ಪುಣೆ: ಭಾರತದ ಸಾಗರೋತ್ಪನ್ನ ರಫ್ತು ಸಾರ್ವಕಾಲಿಕ ದಾಖಲೆ ಮಾಡಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತ 10,51,243 ಮೆಟ್ರಿಕ್ ಟನ್ ಸಾಗರ ಉತ್ಪನ್ನಗಳನ್ನು ರಫ್ತು ಮಾಡಿದ್ದು ಇದರ ಮೌಲ್ಯ ರು. 33,441.61 ಕೋಟಿ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ. ಇದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಉತ್ಪನ್ನಗಳ ಪ್ರಮಾಣದಲ್ಲಿ ಶೇ.6.86ರಷ್ಟು ಹೆಚ್ಚಿದೆ. ರುಪಾಯಿಮೌಲ್ಯದಲ್ಲಿ ಶೇ.10.69ರಷ್ಟು ಮತ್ತು ಡಾಲರ್ ಮೌಲ್ಯದಲ್ಲಿ ಶೇ.10.05ರಷ್ಟು
ಏರಿಕೆ ದಾಖಲಿಸಿದೆ.
ಒಟ್ಟಾರ ರಫ್ತಿನ ಪ್ರಮಾಣದಲ್ಲಿ ಶೈತ್ಯೀಕರಿಸಿ ಒಣಗಿಸಿದ ಸೀಗಡಿ ಪ್ರಮಾಣ ಶೇ.34.01ರಷ್ಟಿದ್ದರೆ, ಡಾಲರ್ ಮೌಲ್ಯದಲ್ಲಿ ಶೇ.67.19ರಷ್ಟಿದೆ. ಈ ಅವಧಿಯಲ್ಲಿ ಸೀಗಡಿ ರಫ್ತು ಶೇ.18.60ರಷ್ಟು ಏರಿಕೆ ಕಂಡಿದೆ. ಕಳೆದ ಸಾಲಿನಲ್ಲಿ ಸೀಗಡಿಯ ಒಟ್ಟಾರೆ ರಫ್ತು ಪ್ರಮಾಣ 3,57,505 ಮೆಟ್ರಿಕ್ ಟನ್‍ನಷ್ಟಿದೆ. ಅಮೆರಿಕ ಮಾತ್ರವೇ 1,12,702 ಮೆಟ್ರಿಕ್ ಟನ್ ಸೀಗಡಿ ಆಮದು ಮಾಡಿಕೊಂಡಿದೆ. ಐರೋಪ್ಯ ಒಕ್ಕೂಟ ಮತ್ತು ಆಗ್ನೇಯ ಏಷ್ಯಾ ಮತ್ತು
ಜಪಾನ್ ನಂತರದ ಸ್ಥಾನಗಳಲ್ಲಿವೆ.