ಕುಸಿಯುತ್ತಿದೆ ಹಣದುಬ್ಬರ, ಬರುತ್ತಿದೆ 'ಅಚ್ಛೇ ದಿನ' ಹತ್ತಿರ
ನವದೆಹಲಿ: ಜನಸಾಮಾನ್ಯರು ವರ್ಷಗಳಿಂದ ಕಾತರದಿಂದ ಎದುರು ನೋಡುತ್ತಿದ್ದ 'ಅಚ್ಛೇ ದಿನ' ಕೊನೆಗೂ ಬಂದಂತಿದೆ. ಇದರ ಶುಭ ಸೂಚನೆಯನ್ನುವಂತೆ ತರಕಾರಿ ಬೆಲೆ ನಿಧಾನವಾಗಿ ಇಳಿಕೆಯಾಗುತ್ತಿದೆ. ಪರಿಣಾಮ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ಸಗಟು ಮಾರಾಟ ಹಣದುಬ್ಬರ ಶೇ.2.38ಕ್ಕೆ ಇಳಿದಿದೆ. ಹಣದುಬ್ಬರ ಆಧರಿತ ಈ ಸಗಟು ದರ ಸೂಚ್ಯಂಕ ಸೆಪ್ಟೆಂಬರ್ನಲ್ಲಿ ಶೇ.3.74ರಲ್ಲಿತ್ತು.
ಈ ಬೆಳವಣಿಗೆ ಭಾರತದ ಅರ್ಥವ್ಯವಸ್ಥೆ ಸಹಜ ಲಯಕ್ಕೆ ಮರುಳುತ್ತಿದೆ. ದೇಶಕ್ಕೆ ಮತ್ತೆ ಒಳ್ಳೆಯ ದಿನಗಳು ಕಾಲಿಡುತ್ತಿದೆ ಎನ್ನುವ ಸಂದೇಶವನ್ನು ರವಾನಿಸಿದೆ. ಈ ವಿಚಾರವನ್ನು ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳೇ ಹೇಳುತ್ತಿವೆ. ಇದರಿಂದ ಬಡ್ಡಿದರ ಇಳಿಸಲು ಹಿಂದೇಟು ಹಾಕುತ್ತಿದ್ದ ಆರ್ಬಿಐ ಕೂಡ ತನ್ನ ನಿಲುವು ಬದಲಿಸುವ ಒತ್ತಡಕ್ಕೆ ಸಿಲುಕಿದೆ.
ಪ್ರಮುಖ ಕಾರಣ?
ಅಂತರಾಷ್ಟ್ರೀಯ ಮಟ್ಟದಲ್ಲಿ ಸರಕು ದರ ಹಾಗೂ ಕಚ್ಚಾತೈಲ ದರ ಇಳಿಕೆಯಾಗಿರುವುದು ದೇಶದಲ್ಲಿ ಹಣದುಬ್ಬರ ಕುಸಿತಕ್ಕೆ ಕಾರಣವಾಗಿದೆ. ಏ.14ರಂದು ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 105.56 ಡಾಲರ್ ಇತ್ತು. ಆದರೆ, ಅ.14ರಂದು ಅದು 91.03 ಡಾಲರ್ಗೆ ಇಳಿದಿದೆ.
ಪೆಟ್ರೋಲ್ 1 ರು. ಇಳಿಕೆ
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ದರವನ್ನು ಪ್ರತಿ ಲೀಟರ್ಗೆ 1 ರುಪಾಯಿ ಇಳಿಕೆ ಮಾಡಿವೆ. ಮಂಗಳವಾರ ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಯಾಗಿದೆ.
ಡೀಸೆಲ್ ಅಗ್ಗ?
5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್ ದರ ಲೀಟರ್ಗೆ 2.50 ರಷ್ಟು ಭಾನುವಾರ ಇಳಿಯುವ ಸಾಧ್ಯತೆ ಇದೆ.