ವಿಎಂ ವೇರ್ನಿಂದ 3 ಸಾವಿರ ಕೋಟಿ ಬಂಡವಾಳ ಹೂಡಿಕೆ
ವರ್ಚ್ಯುವಲೈಸೇಷನ್ ಹಾಗೂ ಕ್ಲೌಡ್ ತಂತ್ರಜ್ಞಾನದಲ್ಲಿ ಪ್ರತಿಷ್ಠಿತ ವಿಎಂ ವೇರ್ ಕಂಪನಿಯು ಮುಂದಿನ 3 ವರ್ಷಕ್ಕೆ ಭಾರತದಲ್ಲಿ 3 ಸಾವಿರ ಕೋಟಿ ಬಂಡವಾಳ ಹೂಡುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಸುಮಾರು 720 ಕೋಟಿ ಬಂಡವಾಳ ಹೂಡಿ 2850 ಸಿಬ್ಬಂದಿಗೆ ಹೊಸ ಕ್ಯಾಂಪಸ್ನಲ್ಲಿ ಅವಕಾಶ ನೀಡಲಾಗಿತ್ತು. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿಯೇ ಹೊಸ ಘಟಕ ಆರಂಭಿಸಲಾಗುತ್ತಿದ್ದು, 2015ರಲ್ಲಿ ಕಾರ್ಯಾರಂಭ ಮಾಡುತ್ತಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಲು ಹವಣಿಸುತ್ತಿದೆ. ಏಷಿಯಾ ಫೆಸಿಫಿಕ್ನಲ್ಲಿ ಸರ್ವರ್ ವರ್ಚ್ಯುವಲೈಸೇಷನ್ ಕುರಿತಂತೆ ಸಂಸ್ಥೆ ಅಧ್ಯಯನ ಮಾಡುತ್ತಿದೆ. ಐಡಿಸಿ ಸರ್ವರ್ ಎಕನಾಮಿಕ್ ಸೂಚ್ಯಂಕದಂತೆ ಭಾರತದಲ್ಲಿ 2012ರ ವೇಳೆಗೆ ಕಂಪನಿ ವಹಿವಾಟು 20 ಸಾವಿರ ಕೋಟಿ ದಾಟುವ ನಿರೀಕ್ಷೆಯಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಆಕ್ಟೀವಾ 125 ಸಿಸಿ ಹೊಸ
ಸ್ಕೂಟರ್ ಮಾರುಕಟ್ಟೆಗೆ
ಪ್ರತಿಷ್ಠಿತ ಹೋಂಡಾ ಕಂಪನಿ ಆಕ್ಟೀವಾ 125 ಸಿಸಿ ಹೊಸ ಸ್ಕೂಟರ್ನ್ನು ಮಾರುಕಟ್ಟೆಗೆ ಬಿಟ್ಟಿದೆ. ನೂತನ ಆಕ್ಟೀವಾ ಸ್ಕೂಟರ್ 6500 ಆರ್ಪಿಎಂ ಸಾಮರ್ಥ್ಯ ಹೊಂದಿದ್ದು, ಏರು ರಸ್ತೆಗಳಲ್ಲಿಯೂ ಉತ್ತಮವಾಗಿ ಸಂಚರಿಸಲು ಶಕ್ತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಹೋಂಡಾ ಇಕೋ ತಂತ್ರಜ್ಞಾನದ ಕಾರಣದಿಂದ ಇಂಧನ ಕ್ಷಮತೆ ಹೆಚ್ಚಾಗಿದೆ. ಚಾಲನೆ ಸುರಕ್ಷತೆಗಾಗಿ ಹೋಂಡಾ ಸಂಯೋಜಿತ ಬ್ರೇಕಿಂಗ್ ವ್ಯವಸ್ಥೆ ಜತೆಗೆ ಡಿಸ್ಕ್ ಬ್ರೇಕ್ ಕೂಡ ಅಳವಡಿಸಲಾಗಿದೆ. ಇದರಿಂದ ಹಿಂದಿನ ಆ್ಯಕ್ಟೀವಾಗಿಂತ ಶೇ.24ರಷ್ಟು ಸಮಯಕ್ಕಿಂತ ವೇಗವಾಗಿ ಬ್ರೇಕ್ ಕಾರ್ಯನಿರ್ವಹಿಸುತ್ತದೆ. ಟ್ಯೂಬ್ ರಹಿತ ಚಕ್ರ, ಡಿಜಿಟಲ್ ಮೀಟರ್ ಬೋರ್ಡ್ ಹಾಗೂ ಅಲಾಯ್ ವ್ಹೀಲ್ಗಳು ಗಾಡಿಯ ಆಕರ್ಷಣೆ. ಪರ್ಲ್ ಸನ್ಬೀಮ್ ವೈಟ್, ಮಿಡ್ನೈಟ್ ಬ್ಲ್ಯೂ ಮೆಟಾಲಿಕ್, ಅಸ್ಪರಾಯಿಡ್ ಬ್ಲಾಕ್ ಮೆಟಾಲಿಕ್ ಮತ್ತು ಫೋರ್ಸ್ ಸಿಲ್ವರ್ ಮೆಟಾಲಿಕ್ ಬಣ್ಣಗಳಲ್ಲಿ ಡಿಲಕ್ಸ್ ಹಾಗೂ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಆ್ಯಕ್ಟೀವಾ ಲಭ್ಯವಿದೆ.
ಡಾಕ್ಟ್ರೀ ಸಂಸ್ಥೆಯಿಂದ ಆ್ಯಂಡ್ರಾಯ್ಡ್ ಅಪ್ಲಿಕೇಷನ್ ಬಿಡುಗಡೆ
ಆರೋಗ್ಯ ಸೇವೆಗಳ ಸುಧಾರಣೆಗಾಗಿ ಡಾಕ್ಟ್ರೀ ಸಂಸ್ಥೆಯು ಆ್ಯಂಡ್ರಾಯ್ಡ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ವರ್ಚ್ಯುವಲ್ ಹಾಸ್ಪಿಟಲ್ ಪ್ಲಾಟ್ಫಾರ್ಮ್ ರೂಪದಲ್ಲಿ ಈ ಅಪ್ಲಿಕೇಷನ್ ಕಾರ್ಯನಿರ್ವಹಿಸಲಿದೆ. ರೋಗಿಗಳಿಗೆ ಅಗತ್ಯವಾದ ವೈದ್ಯ ಚಿಕಿತ್ಸೆ, ವೆಚ್ಚದ ವಿವರವನ್ನು ತ್ವರಿತಗತಿಯಲ್ಲಿ ಈ ಅಪ್ಲಿಕೇಷನ್ ಮೂಲಕ ಪಡೆಯಬಹುದಾಗಿದೆ. ಕರ್ನಾಟಕದಲ್ಲಿ ಲಭ್ಯವಿರುವ ಎಲ್ಲ ಚಿಕಿತ್ಸೆ, ತಜ್ಞ ವೈದರು, ಇದರ ವೆಚ್ಚ, ಇತರ ಶುಶ್ರೂಷೆ ಕುರಿತಂತೆ ಅಪ್ಲಿಕೇಷನ್ನಲ್ಲಿಯೇ ಸಾರ್ವಜನಿಕರು ಮಾಹಿತಿ ಪಡೆಯಬಹುದು. ಇದನ್ನು ಸಾರ್ವಜನಿಕರಿಗೆ ಮಾತ್ರವಲ್ಲದೇ ವೈದ್ಯರು ಕೂಡ ವಿಶೇಷವಾಗಿ ಬಳಸಬಹುದು. ಅಪ್ಲಿಕೇಷನ್ಗೆ ಲಾಗ್ ಇನ್ ಆಗಿ ನೇರವಾಗಿ ರೋಗಿಗಳನ್ನು ಸಂಪರ್ಕಿಸಬಹುದು.
ಐಸಿಐಸಿಐ ಪ್ರುಡೆನ್ಷಿಯಲ್ ಡಿವಿಡೆಂಟ್ ಈಲ್ಡ್ ಈಕ್ವಿಟಿ ಫಂಡ್ ಆರಂಭ
ಐಸಿಐಸಿಐ ಪ್ರುಡೆನ್ಷಿಯಲ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ನೂತನ ಐಸಿಐಸಿಐ ಪ್ರುಡೆನ್ಷಿಯಲ್ ಡಿವಿಡೆಂಟ್ ಈಲ್ಡ್ ಈಕ್ವಿಟಿ ಫಂಡ್ ಯೋಜನೆ ಪರಿಚಯಿಸಿದೆ. ಹೂಡಿಕೆ ಹಿಂತೆಗೆತಕ್ಕೆ ಸದಾ ಅವಕಾಶವಿರುವ ಯೋಜನೆ ಇದಾಗಿದೆ. ಮಧ್ಯಮಾವಧಿಯಿಂದ ಆರಂಭಿಸಿ ದೀರ್ಘಾವಧಿವರೆಗೂ ಬಂಡವಾಳ ವೃದ್ಧಿ ಹಾಗೂ ಲಾಭಾಂಶ ವಿತರಣೆಯ ಉದ್ದೇಶ ಹೊಂದಿದ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದಲ್ಲದೇ ಈಕ್ವಿಟಿಗಳಿಗೆ ಸಂಬಂಧಿಸಿ ಆಕರ್ಷಕ ಲಾಭಾಂಶವನ್ನು ಇಲ್ಲಿ ಪಡೆಯಬಹುದಾಗಿದೆ. ಇದರಲ್ಲಿ ಕನಿಷ್ಠ ಹೂಡಿಕೆ 5 ಸಾವಿರವಾಗಿದ್ದು, ಆ ಬಳಿಕ 1 ರಂತೆ ಹೂಡಿಕೆ ಹೆಚ್ಚಿಸಬಹುದು. ವ್ಯವಸ್ಥಿತ ಹೂಡಿಕೆಯ ಕನಿಷ್ಠ ಮೊತ್ತ 1 ಸಾವಿರವಾಗಿದೆ.
ವಿಶೇಷ ಪಿಜ್ಜಾ ಮೇಳ
ಚಿಣ್ಣರ ಬೇಸಿಗೆ ಹಬ್ಬ ಹೆಸರಿನಲ್ಲಿ ಪಿಜ್ಜಾ ಕಾರ್ನರ್ ವಿಶೇಷ ಪಿಜ್ಜಾ ಮೇಳ ಆಚರಿಸುತ್ತಿದೆ. ಮೇ 4ರಿಂದ ಮುಂದಿನ ಎರಡು ಭಾನುವಾರ ಈ ಮೇಳ ನಡೆಯಲಿದೆ. ಈ ಅವಧಿಯಲ್ಲಿ ಪಿಜ್ಜಾ ಕಾರ್ನರ್ಗೆ ಭೇಟಿ ನೀಡುವ 14 ವರ್ಷದೊಳಗಿನ ಮಕ್ಕಳಿಗೆ ಆಕರ್ಷಕ ಉಡುಗೊರೆ ನೀಡಲಾಗುತ್ತದೆ. ಮೇ 11ರಂದು ಮ್ಯಾಜಿಕ್ ಷೋ, ಟ್ರೆಷರ್ ಹಂಟ್ ಹಾಗೂ ಟ್ಯಾಟು ಕಲಾವಿದರ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳು 149 ನೀಡಿ ಪ್ರವೇಶ ಪಡೆಯಬಹುದು. ಈ ಮೊತ್ತದಲ್ಲಿ ಆಲೂಗಡ್ಡೆ ವೆಡ್ಜಸ್, ವೆಜ್ ಪಿಜ್ಜಾದ ಎರಡು ತುಂಡು ಹಾಗೂ ಪಿಂಕ್ ಗಾವಾ ಡ್ರಿಂಕ್ ಸೇರಿದಂತೆ 3 ಕೋರ್ಸ್ ಮೀಲ್ ನೀಡಲಾಗುತ್ತದೆ. ಈ ಮೇಳವು ರಾಮಮೂರ್ತಿನಗರ, ಯಲಹಂಕ ಓಲ್ಡ್ಟೌನ್, ಜೆ.ಪಿ.ನಗರ ಬ್ರಿಗೇಡ್ ಮಿಲೇನಿಯಂ, ಜಯನಗರ ಲ್ಯಾಂಡ್ಚೈನ್ ಎದುರಿನ ಪಿಜ್ಜಾ ಕಾರ್ನರ್ನಲ್ಲಿ ನಡೆಯಲಿದೆ.ಪೀಟರ್ ಇಂಗ್ಲೆಂಡ್ನಿಂದ 'ಸ್ಪ್ರಿಂಗ್ ಸಮ್ಮರ್' ಸಂಗ್ರಹ ಬಿಡುಗಡೆ
ಪ್ರತಿಷ್ಠಿತ ಪೀಟರ್ ಇಂಗ್ಲೆಂಡ್ ಪುರುಷರ ಸಿದ್ದ ಉಡುಪು ತಯಾರಕ ಸಂಸ್ಥೆಯು ಬೇಸಿಗೆಗೆ 'ಸ್ಪ್ರಿಂಗ್ ಸಮ್ಮರ್' ಸಂಗ್ರಹವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಯಂಗ್ ಫಾರ್ಮಲ್, ವಾರ್ಸಿಟಿ, ಎಲಿಟ್, ಎಲಿಟ್ ಸ್ಪೋರ್ಟ್, ಪಿಇ ಜೀನ್ಸ್ ಒಳಗೊಂಡಿದೆ. ಬೇಸಿಗೆಯ ವಾತಾವರಣಕ್ಕೆ ಹೊಂದುವ ಬಣ್ಣ ಹಾಗೂ ಬಟ್ಟೆಯ ಗುಣಮಟ್ಟವನ್ನು ಇದು ಹೊಂದಿದೆ. ಕ್ವಾಟನ್ ಬಟ್ಟೆಗಳ ನವೀನ ವಿನ್ಯಾಸವನ್ನು ಇದು ಒಳಗೊಂಡಿದೆ. 'ಸ್ಪ್ರಿಂಗ್ ಸಮ್ಮರ್'ನಲ್ಲಿ 50ಕ್ಕೂ ಅಧಿಕ ಸಂಗ್ರಹಗಳು ಲಭ್ಯವಿವೆ.
ಲಿಮ್ಕಾವಾಲಿ ಪ್ಯಾಸ್
ಕೋಕೊಕೋಲಾ ಬ್ರಾಂಡ್ನ ಲಿಮ್ಕಾ ತಂಪು ಪಾನೀಯವು ಈಗ 'ಲಿಮ್ಕಾವಾಲಿ ಪ್ಯಾಸ್' ಟ್ಯಾಗ್ಲೈನ್ನಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಬ್ರಾಂಡ್ ರಾಯಭಾರಿ ಕರೀನಾ ಕಪೂರ್ ಅವರು ಬೇಸಿಗೆಯ ಧಗೆಯಲ್ಲಿ ಲಿಮ್ಕಾ ಕುಡಿಸಲು ಜಾಹೀರಾತಿನಲ್ಲಿ ಬರುತ್ತಿದ್ದಾರೆ. ದೈಹಿಕವಾಗಿ ದಣಿದಾಗ ಲಿಮ್ಕಾದಿಂದ ದಣಿವು ಆರಿಸಿಕೊಳ್ಳಬಹುದು ಎನ್ನುವುದು ಸಂಸ್ಥೆಯ ಅಭಿಪ್ರಾಯವಾಗಿದೆ.