ತಪ್ಪಾಗಿದೆ, ಕ್ಷಮಿಸಿ: ಫ್ಲಿಪ್ ಕಾರ್ಟ್
ಫ್ಲಿಪ್ಕಾರ್ಟ್ನ 'ಬಿಗ್ ಬಿಲಿಯನ್ ಡೇ' ದೊಡ್ಡ...
ಕ.ಪ್ರ.ವಾರ್ತೆ, ಬೆಂಗಳೂರು ಅ.7-
ಫ್ಲಿಪ್ಕಾರ್ಟ್ನ 'ಬಿಗ್ ಬಿಲಿಯನ್ ಡೇ' ದೊಡ್ಡ ತಮಾಷೆಯಾದ ಬೆನ್ನಲ್ಲೇ, ತನ್ನ ಗ್ರಾಹಕರಿಗೆ ಫ್ಲಿಪ್ ಕಾರ್ಟ್ ಕ್ಷಮಾಪಣೆಯ ಸಂದೇಶ ಕಳುಹಿಸಿದೆ.
ಫ್ಲಿಫ್ ಕಾರ್ಟ್ನ ಬಿಗ್ ಬಿಲಿಯನ್ ಡೇ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಮಾಡಲಾಗಿತ್ತು. ಈ ಸಂಬಂಧ ಭರ್ಜರಿ ಜಾಹೀರಾತು ನೀಡಿದ್ದ ಫ್ಲಿಪ್ ಕಾರ್ಟ್ ಗ್ರಾಹಕರಲ್ಲಿ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಸೋಮವಾರ ಅವರು ನೀಡಿದ ಕೊಡುಗೆಗಳ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಟ್ವೀಟರ್ ಹಾಗೂ ಫೇಸ್ ಬುಕ್ನಲ್ಲಿ ಟ್ರೆಂಡ್ ಆಗಿತ್ತು.
ಫ್ಲಿಪ್ ಕಾರ್ಟ್ ಮೇಲೆ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದ ಜನರು ಇತರ ಇ-ಕಾಮರ್ಸ್ನ ಇತರ ವೆಬ್ಸೈಟ್ಗಳನ್ನು ಹೋಲಿಕೆ ಮಾಡಿ ಗೇಲಿ ಮಾಡುತ್ತಿದ್ದರು.
ಇದರಿಂದ ಸ್ವಲ್ಪ ವಿಚಲಿತಗೊಂಡಿರುವ ಫ್ಲಿಪ್ಕಾರ್ಟ್ ಮಂಗಳವಾರ ಸಂಜೆ ಎಲ್ಲ ಗ್ರಾಹಕರಿಗೆ ಕ್ಷಮೆ ಕೇಳಿ ತಪ್ಪು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದೆ. ಕೆಲ ಗ್ರಾಹಕರು ಖರೀದಿಗೆ ಮುಂದಾದಾಗ 'ಸೋಲ್ಡ್ ಔಟ್' ಎಂದು ತೋರಿಸುತ್ತಿತ್ತು. ಈ ಸಂಬಂಧ ಅಧಿಕೃತ ಹೇಳಿಕೆ ನೀಡಿರುವ ಫ್ಲಿಫ್ ಕಾರ್ಟ್, ಸೋಮವಾರ ಬೆಳಗ್ಗೆಯಿಂದ ನಿರೀಕ್ಷೆಗೂ ಮೀರಿ ಜನರು ಖರೀದಿ ಮಾಡಿದ್ದಾರೆ. ಸುಮಾರು 15 ಲಕ್ಷ ಖರೀದಿಗಳು ಬಿಗ್ ಬಿಲಿಯನ್ ಡೇ ದಿನ ನಡೆದಿದೆ ಎಂದು ಹೇಳಿಕೊಂಡಿದೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಗುತ್ತದೆ ಎಂಬುದು ಗೊತ್ತಿರಲಿಲ್ಲ. ನಮ್ಮ ತಯಾರಿ ಬಗ್ಗೆ ಅಸಮಾಧಾನವಾಗಿದೆ. ಭವಿಷ್ಯದಲ್ಲಿ ಈ ರೀತಿಯಾಗದಂತೆ ಎಚ್ಚರ ವಹಿಸಲಾಗುವುದು. ನಾವು ಸೂಕ್ತ ತಯಾರಿ ನಡೆಸದಿರುವುದು ಈ ಗೊಂದಲಕ್ಕೆ ಕಾರಣವಾಯಿತು ಎಂದು ಫ್ಲಿಪ್ ಕಾರ್ಟ್ ಹೇಳಿಕೊಂಡಿದೆ.
ನಿಮ್ಮ ನಂಬಿಕೆಗೆ ಮೋಸವಾಗಿದೆ: ಫ್ಲಿಪ್ ಕಾರ್ಟ್ನಲ್ಲಿ ಆಸಕ್ತಿ ಇರಿಸಿಕೊಂಡು ಖರೀದಿಗೆ ಬಂದವರಿಗೆ ನಿರಾಸೆಯಾಗಿದೆ. ನಿಮ್ಮ ನಂಬಿಕೆ ಉಳಿಸಿಕೊಳ್ಳಲು ವಿಫಲವಾಗಿದ್ದೇವೆ. ಸಾಕಷ್ಟು ಪಾಠಗಳನ್ನು ಇದರಿಂದ ಕಲಿತಿದ್ದು, ಬಿಗ್ ಬಿಲಿಯನ್ ಡೇ ಸಂದರ್ಭದಲ್ಲಿ ಅದಕ್ಕೆ ಪರಿಹಾರ ಕೊಡಲು ಸಾಧ್ಯವಾಗಲಿಲ್ಲ.
ಕಾರ್ಟ್ನಲ್ಲಿ ಲಭ್ಯವಿದ್ದ ವಸ್ತುಗಳ ದರದ ಬಗೆಗೂ ಕೆಲ ಆರೋಪಗಳು ಬಂದಿವೆ. ಇದು ಗ್ರಾಹಕರ ಮನಸ್ಸು ಒಡೆದಿದೆ. ಇದು ಮತ್ತೆಂದೂ ಸಂಭವಿಸದಂತೆ ನೋಡಿಕೊಳ್ಳಲಾಗುವುದು ಎಂದು ಫ್ಲಿಪ್ ಕಾರ್ಟ್ ಭರವಸೆ ನೀಡಿದೆ.
ವೆಬ್ಸೈಟ್ ನಿರ್ವಹಣೆಯಲ್ಲಿಯೂ ಗೊಂದಲವಾಗಿರುವುದು ತಿಳಿದು ಬಂದಿದೆ. ಇವೆಲ್ಲ ಸಮಸ್ಯೆ ಆಗಿರುವುದಕ್ಕೆ ಪ್ರತಿಯೊಬ್ಬ ಗ್ರಾಹಕರಲ್ಲಿಯೂ ಕ್ಷಮೆ ಕೇಳುವುದಾಗಿ ಫ್ಲಿಪ್ಕಾರ್ಟ್ ಹೇಳಿದೆ.
ಬಿಗ್ ಫೂಲ್ ಡೇ:
ಬಿಗ್ ಬಿಲಿಯನ್ ಡೇ ಹೆಸರಿನಲ್ಲಿ ಆನ್ಲೈನ್ ಗ್ರಾಹಕರನ್ನು ಫ್ಲಿಪ್ ಕಾರ್ಟ್ ಫೂಲ್ ಮಾಡಿದೆ, ಯಾವುದೇ ವಿಶೇಷ ಕೊಡುಗೆ ನೀಡಲಿಲ್ಲ. ಇರುವ ಕೊಡುಗೆಗಳನ್ನು ಪಡೆಯಲು ಸೈಟ್ಗೆ ಹೋದರೆ 'ಔಟ್ ಆಫ್ ಸ್ಟಾಕ್' ಆಗಿತ್ತು ಎಂದು ಫೇಸ್ಬುಕ್ ಹಾಗೂ ಟ್ವೀಟರ್ಗಳಲ್ಲಿ ಜನರು ಬೇಸರ ವ್ಯಕ್ತಪಡಿಸುತ್ತಿದ್ದರು.
ಆನ್ಲೈನ್ನಲ್ಲಿ ಫ್ಲಿಪ್ಕಾರ್ಟ್ ಮರ್ಯಾದೆ ಹೋಗುತ್ತಿರುವುದನ್ನು ಗಮನಿಸಿಯೇ ಮತ್ತಷ್ಟು ಸಂಭವಿಸಲಿರುವ ನಷ್ಟ ಸುಧಾರಿಸಿಕೊಳ್ಳಲು ಎಲ್ಲ ಗ್ರಾಹಕರಿಗೆ ಕ್ಷಮಾಪಣೆಯ ಸಂದೇಶ ಕಳುಹಿಸಿದೆ.