ಗ್ರಾಹಕ ದರ ಹಣದುಬ್ಬರ ಏರಿಕೆ
ಆಹಾರ ಉತ್ಪನ್ನ, ಬೇಳೆ ಕಾಳು ಮತ್ತು ಪಾನೀಯ ದರಗಳು ಏರಿಕೆ ಕಂಡಿದ್ದರಿಂದ ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಹಕರ ದರ ಆಧರಿತ...
ನವದೆಹಲಿ: ಆಹಾರ ಉತ್ಪನ್ನ, ಬೇಳೆ ಕಾಳು ಮತ್ತು ಪಾನೀಯ ದರಗಳು ಏರಿಕೆ ಕಂಡಿದ್ದರಿಂದ ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಹಕರ ದರ ಆಧರಿತ (ಸಿಪಿಐ) ಹಣದುಬ್ಬರ ಪ್ರಮಾಣ ಶೇ.4.41ಕ್ಕೆ ಏರಿಕೆ ಕಂಡಿದೆ. ಇದರ ಹಿಂದಿನ ತಿಂಗಳು ಆಗಸ್ಟ್‍ನಲ್ಲಿ ಈ ಪ್ರಮಾಣ ಶೇ.3.74ರಷ್ಟಿತ್ತು.
ಆಗಸ್ಟ್ ತಿಂಗಳ ಹಣದುಬ್ಬರ ಪ್ರಮಾಣ ಶೇ.3.66ರಷ್ಟಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು. ಅದನ್ನೂ ಸಹ ಪರಿಷ್ಕರಿಸಿದ್ದು ಶೇ.3.37ಕ್ಕೆ ಹೆಚ್ಚಿದೆ. ಆದರೂ ಕಳೆದ ವರ್ಷದ ಆಗಸ್ಟ್ ನಲ್ಲಿದ್ದ ಶೇ.5.63ಕ್ಕೆ ಹೋಲಿಸಿದರೆ ಇಳಿಮುಖ ಕಂಡಿದೆ.
ಆಗಸ್ಟ್ ನಲ್ಲಿ ಆಹಾರ ಹಣದುಬ್ಬರ ಶೇ.2.20 ಇದ್ದದು ಸೆಪ್ಟೆಂಬರ್‍ನಲ್ಲಿ ಶೇ.3.88ಕ್ಕೆ ತಲುಪಿರುವುದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳು ಹೇಳಿವೆ.
ಸೆಪ್ಟೆಂಬರ್ ತಿಂಗಳಲ್ಲಿ ಆಹಾರ ಹಣದುಬ್ಬರ ಬಹುತೇಕ ದುಪ್ಪಟ್ಟಾಗಿದ್ದು ಶೇ.4.29ಕ್ಕೆ ಏರಿಕೆ ಕಂಡಿದೆ. ಬೇಳೆ ಕಾಳು ಮತ್ತು ಇತರ ಆಹಾರ ಉತ್ಪನ್ನಗಳ ದರಗಳು ಸಹ ದುಬಾರಿಯಾಗಿವೆ.
ಹಾಗಿದ್ದರೂ ಪ್ರೊಟೀನ್ ಹೆಚ್ಚಾಗಿರುವ ಮಾಂಸ ಮತ್ತು ಮೀನು ದರಗಳು ಇಳಿಮುಖ ಕಂಡಿದ್ದು ಶೇ.5.59ಕ್ಕೆ ಇಳಿದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹಾಲು, ಮೊಟ್ಟೆ ದರಗಳೂ ಕಡಿಮೆಯಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರ ಪ್ರಮಾಣ ಶೇ.5.05ಕ್ಕೆ ಏರಿದ್ದರೆ ನಗರ ಪ್ರದೇಶದಲ್ಲಿ ಶೇ.3.61ಕ್ಕೆ ತಲುಪಿದೆ.