ಮುಂಬೈ: ಷೇರು ಮಾರುಕಟ್ಟೆಯ ಸೋಮವಾರದ ಆರಂಭದ ವಹಿವಾಟಿನಲ್ಲಿ ಬಿಎಸ್ ಇ ಸೆನ್ಸೆಕ್ಸ್ ಶೇಕಡಾ 3.5ರಷ್ಟು ಕುಸಿತ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕಳೆದ ಎರಡು ವರ್ಷಗಳಲ್ಲಿ ಭಾರೀ ಮಟ್ಟಕ್ಕೆ ಕುಸಿದಿದ್ದು, ಪ್ರತಿ ಡಾಲರ್ ಎದುರು ರೂಪಾಯಿ ಬೆಲೆ 66 ರೂಪಾಯಿ 49 ಪೈಸೆಯಷ್ಟಾಗಿದೆ.
ಷೇರು ಮಾರುಕಟ್ಟೆಯ ಇಂದಿನ ಪ್ರಮುಖ ಅಂಶಗಳು:
ಇಡೀ ಏಷ್ಯಾ ಖಂಡದ ಪ್ರಮುಖ ಆರ್ಥಿಕ ಚಟುವಟಿಕೆ ದೇಶವಾದ ಚೀನಾ ದೇಶದ ಶಾಂಘೈ ಷೇರುಗಳ ವಹಿವಾಟಿನಲ್ಲಿ ಇಂದು ಕಳೆದ ಐದು ತಿಂಗಳಲ್ಲೇ ಭಾರೀ ಕುಸಿತ ಕಂಡುಬಂದಿರುವುದು ನಮ್ಮ ದೇಶದ ಷೇರು ವಹಿವಾಟು ಕುಸಿತಕ್ಕೆ ಕಾರಣವಾಗಿದೆ.
ಚೀನಾ ಷೇರು ಮಾರುಕಟ್ಟೆಯಲ್ಲಿನ ಅಲ್ಲೋಲ ಕಲ್ಲೋಲ ಇಡೀ ಏಷ್ಯಾ ಖಂಡದ ರಾಷ್ಟ್ರಗಳ ಷೇರುಗಳ ಮೇಲೆ ಪರಿಣಾಮ ಬೀರಿದೆ. ಹೂಡಿಕೆದಾರರಲ್ಲಿ ವಿಶ್ವಾಸ ಕಳೆದುಕೊಂಡಿದೆ.
ಇಂದು ಷೇರು ವಹಿವಾಟು ಆರಂಭಕ್ಕೆ ಸಾವಿರ ಅಂಕಗಳಷ್ಟು ಕುಸಿತ ಕಂಡುಬಂದಿದೆ.ನಿಫ್ಟಿ ಸಹ 8 ಸಾವಿರ ಅಂಕ ಕುಸಿತ ಕಂಡುಬಂದಿದ್ದು, ಇದು ಕಳೆದ ಎರಡು ತಿಂಗಳಲ್ಲಿ ಭಾರೀ ಮಟ್ಟದಲ್ಲಿ ಉಂಟಾದ ಕುಸಿತವಾಗಿದೆ. ಷೇರು ಮಾರುಕಟ್ಟೆಯಲ್ಲಿ ಇಂದು ವಹಿವಾಟು ನಡೆಸಿದ ಎಲ್ಲಾ ಕಂಪೆನಿಗಳ ಷೇರುಗಳು ಇಳಿಕೆಯಾಗಿದ್ದವು.
ಕಳೆದ ವಾರ ಚೀನಾ ತನ್ನ ಕರೆನ್ಸಿಯಾದ ಯಾನ್ ನ ಮೌಲ್ಯವನ್ನು ತಗ್ಗಿಸಿದ್ದೇ ಷೇರು ಪೇಟೆ ಇಳಿಕೆಗೆ ಕಾರಣವಾಗಿದೆ. ಕಳೆದ ವಾರ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದರು.
ಇತ್ತ ರೂಪಾಯಿ ಮೌಲ್ಯ ಇಳಿಕೆಯಾಗಿರುವುದರಿಂದ ವಿದೇಶಿ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ.