ನವದೆಹಲಿ: ಕಾರ್ಮಿಕ ಸಂಘಟನೆಗಳು ತೀವ್ರ ಪ್ರತಿರೋಧದ ನಡುವೆಯೂ ಜುಲೈನಿಂದ ಭವಿಷ್ಯ ನಿಧಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುವುದನ್ನು ಭವಿಷ್ಯ ನಿಧಿ ಸಂಸ್ಥೆ (ಪಿಎಫ್ ಒ) ಅರಂಭಿಸಲಿದೆ.
ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಆರ್ಥಿಕ ಸುಧಾರಣೆಗಳ ಜಾರಿ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಪಿಎಫ್ ನಲ್ಲಿ 8 ಕೋಟಿ ಸದಸ್ಯರಿದ್ದು ರು.6 ಲಕ್ಷ ಕೋಟಿಗಳಿಗಿಂತಲೂ ಹೆಚ್ಚು ಹಣ ಹೊಂದಿದ್ದು ಜಗತ್ತಿನ ಅತಿದೊಡ್ಡ ನಿಧಿಗಳಲ್ಲಿ ಒಂದಾಗಿದೆ. ಹೆಚ್ಚಿನ ಆದಾಯ ಗಳಿಸುವ ಉದ್ದೇಶದಿಂದ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಕಾಣುವ ಷೇರುಗಳಲ್ಲಿ ಹೂಡಿಕೆ ಮಾಡಲಾಗುವುದು.
ಮೊದಲಿಗೆ ಶೇ.1ರಷ್ಟು ಹಣ ಹೂಡಿಕೆ ಮಾಡಲಿದ್ದು ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಶೇ.5ಕ್ಕೆ ಹೆಚ್ಚಿಸಲಾಗುವುದು ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಒಂದು ಹಣಕಾಸು ವರ್ಷದಲ್ಲಿ ರು.1 ಲಕ್ಷ ಕೋಟಿ ಹೂಡಿಕೆ ಮಾಡಲಾಗುವುದು. ಈ ಪೈಕಿ ರು.5 ಸಾವಿರ ಕೋಟಿಯನ್ನು ಜುಲೈ-ಮಾರ್ಚ್ ಅವಧಿಯಲ್ಲಿ ಷೇರುಗಳಲ್ಲಿ ತೊಡಗಿಸಲಾಗುವು ದು ಎಂದು ಇಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಶದಲ್ಲಿ ಆರ್ಥಿಕ ಸುಧಾರಣೆ ತರುವ ನಿಟ್ಟಿನಲ್ಲಿ ತೆರಿಗೆ ನೀತಿ, ಭೂಮಿ ಮತ್ತು ಕಾರ್ಮಿಕ
ಕಾಯ್ದೆಗಳಿಗೆ ತಿದ್ದುಪಡಿ ತರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯತಂತ್ರದ ಭಾಗವಾಗಿ ಈ ಕ್ರಮ ಜರುಗಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics