ಮುಂಬೈ: ದೀಪಾವಳಿ ಹಬ್ಬದ ಅಂಗವಾಗಿ ಒಂದು ಗಂಟೆ ಕಾಲ ನಡೆದ ಮುಹೂರ್ತ ವಹಿವಾಟು ದೇಶಿ ಷೇರು ಮಾರುಕಟ್ಟೆಗೆ ಶುಭ ಮುಹೂರ್ತ ತಂದಿದೆ. 2072ನೇ ಸಂವತ್ಸರದ ಮುಹೂರ್ತ ವಹಿವಾಟಿನಲ್ಲಿ ಸೆನ್ಸೆಕ್ಸ್ 123.69 ಅಂಕ ಏರಿಕೆಯೊಂದಿಗೆ 25,866.95ಕ್ಕೆ ತಲುಪಿತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 41.65 ಅಂಕ ಏರಿಕೆಯೊಂದಿಗೆ 7,825ಕ್ಕೆ ತಲುಪಿತು. ಕೇಂದ್ರ ಸರ್ಕಾರ 15 ಕ್ಷೇತ್ರಗಳಲ್ಲಿ ಎಫ್ಡಿಐ ನಿಯಮಗಳನ್ನು ಸಡಿಲಗೊಳಿಸಿದ್ದು ಹೂಡಿಕೆದಾರರನ್ನು ಉತ್ತೇಜಿಸಿತು. ಇದರಿಂದ ವರ್ತಕರು ಹೆಚ್ಚಿನ ಹೂಡಿಕೆಯಲ್ಲಿ ತೊಡಗಿದ್ದರು.
ಒಂದು ಗಂಟೆ ವಹಿವಾಟಿನಲ್ಲಿ ಆ್ಯಕ್ಸಿಸ್ ಬ್ಯಾಂಕ್, ಸನ್ ಫಾರ್ಮ, ಎಲ್‍ಅಂಡ್‍ಟಿ, ಟಾಟಾ ಸ್ಟೀಲ್, ಬಿಎಚ್‍ಇಎಲ್, ಕೋಲ್ ಇಂಡಿಯಾ, ಲುಪಿನ್, ಹಿಂಡಾಲ್ಕೊ, ವೇದಾಂತ, ಟಾಟಾ ಮೋಟಾರ್ಸ್, ಎಸ್‍ಬಿಐ ಮತ್ತು ಆರ್‍ಐಎಲ್ ಷೇರುಗಳು ಏರಿಕೆ ದಾಖಲಿಸಿದವು.
ಕೆಲವು ಹೂಡಿಕೆದಾರರು ಹೊಸ ಸಂವತ್ಸರದ ಮೊದಲ ದಿನ ಲಾಭ ಗಳಿಸಬೇಕೆಂದು ಸೂಚ್ಯಂಕಗಳು ಏರಿಕೆ ಕಂಡಿದ್ದಾಗ ಮಾರಾಟದಲ್ಲಿ ತೊಡಗಿದ್ದರಿಂದ ವಹಿವಾಟು ಆರಂಭದಲ್ಲಿನ ಏರಿಕೆ ಕೊನೆವರೆಗೂ ಇರಲಿಲ್ಲ.