ಬೆಂಗಳೂರು: ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಂದ ಅಗತ್ಯವಿದ್ದ ಕಲ್ಲಿದ್ದಲನ್ನು ಮಹಾರಾಷ್ಟ್ರದಿಂದ ಪಡೆಯಲು ಇದ್ದ ಅಡ್ಡಿ ಆತಂಕಗಳು ನಿವಾರಣೆಯಾಗಿವೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮುಂಬೈನ ಸಚಿವಾಲಯದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಜೊತೆ ಮಾತುಕತೆ ನಡೆಸಿ ರಾಜ್ಯದ ಕಲ್ಲಿದ್ದಲು ಬೇಡಿಕೆಗೆ ಅವಶ್ಯಕವಾದ ಕಲ್ಲಿದ್ದಲು ನಿಕ್ಷೇಪವನ್ನು ಮಹಾರಾಷ್ಟ್ರದ ಗಣಿಗಳಿಂದ ಹೊರ ತೆಗೆಯಲು ಪೂರ್ಣ ಪ್ರಮಾಣದ ಅನುಮತಿ ಪಡೆದುಕೊಂಡಿದ್ದಾರೆ. ಅಲ್ಲಿನ ಚಂದ್ರಾಪುರ ಜಿಲ್ಲೆಯಲ್ಲಿನ ಬಾರಂಜ್, ಮನೋರಾದೀಪ್ ಹಾಗೂ ಖೇಲೋನ್ಯ ಸೇರಿದಂತೆ ಆರು ಕಲ್ಲಿದ್ದಲು ನಿಕ್ಷೇಪಗಳನ್ನು ಮಂಜೂರು ಮಾಡಲಾಗಿದೆ. ಇಲ್ಲಿಂದ ಕಲ್ಲಿದ್ದಲು ಹೊರಗೆ ತೆಗೆಯಲು ಸ್ಥಳೀಯವಾಗಿ ಇದ್ದ ಅಡ್ಡಿ ಆತಂಕಗಳನ್ನು ನಿವಾರಿಸಲು ತೀರ್ಮಾನಿಸಲಾಯಿತು.
ಕೇಂದ್ರ ಸರ್ಕಾರ ಈ ಹಿಂದೆಯೇ ಬಳ್ಳಾರಿ ವಿದ್ಯುತ್ ಘಟಕ ಸೇರಿದಂತೆ ಕರ್ನಾಟಕದ ಶಾಖೋತ್ಪನ್ನ ವಿದ್ಯುತ್ ಘಟಕಗಳಿಗೆ ಈ ಕಲ್ಲಿದ್ದಲು ನಿಕ್ಷೇಪಗಳಲ್ಲಿ ಗಣಿಗಾರಿಕೆ ನಡೆಸಿ ಕಲ್ಲಿದ್ದಲನ್ನು ಸಂಗ್ರಹಿಸಿ ಕರ್ನಾಟಕಕ್ಕೆ ಸಾಗಾಣೆ ಮಾಡಲು ಅನುಮತಿ ನೀಡಲಾಗಿತ್ತು. ಆದರೆ ಸ್ಥಳೀಯವಾದ ಸಮಸ್ಯೆಗಳಿಂದಾಗಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಟಿಸಿಎಲ್) ಇಲ್ಲಿಯವರೆಗೂ ತನ್ನ ಪಾಲಿನ ಕಲ್ಲಿದ್ದಲು ಹೊರ ತೆಗೆಯಲು ಸಾಧ್ಯವಾಗದೆ ತೊಂದರೆ ಉದ್ಭವಿಸಿದ್ದ ಹಿನ್ನೆಲೆಯಲ್ಲಿ ಇಂದಿನ ಸಭೆ ಮಹತ್ವ ಪಡೆದುಕೊಂಡಿತ್ತು.