ವಾಣಿಜ್ಯ

ಸ್ಟೇಟ್ ಬ್ಯಾಂಕ್ ಬಂಡವಾಳ

ಆ ಬ್ಯಾಂಕಿನಲ್ಲಿ ಹಣ ಹೂಡುವುದು, ಅಲ್ಲಿ ಖಾತೆ ತೆಗೆಯುವುದು ಒಂದು ಕಾಲದಲ್ಲಿ ಅತಿ ಪ್ರತಿಷ್ಠಿತರ ಹೆಮ್ಮೆ. ಈಗಲೂ ಆ ಬ್ಯಾಂಕಿಗೆ ತನ್ನದೇ ಆದ ಗೌರವ, ಪ್ರತಿಷ್ಠೆ ಇದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಹಿಂದಿನ ಇಂಪೀರಿಯಲ್ ಬ್ಯಾಂಕ್) ದೇಶದ ಅತಿದೊಡ್ಡ ಹಾಗೂ ಅತಿ ಪ್ರತಿಷ್ಠಿತ ಬ್ಯಾಂಕ್. ಆ ಬ್ಯಾಂಕಿನಲ್ಲಿ ಹಣ ಹೂಡುವುದು, ಅಲ್ಲಿ ಖಾತೆ ತೆಗೆಯುವುದು ಒಂದು ಕಾಲದಲ್ಲಿ ಅತಿ ಪ್ರತಿಷ್ಠಿತರ ಹೆಮ್ಮೆ. ಈಗಲೂ ಆ ಬ್ಯಾಂಕಿಗೆ ತನ್ನದೇ ಆದ ಗೌರವ, ಪ್ರತಿಷ್ಠೆ ಇದೆ.
ಆದರೆ ಅದೇಕೋ ಈಗ ಆ ಬ್ಯಾಂಕ್ ತನ್ನ ಪ್ರತಿಷ್ಠೆಯನ್ನು (ಮೌಲ್ಯವನ್ನಲ್ಲ) ಕಳೆದುಕೊಳ್ಳುತ್ತಿರುವಂತಿದೆ.
ಈಗ ಎಲ್ಲ ಬ್ಯಾಂಕ್‌ಗಳೂ ಹೊಸದಾಗಿ ಪ್ರಕಟವಾಗಿರುವ ನಿಯಮಗಳಂತೆ ತಮ್ಮ ಷೇರು ಬಂಡವಾಳವನ್ನು ಹೆಚ್ಚಿಸಿಕೊಳ್ಳಬೇಕು. ಭಾರತೀಯ ಸ್ಟೇಟ್ ಬ್ಯಾಂಕ್ ಅದರಂತೆ ಸಾಂಸ್ಥಿಕ ಹೂಡಿಕೆದಾರರ ವಲಯದಿಂದ 9600 ಕೋಟಿ ರುಪಾಯಿಗಳ ಬಂಡವಾಳವನ್ನು ಎತ್ತಲು ಉದ್ದೇಶಿಸಿ, ಸಂಸ್ಥೆಗಳ ಜತೆ ವ್ಯವಹಾರ ನಡೆಸಿದ ಅನಂತರ ಮಾರಾಟದ ದಿನಾಂಕವನ್ನು ಪ್ರಕಟಿಸಿತು.  ಆಗ, ಭಾರತೀಯ ಸ್ಟೇಟ್ ಬ್ಯಾಂಕ್‌ನ ಷೇರಿಗೆ ಸಂಸ್ಥೆಗಳು ಮುಗಿ ಬೀಳುವ ಮಾತಿರಲಿ, ಅನೇಕ ಪ್ರತಿಷ್ಠಿತ ಸಂಸ್ಥೆಗಳು, ಹಾಗೂ ವಿದೇಶಿ ಬ್ಯಾಂಕ್‌ಗಳು 'ಕಾರಣಾಂತರದಿಂದ' ತೆಪ್ಪಗಾದವು. ನಿರೀಕ್ಷಿಸಿದ ಮೊತ್ತದ ಬೇಡಿಕೆ ಬರಲಿಲ್ಲ. ಎಲ್‌ಐಸಿ, ಕೇಂದ್ರ ಸರ್ಕಾರ ಸ್ವಾಮ್ಯದ ಲಾಭದಾಯಕ ಉದ್ಯಮಗಳು ಬ್ಯಾಂಕಿನ ಮರ್ಯಾದೆ ಉಳಿಸಿದವು. ಆದರೂ 9600 ಕೋಟಿ ರುಪಾಯಿ ಸಂಗ್ರಹವಾಗುವುದಿಲ್ಲ. 7200 - 7500 ಕೋಟಿ ರುಪಾಯಿಗಳ ಸಂಗ್ರಹವಾಗಬಹುದಷ್ಟೇ. ಇದು ವಾಸ್ತವ ಸ್ಥಿತಿ.

ಮ್ಯೂಚ್ಯುಯಲ್ ಫಂಡ್‌ಗಳು
ಹಲವು ವರ್ಷಗಳಿಂದಲೂ ಗೋಳಿನ ಕತೆಯನ್ನೇ ಹೇಳುತ್ತ ಬಂದಿರುವ ಮ್ಯೂಚ್ಯುಯಲ್ ಫಂಡ್‌ಗಳಿಗೆ ಇದ್ದಕ್ಕಿಂದ್ದಂತೆ ಅದೃಷ್ಟದ ಚಕ್ರ ತಿರುಗಿದಂತೆ ಕಂಡುಬರುತ್ತಿದೆ. ಹಲವು ಪ್ರತಿಷ್ಠಿತ ಫಂಡ್‌ಗಳ ಹೊಸ ಈಕ್ವಿಟಿ (ಷೇರು) ಫಂಡ್‌ಗಳಿಗೆ ಕಳೆದ ಎರಡು ತಿಂಗಳಲ್ಲಿ ಸುಮಾರು 2400 ಕೋಟಿ ರೂಪಾಯಿಗಳಷ್ಟು ಒಳ ಹರಿವು ಬಂದಿದೆ. ಈ ವರ್ಷದ ಕೊನೆಯ ವೇಳೆಗೆ ಭಾರತೀಯ ಮ್ಯೂಚ್ಯುಯಲ್ ಫಂಡ್‌ಗಳು ಷೇರುಗಳ ಮೌಲ್ಯದ ಲೆಕ್ಕದಲ್ಲಿ ಮಾರುವುದಕ್ಕಿಂತ ಕೊಳ್ಳುವ ಷೇರುಗಳ ಮೌಲ್ಯವೇ ಹೆಚ್ಚಾಗಬಹುದು. ಅದು ನಿಜವಾಗಲೂ ಆರೋಗ್ಯಕರವಾದ ಸ್ಥಿತಿ. ತಮ್ಮ ವಶಕ್ಕೆ ಬಂದಿರುವ ಹೆಚ್ಚಿಗೆ ಹಣವನ್ನು ಮ್ಯೂಚ್ಯುಯಲ್ ಫಂಡ್‌ಗಳು ಲಾಭದಾಯಕ ಷೇರುಗಳಲ್ಲಿ ತೊಡಗಿಸಿವೆ. ಪೇಟೆಯಲ್ಲಿ ಚಟುವಟಿಕೆ ಹೆಚ್ಚುವುದು ಖಚಿತ. ಕಳೆದ ವರ್ಷದ ಬಹು ಭಾಗದಲ್ಲಿ, ಮ್ಯೂಚ್ಯುಯಲ್ ಫಂಡ್‌ಗಳಲ್ಲಿ ಹಣ ಹೂಡಿದ್ದವರು ಅದನ್ನು ಹಿಂದೆ ಪಡೆಯಲು ಒತ್ತಡ ಹೇರಿದಾಗ, ಫಂಡ್‌ಗಳು ತಮ್ಮಲ್ಲಿದ್ದ ಷೇರುಗಳನ್ನು ಕಡಿಮೆ ಬೆಲೆಗೂ ಮಾರಬೇಕಾಯಿತು. ಈ ಸಮಯದಲ್ಲೇ ಫಂಡ್‌ಗಳಲ್ಲಿ ಹಣದ ಹೂಡಿಕೆಯೂ ಕಡಿಮೆಯಾಗುತ್ತ ಬಂದಿತ್ತು. ಡಿಸೆಂಬರ್‌ನಲ್ಲಿ ಪೇಟೆಯ ಸ್ಥಿತಿ ಸುಧಾರಿಸಿದ್ದರಿಂದ, ಫಂಡ್‌ಗಳಿಗೆ ಗ್ರಾಹಕರ ಮೂಲದ ಹಣದ ಹರಿವೂ ಬಂದಿತ್ತು. ಆಗ ಜತೆಯಲ್ಲೇ ಮಾರಾಟದ ಉತ್ಸಾಹವೂ ಇತ್ತು. ಭಾರತೀಯ ಸಂಸ್ಥೆಗಳು 2012 ರಲ್ಲಿ 55,435 ಕೋಟಿ ರುಪಾಯಿಗಳ ಮೌಲ್ಯದ ಷೇರುಗಳನ್ನು ಮಾರಿದ್ದರೆ 2013 ರಲ್ಲಿ 74,245 ಕೋಟಿ ರುಪಾಯಿಗಳ ಮೌಲ್ಯದ ಷೇರುಗಳನ್ನು ಮಾರಬೇಕಾಯಿತು. ಈ ಸಮಯದಲ್ಲಿ ವಿದೇಶಿ ಸಂಸ್ಥೆಗಳು ಅಧಿಕ ಷೇರುಗಳನ್ನು ಕೊಂಡವು. ಕೆಲವು ಪ್ರತಿಷ್ಠಿತ ಕಂಪನಿಗಳ ಷೇರುಗಳಲ್ಲಿ ಅಧಿಕ ಪಾಲು ಈಗ ವಿದೇಶಿ ಸಂಸ್ಥೆಗಳಲ್ಲೇ ಇರುವುದು. ಸಣ್ಣ ಕಂಪನಿಗಳ ಷೇರುಗಳ ವ್ಯವಹಾರದಲ್ಲಿ, ಹೂಡಿಕೆದಾರರು ಷೇರುಗಳನ್ನು ಮಾರಲು ಆರಂಭಿಸಿದ್ದಾರೆ. ಉದ್ದೇಶ : ಸಾಧ್ಯವಿರುವಷ್ಟು ಲಾಭವನ್ನು ಮಾಡಿಕೊಳ್ಳುವುದು. ಈ ರೀತಿ ವ್ಯವಹಾರ ನಡೆದರೆ, ಷೇರುಗಳ ಬೆಲೆಗಳೂ ಬೀಳಲೇಬೇಕಲ್ಲವೇ?

ಕೊನೆ ಮಾತು
ಪ್ರಧಾನಿ ಸಲಹೆಗಾರ ಸ್ಯಾಮ್ ಪಿತ್ರೊಡಾ ಅವರ ಮಾರ್ಗದರ್ಶನದಲ್ಲಿ ಒಂದು ವಿಶೇಷ ಫಂಡ್‌ನ ಸ್ಥಾಪನೆಯಾಗಿದೆ. ಅದಕ್ಕೆ 500 ಕೋಟಿ ರುಪಾಯಿಗಳ ನಿಧಿ ಸಂಗ್ರಹವಾದರೆ, ವಿದೇಶಗಳಿಂದ 500 ಕೋಟಿ ರುಪಾಯಿಗಳ ನಿಧಿಯನ್ನು ಸಂಗ್ರಹಿಸಬಹುದು. ಈ ಫಂಡ್‌ನ ಮೂಲ ಉದ್ದೇಶ ಹೆಚ್ಚಾಗಿ ಬಡವರಿಗೇ ಅನುಕೂಲವಾಗುವಂತಹ ಯೋಜನೆಗಳಲ್ಲಿ ಬಂಡವಾಳ ಹೂಡುವುದು. (ಈಗ ಬಡವರ (ಜನಸಂಖ್ಯೆಯ ಪಿರಮಿಡ್‌ನ ಬುಡ) ಅಗತ್ಯಗಳನ್ನು ಸರ್ಕಾರ ಸಬ್ಸಿಡಿ, ಸಾಲ, ದಾನಧರ್ಮ ಸಂಸ್ಥೆಗಳೇ ಪೂರೈಸುತ್ತಿವೆ)  ಈ ವ್ಯವಹಾರದಲ್ಲಿ ಸರ್ಕಾರದ ಪಾತ್ರವಿಲ್ಲ. ಹೂಡಿಕೆ ಕಂಪನಿಗಳೇ ವ್ಯವಹಾರ ನಡೆಸುತ್ತಿವೆ. ಇದೊಂದು ಕ್ರಾಂತಿಕಾರಿ ಪ್ರಯೋಗ.

-ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ