಲ್ ಟೆಕ್ನಾಲಜಿ ಸಂಸ್ಥೆಯು ವೆಚ್ಚ ನಿಯಂತ್ರಣ ವಿಭಾಗದಲ್ಲಿ ಉತ್ತಮ ಹೆಸರು ಪಡೆದಿದ್ದು, ಭವಿಷ್ಯದಲ್ಲಿ ಮಾರುಕಟ್ಟೆಯನ್ನು ಇನ್ನಷ್ಟು ವೃದ್ಧಿಸುವ ಗುರಿ ಹೊಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಅರುಣ ಜೈನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement