ಹೋಟೆಲ್ನಲ್ಲಿ ಮನೆ ಅಡುಗೆ!
ಹೊರ ವರ್ತುಲ ರಸ್ತೆ ಬೆಂಗಳೂರಿನ ಚಿತ್ರಣವನ್ನೇ ಬದಲಿಸಿದೆ. ಎಲ್ಲೇ ತೆಗೆದುಕೊಳ್ಳಿ, ರಸ್ತೆಯ ಇಕ್ಕೆಲಗಳಲ್ಲಿ ಆಕರ್ಷಕ ವಿನ್ಯಾಸದ ಬಹುಮಹಡಿ ಕಟ್ಟಡಗಳು. ಒಂದು ರಸ್ತೆ ಆರ್ಥಿಕ ಚಿತ್ರಣವನ್ನು ಹೇಗೆ ಬದಲು ಮಾಡಬಹುದು ಎನ್ನುವುದಕ್ಕೆ ಇದು ಸಾಕ್ಷಿ. ದೊಡ್ಡದೊಡ್ಡ ಷೋರೂಮ್ಗಳನ್ನು ಬಿಡಿ, ಐಟಿ/ಬಿಟಿ ಕಂಪನಿಗಳು ವರ್ತುಲ ರಸ್ತೆ ಸುತ್ತಮುತ್ತ ಪ್ರತಿಷ್ಠಾಪನೆಯಾಗಿದ್ದೂ ಹಳೆ ಸುದ್ದಿ. ಈಗ ವಿದೇಶಿ ಸಂಸ್ಥೆಗಳ ಕಣ್ಣೂ ಇಲ್ಲಿನ ಹೊರ ವರ್ತುಲ ರಸ್ತೆ ಮೇಲೆಯೇ ನೆಟ್ಟಿದೆ ಎಂದರೆ ಅಚ್ಚರಿ ಆಗಬಹುದು.
125 ಕಿ.ಮೀ ಉದ್ದದ ಹೊರವರ್ತುಲ ರಸ್ತೆಯಲ್ಲಿ ಎಲ್ಲೆಲ್ಲಿ ಐಟಿ ಹಬ್ಗಳಿವೆಯೊ, ಅಲ್ಲೆಲ್ಲ ವಿದೇಶಿ ಮೂಲದ ಹೋಟೆಲ್ ಅಥವಾ ಇನ್ಯಾವುದಾದರೂ ಲೈಫ್ಸ್ಟೈಲ್ ಕಂಪನಿಗಳ ಕಚೇರಿ, ಮಳಿಗೆ ಕಾಣಸಿಗುತ್ತದೆ. ಹೀಗೆ ಸಿಲಿಕಾನ್ ಸಿಟಿಯ ಹೊರವರ್ತುಲ ರಸ್ತೆ ಬಂದಿರುವ ಫಾರಿನ್ ಕಂಪನಿಗಳ ಪಟ್ಟಿಗೆ ಹೊಸ ಸೇರ್ಪಡೆ 'ಹಿಲ್ಟನ್ ವರ್ಲ್ಡ್ ವೈಡ್'.
ವಿಶ್ವಾದ್ಯಂತ ಹೋಟೆಲ್ಗಳನ್ನು ಹೊಂದಿರುವ ಅಮೆರಿಕ ಮೂಲದ ಈ ಪ್ರತಿಷ್ಠಿತ ಸಂಸ್ಥೆ ಇದೀಗ ಉದ್ಯಾನ ನಗರಿಯಲ್ಲೂ ತನ್ನ ಕಾರ್ಯಾಚರಣೆ ಆರಂಭಿಸಿದೆ. ಬೆಂಗಳೂರು ಆಗ್ನೇಯ ಭಾಗದ ಹೊರವರ್ತುಲ ರಸ್ತೆಯ ಇಬ್ಲೂರು ಗೇಟ್, ಸರ್ಜಾಪುರ ರೋಡ್ ಜಂಕ್ಷನ್ನಲ್ಲಿ 'ಇಂಡಿಯಾ ಹಿಲ್ಟನ್ ವರ್ಲ್ಡ್ವೈಡ್' ಸಂಸ್ಥೆಯು 'ಡಬಲ್ ಟ್ರೀ ಸೂಟ್' ಹೋಟೆಲ್ ಪ್ರಾರಂಭಿಸಿದೆ.
'ಐಟಿ/ಐಟಿಇಎಸ್ ಟೆಕ್ನಾಲಜಿ ಪಾರ್ಕ್, ವಾಣಿಜ್ಯ ಕೇಂದ್ರ, ಮನರಂಜನಾ ಹಾಗೂ ಶಾಪಿಂಗ್ ಕೇಂದ್ರಗಳಿಗೆ ಈ ಜಂಕ್ಷನ್ ಹತ್ತಿರವಾಗಿದೆ. ಹೀಗಾಗಿ ಇಲ್ಲಿ ಹೋಟೆಲ್ ಆರಂಭಿಸಿದ್ದೇವೆ' ಎನ್ನುತ್ತಾರೆ ಹಿಲ್ಟನ್ ವರ್ಲ್ಡ್ ವೈಡ್ ಉಪಾಧ್ಯಕ್ಷ ಡೇನಿಯಲ್ ವೆಲ್ಕ್.
ಐಟಿ ಅಥವಾ ಬಿಸಿನೆಸ್ ಮಾತ್ರವಲ್ಲ, ಎಲ್ಲ ರೀತಿಯ ಗ್ರಾಹಕರ ಆದ್ಯತೆಗಳನ್ನೂ ಗಮನದಲ್ಲಿಟ್ಟುಕೊಂಡಿರುವುದು ವಿಶೇಷ. ಅವರ ಅಗತ್ಯಕ್ಕೆ ಅನುಗುಣವಾದ ವ್ಯವಸ್ಥೆ ಲಭ್ಯ. ನಾನಾ ರೀತಿಯ ಸ್ಟುಡಿಯೋಗಳಿವೆ. ನೀವೇ ಅಡುಗೆ ಮಾಡಿಕೊಳ್ಳಬಹುದು. ಹೋಚೆಲ್ ಸಿಬ್ಬಂದಿಗೆ ನಿಮಗೆ ಬೇಕಾದ ತರಕಾರಿ, ದಿನಸಿ ಪಟ್ಟಿ ಕೊಟ್ಟರೆ ಅವರೇ ಮಾಲ್ನಿಂದ ತಂದುಕೊಡುತ್ತಾರೆ. ಹೀಗಾಗಿ ವ್ಯವಹಾರದ ಸಲುವಾಗಿ ಆಗಮಿಸಿ ದೀರ್ಘಾವಧಿ ಉಳಿದುಕೊಳ್ಳಲು ಇಚ್ಛಿಸುವವರಿಗೆ ಇದು ಹೇಳಿ ಮಾಡಿಸಿದ ಜಾಗ.
ಹೋಟೆಲ್ನಲ್ಲಿ ವಿಶೇಷವಾಗಿ ಸಿಂಗರಿಸಲಾಗಿರುವ 172 ಕೊಠಡಿಗಳಿವೆ. 2 ಮತ್ತು 3 ಕೋಣೆಗಳನ್ನು ಹೊಂದಿರುವ ಸೂಟ್ಗಳೂ ಇವೆ. ಪ್ರತಿಯೊಂದೂ ಡೈನಿಂಗ್ ಹಾಲ್, ವರ್ಕ್ ಸ್ಪೇಸ್, ಕಿಚನ್ ಹಾಗೂ ಖಾಸಗಿ ಬಾಲ್ಕನಿಗಳನ್ನು ಒಳಗೊಂಡಿವೆ. ದಿನದ 24 ಗಂಟೆಗಳ ಕಾಲವೂ ಬಿಸಿನೆಸ್ ಕೇಂದ್ರ ಸೌಲಭ್ಯ ಒದಗಿಸಲಿದ್ದು, ಕಾನ್ಫೆರನ್ಸ್ ಹಾಲ್ ಕೂಡ ಇದೆ. ಟಾಪ್ ಫ್ಲೋರ್ನಲ್ಲಿ ಈಜುಕೊಳ, ಸ್ಟೀಮ್ ಹಾಗೂ ಸೌನಾ ಕೊಠಡಿ, ಫಿಟ್ನೆಸ್ ಕೇಂದ್ರ ಹಾಗೂ ಬರುವ ಗ್ರಾಹಕರಿಗಾಗಿ ಉಚಿತ ವೈ ಫೈ ಬಳಕೆ ಸೌಲಭ್ಯ ಪಡೆಯಬಹುದು.
ಎಲ್ಲ ರೀತಿಯ ಆಹಾರ, ಬಾರ್ ವ್ಯವಸ್ಥೆ, ವಿಶ್ವದ ನಾನಾ ಮೂಲೆಗಳಲ್ಲಿ ಸಿಗುವಂತಹ ಪ್ರಖ್ಯಾತ ಖಾದ್ಯ ಪದಾರ್ಥಗಳೂ ಇಲ್ಲಿ ಲಭ್ಯ. ಇದೆಲ್ಲದರ ಜೊತೆಗೆ ದಿನವಿಡೀ ಕಫೆ ಮತ್ತು ಬೇಕರಿ ಸೌಲಭ್ಯ ಉಂಟು.
ಮಾಹಿತಿಗೆ: 080-67656565, blror.res@hilton .com.
-ಶಿವಕುಮಾರ್ ಆರ್.