ಮ್ಯೂಚ್ಯುಯಲ್ ಫಂಡ್ ಗ್ರಾಹಕರ ಪಾಡು
1991ರ ಸುಧಾರಣೆ ಮುಗಿದ ಆರಂಭದಲ್ಲೇ ದೇಶಕ್ಕೆ ಕಾಲಿಟ್ಟ ಮೊಟ್ಟಮೊದಲ ವಿದೇಶಿ ಮ್ಯೂಚ್ಯುಯಲ್ ಫಂಡ್- ಮೋರ್ಗನ್ ಸ್ಟ್ಯಾನ್ಲಿ. ಎರಡು ದಶಕಗಳ ಅನಂತರ ಆ ಸಂಸ್ಥೆ ತನ್ನ ಭಾರತೀಯ ವ್ಯವಹಾರವನ್ನು ಇನ್ನೊಂದು ಕಂಪನಿಗೆ ಮಾರಿ ತನ್ನ ಕೈ ತೊಳೆದುಕೊಂಡಿದೆ. ಅದೇ ರೀತಿ, ಇನ್ನೂ ಒಂದು ವಿದೇಶಿ ಫಂಡ್ ಕಂಪನಿಯೂ ನಿರ್ಗಮಿಸುತ್ತಿದೆ. ಹೂಡಿಕೆದಾರರ ದೃಷ್ಟಿಯಿಂದ ಇದೇನೂ ಒಳ್ಳೆಯ ಬೆಳವಣಿಗೆ ಅಲ್ಲ. ವಿದೇಶಿ ಕಂಪೆನಿಗಳ ನಿರ್ಗಮನದ ಪರಿಣಾಮವಾಗಿ, ಇಲ್ಲಿನ ಹೂಡಿಕೆದಾರರ ಆಯ್ಕೆ ಕಡಿಮೆಯಾಗಲಿದೆ. ಹಾಗೆಂದರೆ, ಸುಧಾರಣೆಯ ಉದ್ದೇಶವಾದ ನ್ಯಾಯವಾದ ಮುಕ್ತ ಸ್ಪರ್ಧೆಗೆ ಅವಕಾಶಗಳು ಕಡಿಮೆಯಾಗುತ್ತಿವೆ ಎಂದೇ ಅರ್ಥ. ಫಂಡ್‌ಗಳ ಸಂಖ್ಯೆ ಕಡಿಮೆಯಾದರೆ ಪೇಟೆಯ ಗಾತ್ರವೂ ಕುಗ್ಗಬಹುದು. ಅದರ ಪರಿಣಾಮವಾಗಿ ಫಂಡ್‌ಗಳ ಕೂಟಗಳಿಗೆ ಗ್ರಾಹಕರನ್ನು ಸುಲಿಯುವುದು ಸುಲಭವಾಗಬಹುದು.
ಈಚೆಗೆ ಸೆಕ್ಯೂರಿಟೀಸ್ ಅಂಡ್ ಎಕ್ಸ್‌ಚೇಂಜಸ್ ಬೋರ್ಡ್ ಆಫ್ ಇಂಡಿಯಾ ತನ್ನ ಹೊಸ ಯೋಜನೆಗಳನ್ನು ಪ್ರಕಟಿಸಿ, ಮ್ಯೂಚ್ಯುಯಲ್ ಫಂಡ್‌ಗಳಿಗೆ, ಹೂಡಿಕೆದಾರರಿಂದ ಹೆಚ್ಚು ಹಣ ಲಭ್ಯವಾಗುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಸಾಮಾನ್ಯವಾಗಿ ಸಣ್ಣ ಹೂಡಿಕೆದಾರರು ಮ್ಯೂಚ್ಯುಯಲ್ ಫಂಡ್‌ಗಳಲ್ಲಿ ಹಣವನ್ನು ತೊಡಗಿಸುವಾಗ ಎಲ್ಲ ಸಣ್ಣ-ಪುಟ್ಟ ವ್ಯವಹಾರಗಳನ್ನು ಪರಿಗಣಿಸುವುದಿಲ್ಲ. ಆದರೆ ನಿಯಂತ್ರಣ ಪ್ರಾಧಿಕಾರಗಳು ಹೂಡಿಕೆದಾರರಿಗೆ, ಎಲ್ಲ ಷರತ್ತುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಎಂದೇ ತಿಳಿಸುತ್ತಿವೆ. ಹಾಗಿದ್ದರೆ ನಿಯಂತ್ರಣ ಪ್ರಾಧಿಕಾರಗಳು ಯಾಕೆ ಬೇಕು?
ಹೌದು. ಇಂತಹ ಸಂದರ್ಭಗಳಲ್ಲಿ ಫಂಡ್ ಕಂಪನಿಗಳಿಗೆ ಖುಷಿಯಾದರೆ, ಗ್ರಾಹಕರಿಗೆ ಅವರ ಜೇಬಿನಲ್ಲಿನ ಹಣ ಕರಗಿರುವುದೂ ಗೊತ್ತಾಗುತ್ತದೆ. ಆಗ ಅವರು ಫಂಡ್‌ಗಳಿಂದಲೇ ನಿರ್ಗಮಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಪೆಟ್ಟು ಬೀಳುವುದು ಯಾರಿಗೆ? ಫಂಡ್‌ಗಳಿಗೇ ಅಲ್ಲವೇ?
ಸರ್ಕಾರಿ ಬ್ಯಾಂಕ್‌ಗಳ ಸ್ಥಿತಿ
2013ನೇ ಇಸ್ವಿಯಲ್ಲಿ ಸರ್ಕಾರಿ ಬ್ಯಾಂಕ್‌ಗಳ ಪರಿಸ್ಥಿತಿ ಚೆನ್ನಾಗಿರಲಿಲ್ಲ, ಪೇಟೆಯಲ್ಲಿ ಷೇರು ಬೆಲೆಗಳು ಬಿದ್ದಿದ್ದವು. ಅದರಿಂದ ಪೇಟೆಯಲ್ಲಿ ಕುಸಿತವೂ ಕಂಡು ಬಂದಿತ್ತು. 2014 ಹೇಗಿದ್ದೀತು? ಪರಿಸ್ಥಿತಿಯಲ್ಲಿ ಬದಲಾವಣೆಯಾದೀತು ಎಂದೇನೂ ಅನಿಸುತ್ತಿಲ್ಲ.
ಬ್ಯಾಂಕ್‌ಗಳ ಅನುಮಾನಾಸ್ಪದವಾದ ಸಾಲ (ಕೆಟ್ಟ ಸಾಲಕ್ಕೆ ಅದು ಪರ್ಯಾಯ ದರ) 94,121 ಕೋಟಿ ರುಪಾಯಿಗಳಿಂದ 2,36,245 ಕೋಟಿ ರುಪಾಯಿಗಳಿಗೆ ಏರಿದೆ. ಅಷ್ಟೇ ಸಾಲದೆಂಬಂತೆ, ಅನೇಕ ಸಂಸ್ಥೆಗಳು, ವ್ಯಕ್ತಿಗಳ ಸಾಲಗಳನ್ನು ಬ್ಯಾಂಕ್‌ಗಳು ಪುನಾರಚಿಸಿವೆ.
ಅಂದರೆ ಹಳೆಯ ಸಾಲ-ಬಡ್ಡಿ ಸೇರಿಸಿ ಹೊಸ ಸಾಲಗಳಿಗಾಗಿ ಪರಿವರ್ತಿಸಿವೆ. ಆ ಸಾಲಗಳೂ ಈಗ ಕೆಡುತ್ತಿವೆ, ಪರಿಸ್ಥಿತಿ ತೃಪ್ತಿಕರವಾಗಿಲ್ಲ.
ಸರ್ಕಾರಿ ಸಂಸ್ಥೆಗಳ ಷೇರು
ಈ ವರ್ಷದ ಬಜೆಟ್ ಭಾಷಣದಲ್ಲಿ ಸರ್ಕಾರಿ ಕಂಪನಿಗಳ ಷೇರುಗಳ ಮಾರಾಟದಿಂದ 40,000 ಕೋಟಿ ರುಪಾಯಿಗಳನ್ನು ಸಂಗ್ರಹಿಸುವ ಗುರಿ ಇತ್ತು. ಇದುವರೆಗಿನ ಸಾಧನೆ; 2962 ಕೋಟಿ ರುಪಾಯಿಗಳು. ಬಜೆಟ್ ಕೊರತೆಯನ್ನು ತುಂಬುವುದು ಕಷ್ಟ. ಅದಕ್ಕಾಗಿ, ಸರ್ಕಾರ ತನ್ನ ಬ್ಯಾಂಕ್‌ಗಳಿಗೆ ಮಧ್ಯಂತರ ಡಿವಿಡೆಂಟ್ ಕೊಡಲು ಕೇಳಲಿದೆ. ಅಂದರೆ ಸರ್ಕಾರಿ ಬ್ಯಾಂಕ್‌ಗಳ ಖಾತೆಯಲ್ಲಿನ ಹಣ ಸರ್ಕಾರದ ಖಜಾನೆ ಲೆಕ್ಕಕ್ಕೆ ಸೇರಬಹುದು, ಆದರೆ ಪರಿಸ್ಥಿತಿ ಸುಧಾರಿಸಿದಂತೆ ಆಗುವುದೇ? ಹೊಸ ವರ್ಷದ ಸವಾಲು ಇದು.
-ಸತ್ಯ