ನವದೆಹಲಿ: ದೇಶದ ಅತಿದೊಡ್ಡ ಸಾಫ್ಟ್ ವೇರ್ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸೆಪ್ಟೆಂಬರ್‍ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ರು. 6,084.66 ಕೋಟಿ ನಿವ್ವಳ ಲಾಭಗಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಗಳಿಸಿದ್ದ ರು. 5,244.28 ಕೋಟಿಗೆ ಹೋಲಿಸಿದರೆ ಶೇ.16ರಷ್ಟು ಏರಿಕೆ ಕಂಡಿದೆ. ಭಾರತೀಯ ಆಡಿಟಿಂಗ್ ಪದ್ಧತಿಯಂತೆ ವರದಿಗಳನ್ನು ಮಂಡಿಸಲಾಗಿದ್ದು ಕಾರ್ಯಾಚರಣೆಯಿಂದ ಕಂಪನಿಯ ಒಟ್ಟಾರೆ ಆದಾಯದಲ್ಲಿ ಶೇ.14.06ರಷ್ಟು ಏರಿಕೆ ಕಂಡು ರು.27,165.48 ಕೋಟಿಗೆ ತಲುಪಿದೆ. ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು, ರಿಟೇಲ್, ವಿಮೆ ಸೇರಿದಂತೆ ಹಲವು ಕಂಪನಿಗಳಿಗೆ ನಮ್ಮ ಸೇವೆಗಳನ್ನು ವಿಸ್ತರಿಸಿದ್ದೇವೆ. ಕರೆನ್ಸಿ ಮೌಲ್ಯ ನಿಶ್ಚಿತ ದರದಲ್ಲಿ ಇಟ್ಟುಕೊಂಡು ವಹಿವಾಟು ನಡೆಸಿದ್ದು ಪ್ರಗತಿಯನ್ನು ಹೆಚ್ಚಿಸಿದೆ ಎಂದು ಕಂಪನಿ ಸಿಇಒ ಮತ್ತು ಎಂಡಿ ಎನ್.ಚಂದ್ರಶೇಖರನ್ ಹೇಳಿದ್ದಾರೆ.
ವೇಗವಾಗಿ ಆರ್ಥಿಕ ಅಭಿವೃದ್ಧಿ ಕಾಣುತ್ತಿರುವ ಲ್ಯಾಟಿನ್ ಅಮೆರಿಕ, ಭಾರತ ಮತ್ತು ಪೂರ್ವ ಏಷ್ಯಾ ದೇಶಗಳ ಜೊತೆಗೆ ಉತ್ತರ ಅಮೆರಿಕ, ಬ್ರಿಟನ್ ಮತ್ತು ಯೂರೊಪ್ ವಲಯಗಳು ಪ್ರಗತಿಯತ್ತ ಸಾಗಿರುವುದು ಕಂಪೆನಿ ನೆರವಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಸಿಬ್ಬಂದಿ ಸೇರಿದಂತೆ ಸಾಮರ್ಥ್ಯ ಬಳಕೆ ಪ್ರಮಾಣ ಶೇ.86ರಷ್ಟಿದ್ದು ಮಧ್ಯದಲ್ಲೇ ಕಂಪನಿ ಬಿಡುವವರ ಸಂಖ್ಯೆ ಶೇ.16.2ರಷ್ಟಿದೆ.