ಗ್ರಾಮಾಂತರದಲ್ಲೂ ಕಾದಿದೆ ತೆರಿಗೆ ಬಿಸಿ
ಗ್ರಾಮ ಪಂಚಾಯ್ತಿಗಳ ಎಡವಟ್ಟಿಗೆ ಗ್ರಾಮೀಣ ಪ್ರದೇಶದ ಜನ ಭಾರಿ ಬೆಲೆ ತೆರಬೇಕಾಗಿ ಬಂದಿದೆ...
ಮೈಸೂರು: ಗ್ರಾಮ ಪಂಚಾಯ್ತಿಗಳ ಎಡವಟ್ಟಿಗೆ ಗ್ರಾಮೀಣ ಪ್ರದೇಶದ ಜನ ಭಾರಿ ಬೆಲೆ ತೆರಬೇಕಾಗಿ ಬಂದಿದೆ. ಗ್ರಾಮಾಂತರದಲ್ಲಿ ಆಸ್ತಿ ತೆರೆಗೆ ಪರಿಷ್ಕರಣೆ ಮಾಡಿ, ಅದರಿಂದಲೇ ಸಂಪನ್ಮೂಲ ಕ್ರೋಡೀಕರಿಸಿಕೊಳ್ಳಬೇಕು ಎಂದು ಸರ್ಕಾರ ಕಟ್ಟುನಿಟ್ಟಾಗಿ ಸೂಚಿಸಿದೆ.
ವಾಸ್ತವಿಕವಾಗಿ ಗ್ರಾಮ ಪಂಟಾಯ್ತಿಗಳು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಿಸಬೇಕು. ಆದರೆ ಹೆಚ್ಚಿನ ಗ್ರಾಮ ಪಂಚಾಯ್ತಿಗಳು ಆ ಬಗ್ಗೆ ಆಸಕ್ತಿಯನ್ನೇ ತೋರಿಲ್ಲ. ಈಗ ಸರ್ಕಾರ ಬಿಗಿ ನಿಲುವು ತಾಳಿರುವುದರಿಂದ ತೆರಿಗೆ ಪರಿಷ್ಕರಣೆ ಅನಿವಾರ್ಯವಾಗಿದೆ. ಅ.ರೊಳಗೆ ತೆರಿಗೆ ಪರಿಷ್ಕರಿಸಿ, ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ನ.15 ರೊಳಗೆ ಮಾಹಿತಿ ನೀಡಿ ಎಂದು ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಗಂಗಾ ರಾಮ್ ಬಡೇರಿಯಾ ಅವರು ರಾಜ್ಯದ ಎಲ್ಲಾ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾ.ಪಂ.ಅಧ್ಯಕ್ಷರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಕಾಲಕಾಲಕ್ಕೆ ಸರ್ಕಾರ ಸುತ್ತೋಲೆಗಳನ್ನು ಹೊರಡಿಸಿದ್ದರೂ ಬಹಳಷ್ಟು ಗ್ರಾ.ಪಂಗಳು ತೆರೆಗೆ ಪರಿಷ್ಕರಣೆ ಮತ್ತು ವಸೂಲಾತಿಯಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಗ್ರಾ.ಪಂಗಳ ತೆರೆಗೆಯ ಬೇಡಿ, ವಸೂಲಾತಿ ಮತ್ತು ಬಾಕಿ ಪಟ್ಟಿಯಿಂದಲೂ ಇದೂ ಖಚಿತವಾಗಿದೆ. ಆದ್ದರಿಂದ ಜಿಪಂ ಸಿಇಒ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ತೆರಿಗೆ ನಿರ್ಧಾರ ಮತ್ತು ಪರಿಷ್ಕರಣೆಗೆ ಕ್ರಮ ವಹಿಸಬೇಕು. ತಕ್ಷಣ ಜಿಪಂ ಸಿಇಒಗಳು ಸಮಿತಿಗಳನ್ನು ರಚಿಸಬೇಕು. ಈ ವಿಷಯದಲ್ಲಿ ಸರಿಯಾಗಿ ಕೆಲಸ ನಿರ್ವಹಿಸಿದ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಅವರು ಜಿ.ಪಂ. ಸಿಇಒಗಳಿಗೆ ಆದೇಶಿಸಿದ್ದಾರೆ. ಗ್ರಾಪಂಗಳಲ್ಲಿ ಆಸ್ತಿ ರಿಜಿಸ್ಟರ್ ಅನ್ನು ಕಡ್ಡಾಯವಾಗಿ ನಿರ್ವಹಿಸುವಂತೆಯೂ ಸೂಚಿಸಲಾಗಿದೆ. ರಾಜ್ಯದಲ್ಲಿ 5,629 ಗ್ರಾಪಂಗಳಿವೆ.
ಅಂದಾಜು ಸಮಿತಿ ಶಿಫಾರಸುಗಳು
ವಿಧಾನಸಬೆಯ ಅಂದಾಜುಗಲ ಸಮಿತಿಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಗೆ ಸಂಬಂಧಿಸಿದಂತೆ 3ನೇ ವರದಿಯನ್ನು ಇತ್ತೀಚೆಗೆ ಸಲ್ಲಿಸಿದೆ. ರಾಜ್ಯದಲ್ಲಿ ಬಹಳಷ್ಟು ಗ್ರಾಮ ಪಂಚಾಯ್ತಿಗಳು ಮನಬಂದಂತೆ ತೆರಿಗೆ ವಿಧಿಸುತ್ತಿವೆ.
ಆದ್ದರಿಂದ ತೆರಿಗೆ ನಿರ್ಧಾರ ಸಂಬಂಧ ನಿರ್ದಿಷ್ಟ ಮಾರ್ಗಸೂಚಿ ರೂಪಿಸಬೇಕು. ತೆರಿಗೆ ಸಂಗ್ರಹಣೆ ಗುರಿ ತಲುಪಲು ಕ್ರಮ ಕೈಗೊಳ್ಳಬೇಕು. ತೆರಿಗೆ ಸಂಗ್ರಹಣೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಕರ್ನಾಟಕ ಪಂಚಾಯತ್ರಾಜ್ (ಗ್ರಾಮ ಪಂಚಾಯ್ತಿಗಳ ತೆರಿಗೆಗಳು ಮತ್ತು ಫೀಜುಗಳು) ನಿಯಮಗಳು, 1994ರ ಅನ್ವಯ ಗ್ರಾ.ಪಂಗಳು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ತೆರಿಗೆ ಪರಿಷ್ಕರಣೆ ಮಾಡಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿತ್ತು.
ನಗರ, ಪಟ್ಟಣ ಪ್ರದೇಶಗಳ ಪಕ್ಕದಲ್ಲಿ ಬರುವ ಗ್ರಾ.ಪಂಗಳಲ್ಲಿ ಸರ್ಕಾರಿ ಆಸ್ತಿ ಗುರುತಿಸುವ ಕೆಲಸ ಆಗಿಲ್ಲ. ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸಲಾಗುತ್ತಿದೆ. ಅಲ್ಲಿ ಬಡಾವಣೆ ನಿರ್ಮಿಸಿ, ನಿವೇಶನಗಳನ್ನು ಹಂಚಲಾಗುತ್ತಿದೆ. ಆಲ್ಲಿರುವ ನಾಗರಿಕ ಸೌಲಭ್ಯ ನಿವೇಶನಗಳನ್ನು ಗ್ರಾ.ಪಂಗಳಿಗೆ ನೋಂದಣಿ ಮಾಡಿಸಿಕೊಳ್ಳಬೇಕು. ಬಡಾವಣೆಗಳನ್ನು ಸಮೀಪದ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳಿಗೆ ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಅಂದಾಜು ಸಮಿತಿಯು ಶಿಫಾರಸು ಮಾಡಿದೆ.