ಬೆಂಗಳೂರು: ನನಗೆ ವಿಆರ್‍ಎಸ್ ಬೇಡ, ನಿವೃತ್ತಿಯಾಗುವವರೆಗೂ ಕೆಲಸ ಮಾಡಬೇಕು. ನನ್ನ ಸೇವೆಯನ್ನು ಹೆಮ್ಮೆಯಿಂದ ಮುಗಿಸಿ ನಮ್ಮ ನಡುವಿನವರೊಂದಿಗೆ ಗೌರವ ಉಳಿಸಿಕೊಳ್ಳುತ್ತೇನೆ. ಇದು ಎಚ್‍ಎಂಟಿ ವಾಚಸ್ ಕಾರ್ಮಿಕ ಕೆ.ಎಂ.ಲಕ್ಷಿ ್ಮನಾರಾಯಣ ಹೆಮ್ಮೆಯಿಂದ ಹೇಳುವ ಮಾತು. ದೇಶದ ಸಮಯ ಪಾಲಕ ಎಂದೇ ಟ್ಯಾಗ್‍ಲೈನ್ ಹೊಂದಿದ್ದ ಈ ಸಾರ್ವಜನಿಕ ಉದ್ದಿಮೆಯ ಶವಪೆಟ್ಟಿಗೆಗೆ ಕೇಂದ್ರ ಸರ್ಕಾರ ಬುಧವಾರ ಕೊನೆಯ ಮೊಳೆ ಹೊಡೆಯಿತು.
1961ರಲ್ಲಿ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು ಎಚ್‍ಎಂಟಿ ಕಾರ್ಖಾನೆಗೆ ಚಾಲನೆ ನೀಡಿದ್ದರು. ಜಪಾನ್‍ನ ಸಿಟಿಜನ್ ವಾಚ್‍ಕಂಪನಿ ಸಹಯೋಗದೊಂದಿಗೆ ಆರಂಭವಾದ ಎಚ್‍ಎಂಟಿ ಹೆಸರಿಗೆ ತಕ್ಕಂತೆ ದೇಶದ ಸಮಯ ಪಾಲಕನೇ ಆಗಿತ್ತು. ಈ ವಾಚುಗಳು ಈಗ ಸಂಗ್ರಹದ ವಸ್ತುಗಳಾಗಿವೆ. ಎಚ್‍ಎಂಟಿ ವಾಚಸ್, ಎಚ್‍ಎಂಟಿ ಚಿನಾರ್ ವಾಚಸ್ ಮತ್ತು ಎಚ್‍ಎಂಟಿ ಬೇರಿಂಗ್ಸ್ ಘಟಕಗಳನ್ನು ಮುಚ್ಚಲು ಕೇಂದ್ರ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಉಳಿದಿರುವ ಕಾರ್ಮಿಕರಿಗೆ ವಿಆರ್‍ಎಸ್ ಮತ್ತಿತರ ಬಾಬತ್ತಿಗೆಂದು ರು.427.48 ಕೋಟಿ ನೀಡಲು ಸಮ್ಮತಿ ಸೂಚಿಸಿದೆ.
ಎಚ್‍ಎಂಟಿ ವಾಚಸ್ ಘಟಕ ಬೆಂಗಳೂರಿನಲ್ಲಿದ್ದರೆ, ಎಚ್‍ಎಂಟಿ ಚಿನಾರ್ ವಾಚಸ್ ಘಟಕ ಉತ್ತರಾಖಂಡದ ರಾಣಿಭಾಗ್‍ನಲ್ಲಿದೆ. ಕಾಶ್ಮೀರ ಮತ್ತು ಜಮ್ಮುವಿನಲ್ಲಿನ ಘಟಕಗಳನ್ನು ಈಗಾಗಲೆ ಮುಚ್ಚಲಾಗಿದೆ. ಇನ್ನು ಎಚ್‍ಎಂಟಿ ಬೇರಿಂಗ್ಸ್ ಘಟಕ ಹೈದರಾಬಾದ್‍ನಲ್ಲಿದೆ. ಮೂರು ವರ್ಷಗಳಿಂದ ಸರ್ಕಾರ ನೀಡಿದ ಪ್ಯಾಕೇಜ್ ಪಡೆದು 835 ಕಾರ್ಮಿಕರು ಹೊರನಡೆದಿದ್ದಾರೆ.
ಇನ್ನು ಆರ್‍ಎಸ್ ಪಡೆಯದೇ ಉಳಿದಿರುವುದು 1,091 ಕಾರ್ಮಿಕರು ಮಾತ್ರ. ಈ ಪೈಕಿ ಬೆಂಗಳೂರು ಮತ್ತು ತುಮಕೂರಿನಲ್ಲಿ ಅತಿ ಹೆಚ್ಚು 1,004 ಕಾರ್ಮಿಕರಿದ್ದಾರೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಎಚ್‍ಎಂಟಿ ಮೆಷಿನ್ ಟೂಲ್ಸ್ ಮತ್ತು ಎಚ್‍ಎಂಟಿ ಇಂಟರ್‍ನ್ಯಾಷನಲ್ ಘಟಕಗಳನ್ನು ಪುನರ್ ರಚಿಸಲಾಗುತ್ತಿದೆ. ಆದರೆ ವಾಚ್ ಮತ್ತು ಬೇರಿಂಗ್ ಘಟಕಗಳನ್ನು ಬಿಡಲಾಗಿದೆ. ಈ ಘಟಕಗಳಿಗೆ ಸೇರಿದ ಸಾವಿರಾರು ಕೋಟಿ ರು. ಮೌಲ್ಯದ ಆಸ್ತಿ ಇದೆ.
ರು.22 ರಿಂದ ರು.55 ಲಕ್ಷ ವಿಆರ್ಎಸ್ ವಿಆರ್‍ಎಸ್‍ನಿಂದ ಪ್ರತಿ ಕಾರ್ಮಿಕರಿಗೆ ರು.22 ಲಕ್ಷದಿಂದ ರು.55 ಲಕ್ಷವರೆಗೂ ಪ್ಯಾಕೇಜ್ ಸಿಗಲಿದೆ. ಈ ಹಿಂದೆ ವಿಆರ್‍ಎಸ್ ಪಡೆದಿರುವವರು 1992ರ ವೇತನದಂತೆ ಪ್ಯಾಕೇಜ್ ಪಡೆದಿದ್ದಾರೆ. ಈಗ ಪಡೆಯುವವರಿಗೆ 2007ರ ವೇತನದಂತೆ ಪ್ಯಾಕೇಜ್ ನೀಡಲಾಗುವುದು. 5 ವರ್ಷಗಳಿಗಿಂತಲೂ ಕಡಿಮೆ ಸೇವಾ ಅವಧಿ ಉಳಿದಿರುವ 400ರಿಂದ 500 ಮಂದಿ ಕಾರ್ಮಿಕರಿದ್ದಾರೆ. ಹತ್ತು ವರ್ಷಗಳಿಗಿಂತ ಕಡಿಮೆ ಅವಧಿ ಹೊಂದಿರುವ ನೂರಕ್ಕೂ ಹೆಚ್ಚು ಮಂದಿ ಇದ್ದಾರೆ. ಉಳಿದವರ ಅವಧಿಯೂ ಹೆಚ್ಚು ಕಡಿಮೆ ಹತ್ತರಿಂದ ಹದಿನೈದು ವರ್ಷಗಳಿವೆ.