ವಾಣಿಜ್ಯ

ಮಲ್ಯ ಅವರನ್ನು ಪ್ರಶ್ನಿಸುವಂತೆ ಏರ್ ಲೈನ್ಸ್ ನಷ್ಟದ ಬಗ್ಗೆ ಏಕೆ ಪ್ರಶ್ನಿಸುವುದಿಲ್ಲ?: ಮೋಹನ್ ದಾಸ್ ಪೈ

Srinivas Rao BV

ಹೈದರಾಬಾದ್: ಸಾಲ ಪಾವತಿ ಮಾಡಲಾಗದೇ ಸುಸ್ತಿದಾರರಾಗಿರುವ ವಿಜಯ್ ಮಲ್ಯ ಪ್ರಕರಣ ಸದ್ದು ಮಾಡುತ್ತಿರುವಾಗಲೇ, ಇನ್ ಫೋಸಿಸ್ ನ ಮಾಜಿ ನಿರ್ದೇಶಕ ಮೋಹನ್ ದಾಸ್ ಪೈ,  ಕೇವಲ ಮಲ್ಯ ಅವರನ್ನೇ ಏಕೆ ಪ್ರಶ್ನಿಸುತ್ತೀರಿ, ಏರ್ ಇಂಡಿಯಾದ ಬೃಹತ್ ಪ್ರಮಾಣದ ನಷ್ಟದ ಬಗ್ಗೆ ಯಾರೂ ಏಕೆ ಪ್ರಶ್ನಿಸುವುದಿಲ್ಲ ಎಂದು ಕೇಳಿದ್ದಾರೆ.

ಬ್ಯಾಂಕ್ ಗಳು ನೀಡಿರುವ ಸಾಲ ವಾಪಸ್ ಪಡೆದುಕೊಳ್ಳಲು ಅಥವಾ ಇಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಿಒಕೊಳ್ಳಲು ವ್ಯವಸ್ಥೆಯೊಂದನ್ನು ಜಾರಿ ಮಾಡಬೇಕು ಎಂದು ಅಭಿಪ್ರಾಯಪಟ್ಟಿರುವ ಮೋಹನ್ ದಾಸ್ ಪೈ, ಕಿಂಗ್ ಫಿಷರ್ ಏರ್ ಲೈನ್ಸ್ ನಷ್ಟಕ್ಕೆ ಮಲ್ಯ ಅವರನ್ನು ಹೊಣೆ ಮಾಡಿ ಪ್ರಶ್ನಿಸುತ್ತಿರುವಂತೆಯೇ ಏರ್ ಇಂಡಿಯಾ ನಷ್ಟಕ್ಕೆ ಹೊಣೆಯಾದವರನ್ನು ಏಕೆ ಪ್ರಶ್ನಿಸುವುದಿಲ್ಲ ಎಂದು ಕೇಳಿದ್ದಾರೆ.

ಏರ್ ಇಂಡಿಯಾ ಸುಮಾರು 30 ,000 ಕೋಟಿ ನಷ್ಟ ಅನುಭವಿಸಿದೆ. 10 ,000 ಕೋಟಿ ಕಳೆದುಕೊಂಡ ವಿಜಯ್ ಮಲ್ಯಾಗೂ 30 ,000 ಕೋಟಿ ಕಳೆದುಕೊಂಡ ಏರ್ ಇಂದಿಯಾಗೂ ವ್ಯತ್ಯಾಸವೇನು? ಕಿಂಗ್ ಫಿಷರ್ ನಲ್ಲಿ ನಷ್ಟವಾಗಿದ್ದು ಬ್ಯಾಂಕ್ ನ ಹಣವಾದರೆ ಏರ್ ಇಂಡಿಯಾದ ಪ್ರಕರಣದಲ್ಲಿ ನಷ್ಟವಾಗಿದ್ದು ಸಾರ್ವಜನಿಕರ ತೆರಿಗೆ ಹಣ ಎಂದು ಮೋಹನ್ ದಾಸ್ ಪೈ ಹೇಳಿದ್ದಾರೆ.  

ಬ್ಯಾಂಕ್ ಸಾಲ ಮರುಪಾವತಿ ಮಾಡದೇ ಇರುವುದಕ್ಕೆ ಮಲ್ಯ ಅವರನ್ನು ಪ್ರಶ್ನಿಸುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಸಂಸ್ಥೆ ಏರ್ ಇಂಡಿಯಾ ನಷ್ಟ ಉಂಟು ಮಾಡಿದರೆ ಸಮಸ್ಯೆ ಇಲ್ಲವೇ? ಈ ಬಗ್ಗೆ ಸರ್ಕಾರ ಮೌನಾವಾಗಿದೆ ಏನನ್ನೂ ಮಾತನಾಡುತ್ತಿಲ್ಲ, ಸರ್ಕಾರದಂತೆ ಮಾಧ್ಯಮಗಳು ಈ ಬಗ್ಗೆ ಮೌನವಾಗಿವೆ. ಇಬ್ಬರೂ ತಪ್ಪು ಮಾಡಿದ್ದಾರೆ ಆದರೆ ಒಬ್ಬರನ್ನು ಮಾತ್ರ ಪ್ರಶ್ನಿಸುವುದು ಕಪಟತನ ಎಂದು ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT