ಲಂಡನ್: ಬ್ರೆಕ್ಸಿಟ್ ಪರಿಣಾಮದಿಂದಾಗಿ ಯುಕೆಯಲ್ಲಿರುವ ಟಾಟಾ ಉಕ್ಕು ಕಾರ್ಖಾನೆಯನ್ನು ಮಾರಾಟ ಮಾಡುವ ಪ್ರಸ್ತಾವನೆಯನ್ನು ಸಂಸ್ಥೆ ತಡೆಹಿಡಿದಿದ್ದು ಜಂಟಿ ಸಹಯೋಗದಲ್ಲಿ ಮುನ್ನಡೆಸುವ ಚಿಂತನೆ ನಡೆಸಿದೆ.
ಜಂಟಿ ಸಹಯೋಗದಲ್ಲಿ ಸಂಸ್ಥೆಯನ್ನು ಮುನ್ನಡೆಸುವ ಯೋಜನೆ ಹೊಂದಿರುವ ಟಾಟಾ ಕಂಪನಿ ಪಾಲುದಾರನಿಗಾಗಿ ಹುಡುಕಾಟ ನಡೆಸಿದೆ. ಬ್ರಿಟನ್ ನ ಸ್ಟೀಲ್ ಸಂಸ್ಥೆ 3 ಬಿಲಿಯನ್ ಡಾಲರ್ ನಷ್ಟ ಅನುಭವಿಸಿರುವುದರಿಂದ ಅಲ್ಲಿನ ಉಕ್ಕು ಕಾರ್ಖಾನೆ ಘಟಕವನ್ನು ಮಾರಾಟ ಮಾಡಲು ಮಾರ್ಚ್ ನಲ್ಲಿ ಟಾಟಾ ಸಂಸ್ಥೆ ನಿರ್ಧರಿಸಿತ್ತು. ಆದರೆ ರಾಯಟರ್ಸ್ ಪ್ರಕಟಿಸಿರುವ ಮಾಹಿತಿ ಪ್ರಕಾರ ಉಕ್ಕು ಕಾರ್ಖಾನೆಯನ್ನು ಮಾರಾಟ ಮಾಡುವ ಪ್ರಸ್ತಾವನೆಯನ್ನು ಟಾಟಾ ತಡೆಹಿಡಿದಿದೆ ಎಂದು ತಿಳಿದುಬಂದಿದೆ.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದಿರುವುದರಿಂದ ಇಂಗ್ಲೆಂಡ್ ಪಿಂಚಣಿ ಯೋಜನೆಯಲ್ಲಿ ಬದಲಾವಣೆ ನಿರೀಕ್ಷಿಸಲಾಗಿದ್ದು, ಇದರಿಂದ ಟಾಟಾ ಸ್ಟೀಲ್ನ ಉದ್ಯೋಗಿಗಳಿಗೆ ಪಿಂಚಣಿ ಪಾವತಿ ಮೊತ್ತವೂ ಕಡಿಮೆಯಾಗಲಿದೆ. ಈ ಹಿನ್ನೆಲೆಯಲ್ಲಿ ನಷ್ಟದಲ್ಲಿರುವ ಸಂಸ್ಥೆಗೆ ಆರ್ಥಿಕ ಹೊರೆ ತಗ್ಗಲಿರುವುದು ಮಾರಾಟದ ಚಿಮ್ತಾನೇಮದ ಹಿಂದೆಸರಿಯಲು ಪ್ರಮುಖ ಕಾರಣವಾಗಿದೆ. ಸಂಪೂರ್ಣವಾಗಿ ಮಾರಾಟ ಮಾಡುವ ಬಾಡಲು ಪಾಲುದಾರಿಕೆಯಲ್ಲಿ ಉಕ್ಕು ಘಟಕವನ್ನು ನಡೆಸಲು ಟಾಟಾ ಸಂಸ್ಥೆ ಉತ್ಸಾಹ ತೋರಿದ್ದು ಟಿಸ್ಸನ್ ಕ್ರುಪ್ ಸಂಸ್ಥೆ ಸೇರಿದಂತೆ ಹಲವು ಕಂಪನಿಗಳೊಂದಿಗೆ ಪಾಲುದಾರಿಕೆ ವಿಷಯವಾಗಿ ಮಾತುಕತೆ ನಡೆಸುತ್ತಿದ್ದು, ಜರ್ಮನಿ ಮೂಲದ ಸಂಸ್ಥೆಯು ಟಾಟಾದೊಂದಿಗೆ ಪಾಲುದಾರಿಕೆ ಒಪ್ಪಂದಕ್ಕೆ ಮುಂದಾಗಲು ಉತ್ಸಾಹ ತೋರಿದೆ.