ವಿತ್ತಲೋಕ ಸುತ್ತಮುತ್ತ
ಯುಸಿಮಾಸ್ನ ರಾಜ್ಯ ಫ್ರಾಂಚೈಸಿ ಜಯಾ ಸಂತೋಷಿನಿ ಬಾಯಿ
ಮಲೇಷ್ಯಾದ ಯುಸಿಮಾಸ್ ಇಂಟರ್ನ್ಯಾಷನಲ್ನ ರಾಜ್ಯ ಮಾಸ್ಟರ್ ಫ್ರಾಂಚೈಸಿ ಆಗಿ ಜಯಾ ಸಂತೋಷಿನಿ ಬಾಯಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಗರದಲ್ಲಿ ನಡೆದ ಯುಸಿಮಾಸ್ ಕಾರ್ಯಕಾರಿ ಸಭೆಯಲ್ಲಿ ಯುಸಿಮಾಸ್ ಭಾರತೀಯ ವಾಣಿಜ್ಯ ಮುಖ್ಯಸ್ಥರಾದ ಸಿಂಪ್ಲಿಸಿಯೊ ಅವರು ಆ ಕುರಿತ ಪ್ರಮಾಣಪತ್ರವನ್ನು ಜಯಾ ಸಂತೋಷಿನಿ ಅವರಿಗೆ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಜಯಾ ಸಂತೋಷಿನಿ ಅವರು, ಭಾರತದಲ್ಲಿ ಇಂದು ಗುಣಮಟ್ಟದ ಶಿಕ್ಷಣದ ಅಗತ್ಯ ಸಾಕಷ್ಟಿದೆ. ದೇಶದ ಮಕ್ಕಳು ಅತ್ಯಂತ ಬುದ್ಧಿವಂತಿಕೆ ಹಾಗೂ ಚುರುಕು ಸ್ವಭಾವದಿಂದ ಕೂಡಿದವರಾಗಿದ್ದಾರೆ. ಅವರಿಗೆ ಬದಲಾದ ಕಾಲಗತಿ ಜತೆಗೆ ಪೂರಕ ಶಿಕ್ಷಣ ನೀಡುವುದಲ್ಲದೆ ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆ ಹೊರಹಾಕುವಲ್ಲಿ ಯುಸಿಮಾಸ್ ಮಹತ್ತರ ಪಾತ್ರವಹಿಸಲಿದೆ ಎಂದರು. ಯುಸಿಮಾಸ್ನಲ್ಲಿ 4 ರಿಂದ 14 ವರ್ಷ ವಯೋವಾನದ ಮಕ್ಕಳು ಕಲಿಯಬಹುದಾದ ವಿವಿಧ ಬಗೆ ಶಿಕ್ಷಣ ಸಂಬಂಧಿ ವಿಷಯಗಳಿದ್ದು, ಅವುಗಳ ಶೀಘ್ರ ಕಲಿಕೆಗೆ ಹೊಸ ಆಯಾಮ ನೀಡುವ ಹಾದಿಯಲ್ಲಿ ಮುಂದಿನ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕುಂಬ್ಳೆ ಜತೆ ರ್ಯಾನ್ಬಾಕ್ಸಿ ಪಾಲುದಾರಿಕೆ
ಸಾರ್ವಜನಿಕರಲ್ಲಿ ಸದೃಢತೆ ಮತ್ತು ದೈಹಿಕ ವ್ಯಾಯಾಮದ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸಿ, ಹೃದಯದ ಆರೋಗ್ಯ ಉತ್ತೇಜಿಸಲು ಹಮ್ಮಿಕೊಂಡಿರುವ 'ಆರೋಗ್ಯಕರ ಹೃದಯ' ಎಂಬ ಆಂದೋಲನಕ್ಕೆ ರ್ಯಾನ್ಬಾಕ್ಸಿ ಸಂಸ್ಥೆ ಕ್ರಿಕೆಟಿಗ ಅನಿಲ್ಕುಂಬ್ಳೆ ಜತೆ ಪಾಲುದಾರಿಕೆ ಮಾಡಿಕೊಂಡಿದೆ. ನಗರದಲ್ಲಿ ಇತ್ತೀಚೆಗೆ ನಡೆದ ಭಾರತೀಯ ಹೃದ್ರೋಗ ಸಮಾಜದ ಸಭೆಯಲ್ಲಿ ಈ ಪಾಲುದಾರಿಕೆ ಏರ್ಪಟ್ಟಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅನಿಲ್ ಕುಂಬ್ಳೆ, ನಿಯಮಿತ ವ್ಯಾಯಾಮ ಇಲ್ಲದಿದ್ದಲ್ಲಿ ತಾವು ಕ್ರಿಕೆಟ್ನಲ್ಲಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ವ್ಯಾಯಾಮ ಕೊಲೆಸ್ಟೆರಾಲ್ ಅಂಶ ತಗ್ಗಿಸಿ, ಹೃದಯದ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಹಾಗಾಗಿ ಹೃದಯದ ಆರೋಗ್ಯಕ್ಕೆ ವ್ಯಾಯಾಮ ಅತ್ಯಗತ್ಯ ಎಂದರು. ರ್ಯಾನ್ಬಾಕ್ಸಿ ಲ್ಯಾಬೊರೇಟರಿಸ್ನ ಭಾರತ ವಿಭಾಗದ ಉಪಾಧ್ಯಕ್ಷ ರಾಜೀವ್ ಸಿಬಾಲ್ ಮಾತನಾಡಿ, ಇಂದಿನ ಸಾಮಾಜಿಕ, ಆರ್ಥಿಕ ಬದಲಾವಣೆ ದೈಹಿಕ ಚಟುವಟಿಕೆಯನ್ನು ಗಣನೀಯವಾಗಿ ತಗ್ಗಿಸಿವೆ. ಇದರಿಂದಾಗಿ ಕೊಲೆಸ್ಟ್ರಾಲ್ ಹೆಚ್ಚುವ ಜತೆಗೆ ಅಧಿಕ ಒತ್ತಡ ಮತ್ತು ಮಧುಮೇಹ ಉಂಟಾಗುತ್ತಿದೆ. ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ 'ಆರೋಗ್ಯಕರ ಹೃದಯ' ಆಂದೋಲನ ನೆರವಾಗಲಿದೆ ಎಂದರು.
ಐಡಿಎಸ್ಎ ಹಣಕಾಸು ನಿರ್ವಹಣೆ ರು. 7,164 ಕೋಟಿಗೆ ಏರಿಕೆ
ಭಾರತೀಯ ನೇರ ಮಾರಾಟ ಸಂಘ(ಐಡಿಎಸ್ಎ) ಮತ್ತು ಪಿಎಚ್ಡಿ ಛೇಂಬರ್ ಆಫ್ ಕಾಮರ್ಸ್ ಜತೆಗೂಡಿ 2012-13ರ ವರದಿ ಪ್ರಕಟಿಸಿವೆ. ವರದಿ ಪ್ರಕಾರ ಭಾರತೀಯ ನೇರ ಮಾರಾಟ ಸಂಘ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 12.2ರಷ್ಟು ಪ್ರಗತಿ ಸಾಧಿಸಿದೆ. ಅಲ್ಲದೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೇರ ಮಾರಾಟ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯಾಗಿದ್ದು ರು. 6,385 ಕೋಟಿಯಷ್ಟಿದ್ದ ಹಣಕಾಸು ನಿರ್ವಹಣೆ ಪ್ರಸಕ್ತ ವರ್ಷದಲ್ಲಿ ರು. 7,164 ಕೋಟಿಗೆ ಏರಿದೆ. ಮುಂಬರುವ ದಿನಗಳಲ್ಲಿ ಸಂಘ ಇನ್ನೂ ಹೆಚ್ಚಿನ ಸಾಧನೆ ಮಾಡಲಿದ್ದು, ಅದಕ್ಕೆ ಈ ವರದಿ ಸಹಕಾರಿ ಆಗಲಿದೆ ಎಂದು ಪಿಎಚ್ಡಿ ಛೇಂಬರ್ ಆಫ್ ಕಾಮರ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಸೌರಭ್ ಸನ್ಯಾಲ್ ಹೇಳಿದ್ದಾರೆ. ಭಾರತೀಯ ನೇರ ಮಾರಾಟ ಸಂಘದ ಛೇರ್ಮನ್ ಅಮರ್ನಾಥ್ ಸೇನ್ಗುಪ್ತಾ, ಸೆಕ್ರೆಟರಿ ಜನರಲ್ ಛಾವಿ ಹೇಮಂತ್ ಹಾಜರಿದ್ದರು.
'ಎಂ ರುಪೀ' ಸೇವೆ ವಿಸ್ತರಣೆ
ಟಾಟಾ ಡೊಕೊಮೊದ ಅಂಗಸಂಸ್ಥೆ ಎಂಎಂಪಿ ಮೊಬಿ ವ್ಯಾಲೆಟ್ ಪೇಮೆಂಟ್ ಸಿಸ್ಟಮ್ಸ್ ಹಣ ವರ್ಗಾವಣೆಗಾಗಿ ನೀಡುತ್ತಿರುವ 'ಎಂ ರುಪೀ' ಸೇವೆಯನ್ನು ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ಇನ್ನೂ 26 ನಗರಗಳಿಗೆ ವಿಸ್ತರಿಸುವುದಾಗಿ ಘೋಷಿಸಿದೆ. ಸದ್ಯ ಈ ಸೇವೆಯು 1700ಕ್ಕೂ ಅಧಿಕ ಚಿಲ್ಲರೆ ವಹಿವಾಟು ಘಟಕಗಳೊಂದಿಗೆ ದೇಶದ 11 ಪ್ರಮುಖ ನಗರಗಳಲ್ಲಿ ಲಭ್ಯವಿದೆ. ಎಂ ರುಪೀ ಸೇವೆಯನ್ನು ಮೊಬೈಲ್ ಫೋನ್ ಬಳಕೆದಾರರು ಸ್ವತಃ ಅಥವಾ ಚಿಲ್ಲರೆ ವಹಿವಾಟುದಾರ ಏಜೆನ್ಸಿಗಳ ಮೂಲಕ ಪಡೆದುಕೊಳ್ಳಬಹುದು. ಗ್ರಾಹಕರು ಎಂಎಂಪಿಯ ಯಾವುದೇ ಘಟಕಕ್ಕೆ ತೆರಳಿ ನಗದು ಜಮಾ ಮಾಡಿ ಹಣ ತಲುಪಬೇಕಾಗಿರುವವರ ವಿವರ ಹಾಗೂ ವಿಳಾಸ ನೀಡಿದರೆ ಮುಗಿಯಿತು. ಗ್ರಾಹಕರು ಸೂಚಿಸಿದ ಆ ವ್ಯಕ್ತಿಗೆ ಸಂಸ್ಥೆ ಕ್ಷಿಪ್ರಗತಿಯಲ್ಲಿ ಹಣ ತಲುಪಿಸುತ್ತದೆ ಎಂದು ಎಂಎಂಪಿಎಲ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ಕುಮಾರ್ ಸಂಪತ್ ತಿಳಿಸಿದ್ದಾರೆ.
ಭಾರತೀಯ ಉತ್ಪಾದಕರ 3ನೇ ಪ್ರದರ್ಶನ ಮೇಳ
'ಭಾರತೀಯ ಉತ್ಪಾದಕರ 3ನೇ ಪ್ರದರ್ಶನ ಮೇಳ'(ಐಎಂಎಸ್-2014) ನಗರದ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಸೆ. 11 ರಿಂದ 13ರವರೆಗೆ ನಡೆಯಲಿದೆ. ಬ್ಲೂಮ್ಬರ್ಗ್ ಟಿವಿ ಇಂಡಿಯಾ, ರಿಲಾಯನ್ಸ್ ಬ್ರಾಡ್ಕಾಸ್ಟ್ ನೆಟ್ವರ್ಕ್ ಲಿ., ಐಎಂಎಸ್ ಫೌಂಡೇಷನ್ ಮತ್ತು ಲಘು ಉದ್ಯೋಗ್ ಭಾರತಿ-ಕರ್ನಾಟಕ ಸಹಭಾಗಿತ್ವದಲ್ಲಿ ನಡೆಯಲಿರುವ ಈ ಪ್ರದರ್ಶನ ಮೇಳ ಆಯೋಜನೆ ಬಗ್ಗೆ ಡಿ. 18ರಂದು ಟೊಯೊಟೊ ಕಿರ್ಲೋಸ್ಕರ್ ಮೋಟಾರ್ ಉಪಾಧ್ಯಕ್ಷ ಮತ್ತು ಐಎಂಎಸ್ 2014ರ ಸಲಹಾ ಸಮಿತಿ ಅಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಸಮ್ಮುಖದಲ್ಲಿ ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಕ್ರಮ್ ಕಿರ್ಲೋಸ್ಕರ್, ಭಾರತದ ಜಿಡಿಪಿಯಲ್ಲಿ ಉತ್ಪಾದನಾ ಕ್ಷೇತ್ರದ ಕೊಡುಗೆ ಬೆಳವಣಿಗೆಗೆ ಅಗತ್ಯ ಪ್ರಮಾಣಕ್ಕಿಂತ ಕಡಿಮೆ ಮಟ್ಟದಲ್ಲಿದೆ. ಉತ್ಪಾದನಾ ಕ್ಷೇತ್ರ ತ್ವರಿತಗತಿಯಲ್ಲಿ ಬೆಳೆಯುತ್ತಿದ್ದು, ಎಲ್ಲ ಹಂತಗಳಲ್ಲಿ ಯುವಜನತೆಗೆ ಉದ್ಯೋಗ ಒದಗಿಸುತ್ತಿದೆ. ನೀತಿ ರೂಪಕರು ಸ್ಪರ್ಧಾತ್ಮಕ ಪರಿಸರ ನಿರೂಪಿಸಿ ಹೂಡಿಕೆದಾರರು ಮತ್ತು ಪ್ರಾದೇಶಿಕ ವಲಯಗಳಿಗೆ ಮಹತ್ವ ಕೊಡಬೇಕು. ಇದರಿಂದ ಉತ್ಪಾದನೆಯ ಗುಣಮಟ್ಟ ಸುಧಾರಿಸಲಿದೆ. ದೇಶದಲ್ಲಿ ವಿಫುಲ ಮಾನವ ಸಂಪನ್ಮೂಲವಿದೆ, ಹೇರಳ ಕಚ್ಚಾ ಸಾಮಗ್ರಿಗಳಿವೆ. ನೀತಿ ನಿರೂಪಕರು ಭಾರತೀಯ ಮಾರುಕಟ್ಟೆ ಮತ್ತು ಕಾರ್ಖಾನೆಗಳಿಗೆ ಪೂರಕ ಕ್ರಮಕೈಗೊಳ್ಳಲು ಭಾರತೀಯ ಉತ್ಪಾದನಾ ಪ್ರದರ್ಶನ-2014 ನೆರವಾಗಲಿದೆ ಎಂದು ಅವರು ತಿಳಿಸಿದರು.