`ಇಂಡಿಯಾ ಎಲೆಕ್ಟ್ರಾನಿಕ್ಸ್ ವೀಕ್'ಗೆ ಚಾಲನೆ
ಪ್ರಸ್ತುತ ವಿದೇಶಗಳಿಂದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ, 2020ಕ್ಕೆ ವಿದೇಶಗಳಿಗೆ...
ಬೆಂಗಳೂರು: ಪ್ರಸ್ತುತ ವಿದೇಶಗಳಿಂದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ, 2020ಕ್ಕೆ ವಿದೇಶಗಳಿಗೆ ರಫ್ತು ಮಾಡುವ ಹಂತಕ್ಕೆ ಬೆಳೆಯಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ನಡೆಸಲಾಗಿದೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ಎಲ್ಸಿನಾ ಸಂಸ್ಥೆ ರಾಜ್ಯಸರ್ಕಾರದ ಸಹಯೋಗದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಸೋಮವಾರ ಆರಂಭವಾದ `ಇಂಡಿಯಾ ಎಲೆಕ್ಟ್ರಾನಿಕ್ಸ್ ವೀಕ್'ಗೆ ಚಾಲನೆ ನೀಡಿ ಮಾತನಾಡಿದರು. ಬೆಂಗಳೂರು ಮಾತ್ರವಲ್ಲದೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮೈಸೂರು, ಮಂಗಳೂರು, ಕಲ ಬುರಗಿ ಕೂಡ ಉದ್ಯಮಿ ಸ್ನೇಹಿಯಾಗಿವೆ. ಹೂಡಿಕೆದಾರರಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಉದ್ದಿಮೆದಾರರು ಇಲಾಖೆ ಅಧಿಕಾರಿಗಳು ಅಥವಾ ತಮ್ಮನ್ನೇ ಭೇಟಿ ಮಾಡಿ ನೆರವು ಪಡೆಯಬಹುದು ಎಂದರು.
ರಾಜ್ಯದಲ್ಲಿ 400ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿದ್ದು, ಕೌಶಲ್ಯಭರಿತ ಮಾನವ ಸಂಪನ್ಮೂಲವಿದೆ. ಕಡಿಮೆ ಬೆಲೆಯಲ್ಲಿ ಭೂಮಿ ಸಿಗುವ ಜತೆಗೆ ಹೂಡಿಕೆದಾರರ ಸ್ನೇಹಿ ವಾತಾವರಣವಿದೆ. ಐಟಿ-ಬಿಟಿ ಕ್ಷೇತ್ರದ ಸಾಧನೆಯಂತೆಯೇ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡುವ ಅವಕಾಶವಿದೆ ಎಂದರು. ಜಾಗತಿಕ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಭಾರತ ಕೇವಲ ಶೇ.8ರಷ್ಟು ಪಾಲು ಹೊಂದಿದೆ. 2020ರ ವೇಳೆಗೆ ಶೇ.20ರಿಂದ 25ರಷ್ಟು ಹೆಚ್ಚಿಸುವ ಮೂಲಕ ಎಲೆಕ್ಟ್ರಾನಿಕ್ಸ್ ಉದ್ಯಮ ಜಾಗತಿಕ ಮಟ್ಟದಲ್ಲಿ ಬೆಳೆಯಬೇಕಿದೆ ಎಂದರು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭ, ಎಲ್ಸಿನಾ ಅಧ್ಯಕ್ಷ ವಿಕ್ರಮ್ ದೇಸಾಯಿ ಮತ್ತಿತರರು ಇದ್ದರು.