ವಾಣಿಜ್ಯ

ಭಾರತ ದೇಶದ ಆರ್ಥಿಕತೆ ಉತ್ತಮ: ಐಎಂಎಫ್

Srinivasamurthy VN

ವಾಷಿಂಗ್ಟನ್: ಪ್ರಸಕ್ತ ಹಣಕಾಸು ಸಾಲಿನಲ್ಲಿ ದೇಶದ ಆರ್ಥಿಕ ಪ್ರಗತಿಯ ಅಂದಾಜನ್ನು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್ ) ಪರಿಷ್ಕರಿಸಿಲ್ಲ. ಈ ಹಿಂದೆ ಅಂದಾಜಿಸಿದ್ದ ಶೇ.7.3ರಷ್ಟು  ಇರಲಿದೆ ಎಂದು ಹೇಳಿದೆ.

ಮುಂದಿನ ಹಣಕಾಸು ಸಾಲಿನಲ್ಲಿ ಈ ಜಿಡಿಪಿ ಬೆಳವಣಿಗೆ ಶೇ.7.5ರಷ್ಟು ಇರಲಿದೆ ಎಂದು ಹೇಳಿದೆ. ಆದರೆ ವಿಶ್ವದ ಆರ್ಥಿಕ ಪ್ರಗತಿಯನ್ನು ಶೇ.3.4ಕ್ಕೆ ಇಳಿಸಿದೆ. ಐಎಂಎಫ್  ತನ್ನ ಅಪ್ ಡೇಟ್ ಮಾಡಿದ ವಿಶ್ವ ಆರ್ಥಿಕ ಮುನ್ನೋಟ ವರದಿ ಬಿಡುಗಡೆ ಮಾಡಿದ್ದು, ಪ್ರಸಕ್ತ ಹಣಕಾಸು ಸಾಲಿನಲ್ಲಿ ಚೀನಾದ ಆರ್ಥಿಕ ಪ್ರಗತಿ ಈ ವರ್ಷ ಶೇ.6.3ಕ್ಕೆ ಮತ್ತು ಮುಂದಿನ ಸಾಲಿನಲ್ಲಿ ಶೇ.6ಕ್ಕೆ ಕುಸಿಯುವ  ಸಾಧ್ಯತೆಗಳಿವೆ ಎಂದು ಅಂದಾಜಿಸಿದೆ. ಆದರೆ ಭಾರತದ ಅಭಿವೃದ್ಧಿ ಮೇಲೇರಲಿದೆ ಎಂದು ಹೇಳಿದೆ. ಭಾರತ ಮತ್ತು ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ಏಷ್ಯಾ ತನ್ನ ಬೆಳವಣಿಗೆ ವೇಗವನ್ನು ಮುಂದುವರೆಸಲಿವೆ.

ಚೀನಾದಲ್ಲಿನ ಆರ್ಥಿಕ ಕುಸಿತದಿಂದ ಕೆಲವು ದೇಶಗಳು ಹೆಚ್ಚಿನ ಸಮಸ್ಯೆ ಎದುರಿಸಲಿವೆ. ಜಾಗತಿಕ ತಯಾರಿಕಾವಲಯ ದುರ್ಬಲಗೊಳ್ಳಲಿದೆ ಎಂದು ಐಎಂಎಫ್ ಎಚ್ಚರಿಸಿದೆ. ವೇಗವಾಗಿ ಆರ್ಥಿಕ  ಅಭಿವೃದ್ಧಿ ಕಾಣುತ್ತಿರುವ ದೇಶಗಳಲ್ಲಿನ ನಿಧಾನಗತಿಯ ಬೆಳವಣಿಗೆ, ಚೀನಾದಲ್ಲಿನ ಹಿನ್ನಡೆ, ಸರಕು ಉತ್ಪನ್ನಗಳ ದರ ಇಳಿಮುಖ ಮತ್ತು ಅಮೆರಿಕ ಹಣಕಾಸು ನೀತಿಗಳನ್ನು ಇನ್ನಷ್ಟು ಬಿಗಿಗೊಳಿಸುವುದು ಸೇರಿದಂತೆ ಇನ್ನಷ್ಟು ಸಮಸ್ಯೆಗಳು ಜಾಗತಿಕ ಆರ್ಥಿಕ ಪ್ರಗತಿಗೆ ಎದುರಾಗಲಿವೆ. ಒಂದು ವೇಳೆ ಈ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದಿದ್ದಲ್ಲಿ ಜಾಗತಿಕ  ಆರ್ಥಿಕ ಪ್ರಗತಿ ಹಳಿ ತಪ್ಪಲಿದೆ ಎಂದು ಮುನ್ನೋಟದಲ್ಲಿ ವಿವರಿಸಿದೆ.

ಜಾಗತಿಕ ಆರ್ಥಿಕ ಪ್ರಗತಿಯಲ್ಲಿನ ಚೇತರಿಕೆ ಅದರಲ್ಲೂ ವಿಶೇಷವಾಗಿ ವೇಗದ ಅಭಿವೃದ್ಧಿ ಕಾಣುತ್ತಿರುವ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿ ಕಳೆದ ಅಕ್ಟೋಬರ್‍ನಲ್ಲಿ ಅಂದಾಜಿಸಿದ್ದಕ್ಕಿಂತಲೂ ನಿಧಾನಗತಿಯಲ್ಲಿರಲಿದೆ ಎಂದು ಮುನ್ನೋಟ ವರದಿ ಹೇಳಿದೆ. ಉತ್ಪಾದನೆಯಲ್ಲಿನ ಅಂತರ  ಹಂತಹಂತವಾಗಿ ಕಡಿಮೆಯಾಗುವುದರಿಂದ ಮುಂದುವರೆದ ದೇಶಗಳಲ್ಲಿ ಸುಧಾರಿತ ಮತ್ತು  ಅಸಾಮಾನ್ಯ ಪ್ರಗತಿ ಮುಂದುವರೆಯಲಿದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಈ ಚಿತ್ರಣ ಭಿನ್ನವಾಗಿದ್ದರೆ ಇನ್ನು ಕೆಲವು ದೇಶಗಳಲ್ಲಿ ಸವಾಲಿನಿಂದ ಕೂಡಿರಲಿದೆ.

ಹಂತ ಹಂತವಾಗಿ ಇಳಿಮುಖ, ಚೀನಾದಲ್ಲಿನ ಆರ್ಥಿಕ ಚಟುವಟಿಕೆಗಳನ್ನು ಹೂಡಿಕೆಯಿಂದ ತಯಾರಿಕೆ ಮತ್ತು ಬಳಕೆ ಆರ್ಥಿಕತೆಯತ್ತ ಸಮತೋಲ ನಗೊಳಿಸುವಂತಹ ಪ್ರಮುಖ ಘಟ್ಟಗಳು ಜಾಗತಿಕ ಆರ್ಥಿಕತೆಯ ಮೇಲೆ ಪ್ರಭಾವ ಬೀರಲಿವೆ. ಇಂಧನ ಮತ್ತು ಸರಕುಗಳ ದರಗಳಲ್ಲಿ ಇಳಿಮುಖ, ಅಮೆರಿಕ ದಲ್ಲಿ ಆರ್ಥಿಕ ಪ್ರಗತಿ ಚೇತರಿಕೆ ಕಾಣುತ್ತಿರುವುದು ಸಹ ಪ್ರಗತಿ ಮೇಲೆ ತನ್ನದೇ ಪರಿಣಾಮ ತೋರಲಿವೆ ಎಂದು ವರದಿಯಲ್ಲಿ ವಿವರಿಸಿದೆ.

SCROLL FOR NEXT