ವಾಣಿಜ್ಯ

ಸಣ್ಣ ಉಳಿತಾಯ ಮೇಲಿನ ಬಡ್ಡಿದರ ಕಡಿತ: ಏಪ್ರಿಲ್ ನಿಂದ ಜಾರಿ

Sumana Upadhyaya

ನವದೆಹಲಿ: ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರಿಗೆ ಇಲ್ಲೊಂದು ಕಹಿ ಸುದ್ದಿಯಿದೆ.ಕೇಂದ್ರ ಸರ್ಕಾರ ಕೆಲವು ಸಣ್ಣ ಹೂಡಿಕೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. ಪರಿಷ್ಕೃತ ದರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.

ಪಿಪಿಎಫ್ ಖಾತೆಯ ಬಡ್ಡಿದರವನ್ನು ಶೇಕಡಾ 8.7ರಿಂದ ಶೇಕಡಾ 8.1ಕ್ಕೆ ಕಡಿತಗೊಳಿಸಿದೆ. ಕಿಸಾನ್ ವಿಕಾಸ್ ಪತ್ರದ ಬಡ್ಡಿದರವನ್ನು ಶೇಕಡಾ 8.7ರಿಂದ ಶೇಕಡಾ 7.8ಕ್ಕೆ, ಅಂಚೆ ಕಚೇರಿಯಲ್ಲಿ ಒಂದು ವರ್ಷದ ಅವಧಿಗೆ ಠೇವಣಿ ಮೇಲಿನ ಬಡ್ಡಿ ಹಣವನ್ನು ಶೇಕಡಾ 8.4ರಿಂದ ಶೇಕಡಾ 7.1ಕ್ಕೆ, 2 ವರ್ಷಗಳ ಅವಧಿಯ ಠೇವಣಿ ಬಡ್ಡಿದರವನ್ನು ಶೇಕಡಾ 8.4ರಿಂದ ಶೇಕಡಾ 7.2ಕ್ಕೆ, ಮೂರು ವರ್ಷಗಳ ಅವಧಿಯ ಠೇವಣಿಗೆ ಶೇಕಡಾ 8.4ರಿಂದ ಶೇಕಡಾ 7.4ಕ್ಕೆ, 5 ವರ್ಷಗಳ ಅವಧಿಯ ಠೇವಣಿ ಹಣದ ಮೇಲಿನ ಬಡ್ಡಿದರವನ್ನು ಶೇಕಡಾ 8.5ರಿಂದ ಶೇಕಡಾ 7.9ಕ್ಕೆ ಕಡಿತ ಮಾಡಲಾಗಿದೆ.

ಇನ್ನು 5 ವರ್ಷಗಳ ಅವಧಿಯ ನ್ಯಾಶನಲ್ ಸೇವಿಂಗ್ಸ್ ಸರ್ಟಿಫಿಕೇಟ್ ನ ಮೇಲಿನ ಬಡ್ಡಿದರ ಶೇಕಡಾ 8.1 ಎಂದು ನಿಗದಿಪಡಿಸಲಾಗಿದೆ. ಹಿರಿಯ ನಾಗರಿಕರಿಗೆ 5 ವರ್ಷಗಳ ಯೋಜನೆಯ ಬಡ್ಡಿದರವನ್ನು ಶೇಕಡಾ 9.3ರಿಂದ ಶೇಕಡಾ 8.6ಕ್ಕೆ ಇಳಿಸಲಾಗಿದೆ. ಹೆಣ್ಣು ಮಕ್ಕಳ ಹೆಸರಿನಲ್ಲಿರುವ ಯೋಜನೆಗಳ ಮೇಲಿನ ಬಡ್ಡಿದರವನ್ನು ಶೇಕಡಾ 9.2ರಿಂದ ಶೇಕಡಾ 8.6ಕ್ಕೆ ಕಡಿತ ಮಾಡಲಾಗಿದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಮೇಲಿನ ಬಡ್ಡಿದರ ಬದಲಾಗದೆ ಯಥಾಪ್ರಕಾರ ಶೇಕಡಾ 4ರಷ್ಟು ಇರಿಸಲಾಗಿದೆ.

ಮಾರುಕಟ್ಟೆ ದರಗಳಿಗೆ ಹತ್ತಿರ ತರಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಕೇಂದ್ರ ಸರ್ಕಾರ ಬಡ್ಡಿದರವನ್ನು ಪರಿಷ್ಕರಿಸುತ್ತದೆ.

SCROLL FOR NEXT