ವಾಣಿಜ್ಯ

ದೇಶವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ ಯಶಸ್ವಿ: ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ

Sumana Upadhyaya
ನವದೆಹಲಿ: ಕೇಂದ್ರ ಸರ್ಕಾರದ ಬ್ಯಾಂಕ್ ನೀತಿಗಳನ್ನು ವಿರೋಧಿಸಿ ಬ್ಯಾಂಕ್ ನೌಕರರ ಒಕ್ಕೂಟ ಇಂದು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ ಯಶಸ್ವಿಯಾಗಿದೆ. 
ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ 9 ವ್ಯಾಪಾರ ಒಕ್ಕೂಟವಾದ ಸಂಯುಕ್ತ ಬ್ಯಾಂಕ್ ಒಕ್ಕೂಟಗಳ ವೇದಿಕೆ ಕರೆ ನೀಡಿದ್ದ ಬಂದ್ ನಲ್ಲಿ ಸುಮಾರು 10 ಲಕ್ಷ ನೌಕರರು ಭಾಗವಹಿಸಿದ್ದರು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟದ ಸದಸ್ಯರೊಬ್ಬರು ತಿಳಿಸಿದ್ದಾರೆ.
ದೇಶಾದ್ಯಂತ ಬ್ಯಾಂಕ್ ಗಳಲ್ಲಿ ಸುಮಾರು 20 ಸಾವಿರ ಕೋಟಿ ಮೊತ್ತದ 26 ಲಕ್ಷ ಬ್ಯಾಂಕ್ ವಹಿವಾಟು ಸ್ಥಗಿತಗೊಂಡಿತ್ತು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಮ್ ತಿಳಿಸಿದ್ದಾರೆ.
ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಇಂದು ದೇಶಾದ್ಯಂತ ಬ್ಯಾಂಕುಗಳಲ್ಲಿ ಮೂಲ ಅಗತ್ಯ ವ್ಯವಹಾರಗಳಿಗೆ ತೊಂದರೆಯುಂಟಾಯಿತು. 
 ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ ಮತ್ತು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಆಗಸ್ಟ್ 4 ಮತ್ತು 5ರಂದು ಹೈದರಾಬಾದ್ ನಲ್ಲಿ ಸಭೆ ಸೇರಿ ತಮ್ಮ ಬೇಡಿಕೆ ಈಡೇರುವವರೆಗೆ ಮುಂದಿನ ದಿನಗಳಲ್ಲಿ ಹೋರಾಟ ಮುಂದುವರಿಸುವ ಕುರಿತು ರೂಪುರೇಷೆ ಸಿದ್ದಪಡಿಸಲಿವೆ.
ಬ್ಯಾಂಕಿಂಗ್ ವಲಯದಲ್ಲಿ ಪ್ರತಿಗಾಮಿ ಸುಧಾರಣೆಗಳನ್ನು ನಿಲ್ಲಿಸುವಂತೆ, ಬ್ಯಾಂಕ್ ಗಳ ಖಾಸಗೀಕರಣ ಮಾಡದಂತೆ, ಸಾರ್ವಜನಿಕ ವಲಯ ಬ್ಯಾಂಕ್ ಗಳಲ್ಲಿ ಖಾಸಗಿ ಹಣವನ್ನು ಹೆಚ್ಚಿಸದಂತೆ, ಬ್ಯಾಂಕಿಂಗ್ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ವಿರೋಧ, ಕಾರ್ಪೊರೇಟ್ ಕಂಪೆನಿಗಳಿಗೆ ಬ್ಯಾಂಕ್ ಆರಂಭಕ್ಕೆ ಅನುಮತಿ ನೀಡದಂತೆ ಮೊದಲಾದವುಗಳನ್ನು ಇಟ್ಟುಕೊಂಡು ಮುಷ್ಕರ ನಡೆಸಿದ್ದವು. ಖಾಸಗಿಯವರಿಗೆ ಸಣ್ಣ ಮತ್ತು ಪೇಮೆಂಟ್ ಬ್ಯಾಂಕ್ ಗಳನ್ನು ಆರಂಭಿಸಲು ಅನುಮತಿ ನೀಡದಂತೆ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡದಂತೆ, ಬ್ಯಾಂಕ್ ಗಳ ವಿಲೀನ, ಬ್ಯಾಂಕುಗಳಲ್ಲಿ ಪ್ರಾಮುಖ್ಯ ವಲಯದ ಸಾಲಗಳನ್ನು ದುರ್ಬಲಗೊಳಿಸದಂತೆ ಬೇಡಿಕೆಗಳನ್ನಿಟ್ಟಿವೆ ಒಕ್ಕೂಟಗಳು.
SCROLL FOR NEXT