ವಾಷಿಂಗ್ ಟನ್: ಇಷ್ಟು ದಿನ ಭಾರತ ಅತ್ಯಂತ ವಿಶ್ವಾಸಾರ್ಹ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಬಗ್ಗೆ ವರದಿಯಾಗುತ್ತಿತ್ತು. ಆದರೆ ನ್ಯೂಯಾರ್ಕ್ ಮೂಲದ ಸಲಹಾ ಸಂಸ್ಥೆ ಕ್ರೋಲ್ 2014-15ರ ಕಾರ್ಪೊರೇಟ್ ವಂಚನೆಯ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಭಾರತವೂ ಗುರುತಿಸಿಕೊಂಡಿದೆ.
ಅಚ್ಚರಿಯೆಂದರೆ ಭಾರತ ಅತಿ ಹೆಚ್ಚು ಕಾರ್ಪೊರೇಟ್ ವಂಚನೆಯನ್ನು ಹೊಂದಿರುವ ರಾಷ್ಟ್ರ ಎಂದು ವರದಿಯಲ್ಲಿ ಹೇಳಲಾಗಿದೆ. ಭ್ರಷ್ಟಾಚಾರ ಹಾಗೂ ಲಂಚ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕಂಡುಬರುತ್ತಿದ್ದು, ಅತಿ ಹೆಚ್ಚು ವಂಚನೆಗಳಿರುವ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ ಎಂದು ವರದಿ ಹೇಳಿದೆ.
ಕಾರ್ಪೊರೇಟ್ ಸಂಸ್ಥೆಗಳಲ್ಲಿ ವಂಚನೆ ನಡೆಯುತ್ತಿರುವುದರ ಬಗ್ಗೆ 770 ಹಿರಿಯ ಕಾರ್ಯನಿರ್ವಹಣಾಧಿಕಾರಿಗಳನ್ನು ಪ್ರಶ್ನೆ ಮಾಡಲಾಗಿತ್ತು. ಸಮೀಕ್ಷೆಗೆ ಒಳಪಟ್ಟವರ ಪೈಕಿ ಸುಮಾರು ಮುಕ್ಕಾಲು(ನಾಲ್ಕನೇಯ ಮೂರರಷ್ಟು) ಜನರು ತಮ್ಮ ಕಂಪನಿಗಳಲ್ಲಿ ಭ್ರಷ್ಟಾಚಾರ, ವಂಚನೆ ನಡೆಯುತ್ತಿರುವುದು ಕಂಡುಬಂದಿದೆ ಎಂದು ಹೇಳಿದ್ದಾಗಿ ಕ್ರೋಲ್ ಹೇಳಿದೆ.
ಭಾರತದ ರೀತಿಯ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೇ.80 ರಷ್ಟು ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಸಂಸ್ಥೆಯಲ್ಲಿ ವಂಚನೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಯೋಜನೆಗಳ ಕಳ್ಳತನ, ಅಕ್ರಮ ಹಣ ವರ್ಗಾವಣೆ ರೀತಿಯ ವಂಚನೆಗಳು ಹೆಚ್ಚಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.