ವಾಣಿಜ್ಯ

ಎರಡನೇ ತ್ರೈಮಾಸಿಕ: ಏರ್ ಟೆಲ್ ಸಂಸ್ಥೆ ನಿವ್ವಳ ಲಾಭ ಶೇ.10 ರಷ್ಟು ಏರಿಕೆ

Srinivas Rao BV

ಮುಂಬೈ:ಅತಿ ಹೆಚ್ಚು ಮೊಬೈಲ್ ಗ್ರಾಹಕರನ್ನು ಹೊಂದಿರುವ ಭಾರತಿ ಏರ್ ಟೆಲ್ ಸಂಸ್ಥೆ ಎರಡನೇ ತ್ರೈಮಾಸಿಕದಲ್ಲಿ ಶೇ.10 ರಷ್ಟು ನಿವ್ವಳ ಲಾಭ ಗಳಿಸಿದೆ.
ಪ್ರತಿಸ್ಪರ್ಧಿ ಸಂಸ್ಥೆಗಳಿಗಿಂತ ಉತ್ತಮ ಡೇಟಾ ಸೌಲಭ್ಯ ಒದಗಿಸುತ್ತಿದ್ದು, ಏರ್ ಟೆಲ್ ಗ್ರಾಹಕರು ಅತಿ ಹೆಚ್ಚು ಡಾಟಾ ಬಳಕೆ ಮಾಡುತ್ತಿರುವುದು ಸಂಸ್ಥೆಗೆ ಲಾಭವಾಗಿ ಪರಿಣಮಿಸಿರುವುದು ನಿವ್ವಳ ಲಾಭ ಏರಿಕೆಗೆ ಪ್ರಮುಖ ಕಾರಣವಾಗಿದೆ. ಚೀನಾ ಬ್ರಾಂಡ್ ನ ಫೋನ್ ಗಳ ಪ್ರಸರಣದಿಂದಾಗಿ ಭಾರತದಲ್ಲಿ ಅತಿ ಹೆಚ್ಚು ಜನರು ಮೊಬೈಲ್ ನಲ್ಲಿ ಇಂಟರ್ ನೆಟ್ ಬಳಕೆ ಮಾಡುತ್ತಿದ್ದು, ವೇಗವಾದ ಡೌನ್ ಲೋಡ್ ಹಾಗೂ ಇಂಟರ್ ನೆಟ್ ಆಕ್ಸೆಸ್ ಗೆ ಬೇಡಿಕೆ ಹೆಚ್ಚಾಗಿದೆ.
ಏರ್ ಟೆಲ್ ಸಂಸ್ಥೆ ೪ ಜಿ ಮೂಲಕ ಅತಿ ಹೆಚ್ಚು ವೇಗದ ಇಂಟರ್ ನೆಟ್ ಸೌಲಭ್ಯ ಒದಗಿಸಿದೆ. ಭಾರತದಲ್ಲಿ ಸ್ಟಾರ್ಟ್ ಅಪ್ ಉದ್ಯಮಗಳು ಹೆಚ್ಚುತ್ತಿದ್ದು ಸ್ಥಿರ ಇಂಟರ್ನೆಟ್ ಸಂಪರ್ಕ ಒದಗಿಸುವ ಸಂಸ್ಥೆಯತ್ತ ಹೆಚ್ಚು ಒಲವು ತೋರುತ್ತಿರುವುದು ಸಹ ಏರ್ ಟೆಲ್ ನ ಬೇಡಿಕೆ ಹೆಚ್ಚು ಮಾಡಿದೆ. 
" ಹೈ ಸ್ಪೀಡ್ 4 ಜಿ ಸೇವೆಗಳನ್ನು ದೇಶದ 334 ಪಟ್ಟಣಗಳಲ್ಲಿ ಪರಿಚಯಿಸಿ, ವೇಗವಾಗಿ ಬೆಳೆಯುತ್ತಿರುವ ಡೇಟಾ ಮಾರುಕಟ್ಟೆ ಮೇಲೆ ಹತೋಟಿ ಸಾಧಿಸಿದ್ದೇವೆ ಎಂದು ಏರ್ ಟೆಲ್ ನ ಮುಖ್ಯ ಕಾರ್ಯನಿರ್ವಾಹಕ ಗೋಪಾಲ್ ವಿಠಲ್ ತಿಳಿಸಿದ್ದಾರೆ.
3 ಜಿ ದರದಲ್ಲೇ  4 ಜಿ ಸೇವೆಗಳನ್ನು ನೀಡುವುದಾಗಿ ಏರ್ ಟೆಲ್ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ  3 ಜಿ ಗ್ರಾಹಕರು 4 ಜಿಗೆ ವಲಸೆ ಹೋಗುತ್ತಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ

SCROLL FOR NEXT