'ತೆರಿಗೆ'ಗೆ ಬಾ ತಂಗಿ!
ಆದಾಯ ತೆರಿಗೆ ನೀಡುವವರಿಗೆ ಪ್ರತಿವರ್ಷ ಮಾರ್ಚ್ ಮತ್ತು ಜುಲೈ 31 ಮಹತ್ವದ ದಿನಗಳು.
ಆದಾಯ ತೆರಿಗೆ ನೀಡುವವರಿಗೆ ಪ್ರತಿವರ್ಷ ಮಾರ್ಚ್ ಮತ್ತು ಜುಲೈ 31 ಮಹತ್ವದ ದಿನಗಳು. ಮಾರ್ಚ್ 31 ಅದಾಯ ತೆರಿಗೆ ಪಾವತಿಸಲು ಕೊನೆಯ ದಿನ. ಜು.31 ಅದಕ್ಕೆ ಸಂಬಂಧಿಸಿದ ರಿಟರ್ನ್ಸ್ ಅನ್ನು ಇಲಾಖೆಗೆ ಸಲ್ಲಿಸಲು ಅಂತಿಮ ದಿನವಾಗಿರುತ್ತದೆ. ತೆರಿಗೆ ನೀಡುವುದು ಎಷ್ಟು ಮುಖ್ಯವೋ ಹಾಗೆಯೇ ರಿಟರ್ನ್ಸ್ ಸಲ್ಲಿಸುವುದೂ ಅಷ್ಟೇ ಮುಖ್ಯ. ತೆರಿಗೆದಾರ ನೌಕರನಾಗಿದ್ದರೆ ಆತನ ಉದ್ಯೋಗಿಯ ತೆರಿಗೆಯನ್ನು ತುಂಬಿರುತ್ತಾನೆ. ಇದು ಆತನಿಗೆ ಕಾನೂನಾತ್ಮಕ ಕರ್ತವ್ಯ ಮತ್ತು ಹೊಣೆ. ಆದರೆ ರಿಟರ್ನ್ಸ್ ಸಲ್ಲಿಸುವುದು ಉದ್ಯೋಗಿಯ ಜವಾಬ್ದಾರಿಯಾಗಿರುತ್ತದೆ. ಒಮ್ಮೆಮ್ಮೆ ತೆರಿಗೆದಾರ ತನ್ನ ಹೊಣೆಯನ್ನು ಮರೆಯುವ ಸಂದರ್ಭಗಳಿರುತ್ತವೆ. ಆದರೆ ಅದಕ್ಕಾಗಿ ಆತ ಧೃತಿಗೆಡಬೇಕಾಗಿಲ್ಲ. ಈ ನಿಟ್ಟಿನಲ್ಲಿ ಇಲಾಖೆ ಧಾರವಾಗಿದ್ದು, ತೆರಿಗೆದಾರನ ಬಗ್ಗೆ ಅನುಕಂಪ ತೋರಿಸುತ್ತಿದೆ. ಆತನಿಗೆ ತೆರಿಗೆ ವರ್ಷದ ಅಂತ್ಯದಿಂದ ಒಂದು ವರ್ಷದ ಹೆಚ್ಚಿನ ಅವಕಾಶ ಕೊಡುತ್ತದೆ. ಅದು ಹೇಗೆ ಸಾಧ್ಯ? ಮಾರ್ಚ್ 31, 2014ರಂದು ಮುಕ್ತಾಯವಾದ ಹಣಕಾಸು ವರ್ಷ, ಮುಗಿಯುವುದು 2015ರ ಮಾರ್ಚ್ 31ಕ್ಕೆ. ಅಲ್ಲಿಂದ ಒಂದು ವರ್ಷವೆಂದರೆ ಮಾರ್ಚ್ 31, 2016ರ ವರೆಗೆ ರಿಟರ್ನ್ಸ್ ಸಲ್ಲಿಕೆ ಮಾಡಬಹುದು. ನೀವು ಈಗಾಗಲೇ ತೆರಿಗೆ ಪಾವತಿಸಿದ್ದು, ಕೇವಲ ರಿಟರ್ನ್ಸ್ ಸಲ್ಲಿಸಲು ಬಾಕಿ ಇದ್ದರೆ ನೀವು ಯಾವುದೇ ರೀತಿಯಲ್ಲಿ ದಂಡ ಅಥವಾ ಬಡ್ಡಿ ಪಾವತಿಸಬೇಕಿಲ್ಲ. ಈ ವಿನಾಯಿತಿ ರಿಟರ್ನ್ಸ್ ಅನ್ನು 2015ರ ಮಾರ್ಚ್ 31ರ ಒಳಗೆ ಸಲ್ಲಿಸಿದರೆ ಮಾತ್ರ ಸಿಗುತ್ತದೆ.
ನಿಮಗೆ ರಿಟರ್ನ್ಸ್ ಸಲ್ಲಿಕೆಗೆ 2016ರ ಮಾರ್ಚ್ 31ರ ವರೆಗೆ ಅವಕಾಶವಿದ್ದರೂ 2015ರ ಮಾ.31ರ ನಂತರ ಸಲ್ಲಿಸಿದರೆ 5 ಸಾವಿರ ದಂಡ ವಿಧಿಸಲು ಅವಕಾಶ ಉಂಟು.
ತಡವಾಗಿ ಸಲ್ಲಿಸಿದರೆ..?
ತಡವಾದ ಅವಧಿಗೆ ಪ್ರತಿ ತಿಂಗಳು ಶೇ.1ರ ಬಡ್ಡಿ ಹಾಕಲಾಗುತ್ತದೆ. ಉದಾ: 2014ರ ಮಾರ್ಚ್ 31ರಂದು ನೀವು ಪಾವತಿ ಮಾಡಬೇಕಾದ ತೆರಿಗೆ 30 ಸಾವಿರ ಬಾಕಿ ಇದೆ ಎಂದು ತಿಳಿದುಕೊಳ್ಳೋಣ. ಅದನ್ನು 2015ರ ಡಿ.31ರಂದು ಪಾವತಿ ಮಾಡಿ ರಿಟರ್ನ್ಸ್ ಫೈಲ್ ಮಾಡಿದರೆ ಆ.1ರಿಂದ 5 ತಿಂಗಳಿಗೆ ಶೇ.1ರ ದರದಲ್ಲಿ ಬಡ್ಡಿ ವಸೂಲು ಮಾಡಲಾಗುತ್ತದೆ.
ತಡವಾಗಿ ರಿಟರ್ನ್ಸ್ ಸಲ್ಲಿಸಿದ ದಿನದಿಂದ ಶೇ.0.5ರ ದರದಲ್ಲಿ ಬಡ್ಡಿ ಲೆಕ್ಕ ಹಾಕಿಕೊಡಲಾಗುವುದು ಮತ್ತು ರೀಫಂಡ್ ತಡವಾಗಿ ಬರುತ್ತದೆ. ಸಾಮಾನ್ಯವಾಗಿ ರಿಟರ್ನ್ಸ್ ಸಲ್ಲಿಸಲು ಅಂತಿಮ ಗಡುವು 2014ರ ಜು.31 ಆಗಿತ್ತು. ಅಷ್ಟರಲ್ಲಿ ಸಲ್ಲಿಸಿದ್ದರೆ, ನಿಮಗೆ ಬರಬೇಕಾದ ರೀಫಂಡ್ 2015ರ ಮೇ 31ರಂದು ಬಂದರೆ ನಿಮಗೆ 2014 ಮಾ.31ರಿಂದ 2015ರ ಮೇ 31ರ ವರೆಗೆ 14 ತಿಂಗಳ ಬಡ್ಡಿ ರೀಫಂಡ್ ಆಗುತ್ತದೆ.
ನಿಗದಿತ ಸಮಯಕ್ಕೆ ರಿಟರ್ನ್ಸ್ ಸಲ್ಲಿಕೆ ಮಾಡಿದರೆ ಅದನ್ನು ರಿವೈಸ್ ಮಾಡಬಹುದು. ಆದರೆ ವಿಳಂಬವಾಗಿ ರಿಟರ್ನ್ಸ್ ಫೈಲ್ ಮಾಡಿದವರಿಗೆ ರಿವೈಸ್ ಮಾಡಲು ಸಾಧ್ಯವಿಲ್ಲ.
ನೀವು ಹೆಚ್ಚಿಗೆ ಆದಾಯ ಘೋಷಿಸಿದ್ದರೆ ಅಥವಾ allowances ಮತ್ತು deductins ಗಳನ್ನು ಕ್ಲೇಮ್ ಮಾಡದಿದ್ದರೆ ತಡವಾಗಿ ರಿಟರ್ನ್ಸ್ ಸಲ್ಲಿಸಿದ ನಂತರ ಪುನಃ ರಿವೈಸ್ ಮಾಡಲು ಸಾಧ್ಯವಿಲ್ಲ.
ತೆರಿಗೆ ಇಲಾಖೆ ಸಾಮಾನ್ಯವಾಗಿ ಎಂಟು ವರ್ಷಗಳ ವರೆಗೆ ನಿಮ್ಮ ಹಾನಿಯನ್ನು ಮುಂದುವರಿಸಲು(carry forward) ಮಾಡಲು ಮತ್ತು ಸೆಟ್ ಆಫ್ ಮಾಡಲು ಅವಕಾಶ ಕೊಡುತ್ತದೆ. ಆದರೆ ತಡವಾಗಿ ರಿಟರ್ನ್ಸ್ ಫೈಲ್ ಮಾಡಿದವರಿಗೆ ಈ ಅವಕಾಶ ಸಿಗುವುದಿಲ್ಲ. ತಡವಾಗಿ ರಿಟರ್ನ್ಸ್ ಫೈಲ್ ಮಾಡುವವರು ತಪ್ಪಾಗದಂತೆ ಮತ್ತು ಏನನ್ನೂ ಬಿಡದಂತೆ ಎಚ್ಚರ ವಹಿಸಬೇಕು. ಒಮ್ಮೆ ಸಲ್ಲಿಸಿದ ನಂತರ ಅದರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಈ ಹೆಚ್ಚುವರಿ ಎರಡು ವರ್ಷದಲ್ಲೂ ರಿಟರ್ನ್ಸ್ ಫೈಲ್ ಮಾಡದಿದ್ದರೆ ದಂಡ ಮತ್ತು ಬಡ್ಡಿ ಹೊರತಾಗಿ ತೆರಿಗೆ ಇಲಾಖೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ತಡವಾಗಿ ರಿಟರ್ನ್ಸ್ ಸಲ್ಲಿಸಲು ಅವಕಾಶವಿದ್ದರೂ, ಈ ನಿಟ್ಟಿನಲ್ಲಿ ಅನುಭವಿ ತೆರಿಗೆ ಸಲಹೆಗಾರರ ಸಲಹೆ ಪಡೆಯುವುದು ಉತ್ತಮ.
-ರಮಾನಂದ ಶರ್ಮಾ